ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿಗೆ 2ಎ ಮೀಸಲಾತಿ: ಡಿ.5ರಂದು ಸರ್ವಪಕ್ಷಗಳ ಶಾಸಕರ ಸಭೆ- ಕೂಡಲಸಂಗಮ ಶ್ರೀ

Published 30 ನವೆಂಬರ್ 2023, 10:51 IST
Last Updated 30 ನವೆಂಬರ್ 2023, 10:51 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ಪಡೆಯುವುದಕ್ಕಾಗಿ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆಯಲು ಡಿಸೆಂಬರ್‌ 5ರಂದು ಬೆಳಗಾವಿಯಲ್ಲಿ ಸರ್ವಪಕ್ಷಗಳಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಶಾಸಕರು ಮತ್ತು ಮಾಜಿ ಶಾಸಕರ ಸಭೆ ನಡೆಸುತ್ತೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿ ಗುರುವಾರ ನಡೆದ ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಣಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಬಿಜೆಪಿ ಸರ್ಕಾರ ನಮಗೆ ನೀಡಿದ್ದ ‘2ಡಿ’ ಮೀಸಲಾತಿ ತೃಪ್ತಿ ತಂದಿಲ್ಲ. ಹೋರಾಟ ಮಾಡದೇ ನಮಗೆ ನ್ಯಾಯ ಸಿಗುವುದಿಲ್ಲ ಎಂದು ನಮಗೆ ಅರಿವಾಗಿದೆ. ಹಾಗಾಗಿ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ಆರಂಭಿಸಿದ್ದೇವೆ. ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ್ದೇವೆ. ಆದರೂ, ನ್ಯಾಯ ಸಿಕ್ಕಿಲ್ಲ. ಹಾಗಾಗಿ ಇಂದು ಕಾರ್ಯಕಾರಿಣಿ ನಡೆಸಿ, 5ರಂದು ನಮ್ಮ ಸಮುದಾಯದ ಶಾಸಕರು ಮತ್ತು ಮಾಜಿ ಶಾಸಕರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಆಹ್ವಾನಿಸುತ್ತೇವೆ. ಅವರನ್ನು ಕರೆತರುವ ಜವಾಬ್ದಾರಿ ಐವರು ಸಚಿವರಿಗೆ ವಹಿಸಿದ್ದೇವೆ. ಆ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ’ ಎಂದರು.

‘ಡಿ.4ರಿಂದ 15ರವರೆಗೆ ಅಧಿವೇಶನ ನಡೆಯಲಿದೆ. ನಾವು 14ರೊಳಗಾಗಿ ಸೌಧದ ಮುಂಭಾಗದಲ್ಲಿ ಪ್ರತಿಭಟಿಸಿ, ಇಷ್ಟಲಿಂಗ ಪೂಜೆ ಮಾಡುತ್ತೇವೆ. ಆದರೂ, ನ್ಯಾಯ ಸಿಗದಿದ್ದರೆ ರಾಜ್ಯಮಟ್ಟದ ಸಮಾವೇಶ ಮಾಡುತ್ತೇವೆ’ ಎಂದು ಹೇಳಿದರು.

‘ಮೀಸಲಾತಿ ಸಿಗದಿದ್ದರೆ, ನಿಮ್ಮ ಸಮುದಾಯದ ಶಾಸಕರು ರಾಜೀನಾಮೆ ಕೊಡುತ್ತಾರಾ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಶಾಸಕರ ರಾಜೀನಾಮೆಯಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅಧಿಕಾರದಲ್ಲಿ ಇದ್ದುಕೊಂಡೇ ಶಾಸಕರು ನಮಗೆ ನ್ಯಾಯ ಒದಗಿಸಲಿ. ಕೆಲವು ಶಾಸಕರು ರಾಜೀನಾಮೆ ಕೊಡುತ್ತೇವೆ ಎಂದಿದ್ದರು. ಆದರೆ, ನಾನೇ ಬೇಡ ಎಂದಿದ್ದೆ. ಒಳಗಿದ್ದುಕೊಂಡೇ ಹೋರಾಟ ಮಾಡಿ ಎಂದು ಹೇಳಿರುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT