ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ವಾಹನಗಳ ನಿಲುಗಡೆಗಿಲ್ಲ ಅವಕಾಶ: ಜನರ ಪರದಾಟ

ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್‌ ಮುಖ್ಯರಸ್ತೆಗೆ ಸಂಪರ್ಕ ಮಾರ್ಗದಲ್ಲಿ ಸಮಸ್ಯೆ
ರವಿಕುಮಾರ ಹುಲಕುಂದ
Published 11 ಮಾರ್ಚ್ 2024, 4:52 IST
Last Updated 11 ಮಾರ್ಚ್ 2024, 4:52 IST
ಅಕ್ಷರ ಗಾತ್ರ

ಬೈಲಹೊಂಗಲ: ಇಲ್ಲಿನ ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ನಿರ್ಮಿಸಿದ ಅವೈಜ್ಞಾನಿಕ ಕಾಂಕ್ರೀಟ್ ರಸ್ತೆಯಿಂದ ವಾಹನ ಸವಾರರು, ಪಾದಚಾರಿಗಳು ಮತ್ತು ಮೌನೇಶ್ವರ ನಗರದ ನಿವಾಸಿಗಳು ಪರದಾಡುವಂತಾಗಿದೆ.

ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್ ರಸ್ತೆ ತ್ವರಿತವಾಗಿ ತಲುಪಲು, ಬಜಾರ್‌ ರಸ್ತೆ ಬಿಟ್ಟರೆ ಇರುವ ಪ್ರಮುಖ ರಸ್ತೆ ಇದು. ಬಜಾರ್‌ ರಸ್ತೆ ಇಕ್ಕಟ್ಟಿನಿಂದ ಕೂಡಿದೆ. ಹಾಗಾಗಿ ಜನರು ಹೆಚ್ಚಾಗಿ ಇದೇ ಮಾರ್ಗ ಅವಲಂಬಿಸಿದ್ದಾರೆ. ಈ ರಸ್ತೆಯಲ್ಲೇ ಎರಡು ಮುಖ್ಯ ದೇವಸ್ಥಾನಗಳಿರುವ ಕಾರಣ, ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಬೆಳವಡಿ, ಕೆಂಗಾನೂರ, ನಯಾನಗರ, ಆನಿಗೋಳ ಕಡೆಯಿಂದ ಖಾಸಗಿ ವಾಹನಗಳಲ್ಲಿ ಬರುವವರು ಶಿಕ್ಷಣಕ್ಕಾಗಿ ಇಂಚಲಕ್ಕಾಗಿ ಇದೇ ಮಾರ್ಗದಲ್ಲಿ ಸಾಗುತ್ತಾರೆ. ರಸ್ತೆಬದಿಯೇ ಹಲವರ ಮನೆಗಳೂ ಇವೆ. ಹಾಗಾಗಿ ದಿನವಿಡೀ ವಾಹನದಟ್ಟಣೆ ಇರುತ್ತದೆ.

ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲೆಂದು ಬೈಲಹೊಂಗಲ ಪುರಸಭೆಯವರು ₹3.5 ಕೋಟಿ ವೆಚ್ಚದಲ್ಲಿ ಈ ರಸ್ತೆ ನಿರ್ಮಿಸಿದ್ದಾರೆ. ಆದರೆ, ರಸ್ತೆಬದಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಲ್ಲ. ಇದು ವಾಹನ ಸವಾರರಿಗಷ್ಟೇ ಅಲ್ಲ; ಸ್ಥಳೀಯರಿಗೂ ಸಂಕಷ್ಟ ತಂದಿದೆ.

ರಸ್ತೆಯಲ್ಲೇ ಪಾರ್ಕಿಂಗ್‌!:  ಎರಡು ಕಿ.ಮೀ ದೂರದ ಈ ರಸ್ತೆಯಲ್ಲಿ ಕೆಲವೆಡೆ ಮಾತ್ರ ಪಾದಚಾರಿ ಮಾರ್ಗ ನಿರ್ಮಾಣವಾಗಿದೆ. ಇನ್ನೂ ಕೆಲವೆಡೆ ರಸ್ತೆಯಷ್ಟೇ ನಿರ್ಮಿಸಲಾಗಿದೆ. ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸದ ಕಾರಣ, ಜನರು ತಮ್ಮ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳ ವಾಹನಗಳು, ಟ್ರ್ಯಾಕ್ಟರ್‌ಗಳು ಮತ್ತು ಚಕ್ಕಡಿಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತಿದ್ದಾರೆ. ಕೆಲವರು ಕೃಷಿ ಪರಿಕರಗಳನ್ನೂ ರಸ್ತೆಯಲ್ಲೇ ಇರಿಸುತ್ತಿದ್ದಾರೆ. ಇದರಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸವಾರರು ಇಕ್ಕಟ್ಟಾದ ರಸ್ತೆಯಲ್ಲಿ ಪ್ರಯಾಸಪಡುತ್ತ ಸಂಚರಿಸುವಂತಾಗಿದೆ.

‘ಈ ರಸ್ತೆ ಪಟ್ಟಣದ ಹೃದಯಭಾಗದಲ್ಲೇ ಇದೆ. ನಿತ್ಯ ಹಲವು ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ, ಸಮಸ್ಯೆ ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂಬುದು ಜನರ ದೂರು.

ಒಂದೆಡೆ ವಾಹನಗಳ ನಿಲುಗಡೆಗೆ ಸಿಗದ ಅವಕಾಶ; ಮತ್ತೊಂದೆಡೆ ರಸ್ತೆ ಮಧ್ಯದಲ್ಲೇ ಬೇಕಾಬಿಟ್ಟಿಯಾಗಿ ಬೀದಿದೀಪಗಳ ಕಂಬ ಅಳವಡಿಕೆಯಿಂದ ಸವಾರರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.

ಸ್ಥಳೀಯರ ಪರದಾಟ: ‘ಈಗ ನಿರ್ಮಿಸಿದ ರಸ್ತೆ ಅವೈಜ್ಞಾನಿಕವಾಗಿದೆ. ರಸ್ತೆ ಎತ್ತರದಲ್ಲಿದ್ದರೆ, ನಮ್ಮ ಮನೆಗಳು ತಳಮಟ್ಟದಲ್ಲಿವೆ. ಹಾಗಾಗಿ ಮಳೆ ನೀರು ಮನೆಗೆ ನುಗ್ಗುವ ಸಾಧ್ಯತೆ ಹೆಚ್ಚಿದೆ. ಈ ರಸ್ತೆ ನಿರ್ಮಿಸುವಾಗ, ಸರಿಯಾಗಿ ಸಮೀಕ್ಷೆ ನಡೆಸಿಲ್ಲ. ನಮ್ಮ ಅಭಿಪ್ರಾಯವನ್ನೂ ಸಂಗ್ರಹಿಸಿಲ್ಲ. ಇದೇ ಸಮಸ್ಯೆಗೆ ಮೂಲಕಾರಣ’ ಎಂಬುದು ಸ್ಥಳೀಯರ ಆರೋಪ.

‘ಅಪೂರ್ಣಗೊಂಡ ಈ ಕಾಮಗಾರಿ ಪೂರ್ಣಗೊಳಿಸಬೇಕು. ರಸ್ತೆ ನಿರ್ಮಾಣದಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂಬ ಬಲವಾದ ಒತ್ತಾಯ ಕೇಳಿಬರುತ್ತಿದೆ.

ಬೈಲಹೊಂಗಲದ ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಜನರು ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿರುವುದು
ಬೈಲಹೊಂಗಲದ ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಜನರು ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿರುವುದು
ಬೈಲಹೊಂಗಲದ ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕೃಷಿ ಪರಿಕರ ಇಟ್ಟಿರುವುದು
ಬೈಲಹೊಂಗಲದ ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕೃಷಿ ಪರಿಕರ ಇಟ್ಟಿರುವುದು
ವೀರೇಶ
ವೀರೇಶ
ರಾಜು
ರಾಜು
ವಿಶಾಲ
ವಿಶಾಲ
ಮೋಹನ
ಮೋಹನ
ಗುರು
ಗುರು

ಯಾರು ಏನಂತಾರೆ?ಫುಟ್‌ಪಾತ್‌ ನಿರ್ಮಾಣಕ್ಕೆ ಕ್ರಮ  ಇಂಚಲ ಕ್ರಾಸ್‌ನಿಂದ ಧಾರವಾಡ ಬೈಪಾಸ್‌ ರಸ್ತೆಗೆ ಸಾಗುವ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಮಾರ್ಗದುದ್ದಕ್ಕೂ ಫುಟ್‌ಪಾತ್‌ ನಿರ್ಮಿಸುವ ಜತೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು ವೀರೇಶ ಹಸಬಿ ಮುಖ್ಯಾಧಿಕಾರಿ ಬೈಲಹೊಂಗಲ ಪುರಸಭೆ ಅಪೂರ್ಣ ಕಾಮಗಾರಿ ಅಪೂರ್ಣಗೊಂಡ ಕಾಮಗಾರಿಯಿಂದ ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ತ್ವರಿತವಾಗಿ ಫುಟ್‌ಪಾತ್‌ ನಿರ್ಮಿಸಬೇಕು. ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ –ರಾಜು ಬಡಿಗೇರ ಸ್ಥಳೀಯ ಪಾರ್ಕಿಂಗ್‌ ವ್ಯವಸ್ಥೆ ಮಾಡಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದರಿಂದ ವಾಹನಗಳು ಮತ್ತು ಚಕ್ಕಡಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಬಂಧಿತ ಅಧಿಕಾರಿಗಳು ಇತ್ತ ಗಮನಹರಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕು. ಫುಟ್‌ಪಾತ್‌ ನಿರ್ಮಾಣಕ್ಕೆ ಆದ್ಯತೆ ನೀಡಬೇಕು–ವಿಶಾಲ ಹೊಸೂರ ವಾಹನ ಸವಾರ ಮಳೆನೀರು ನುಗ್ಗುವುದನ್ನು ತಪ್ಪಿಸಿ ಈ ರಸ್ತೆಯಿಂದ ಕಿರಿಕಿರಿ ಉಂಟಾಗಿದೆ.‌ ನಮ್ಮ ಮನೆಗಳಿಗಿಂತ ರಸ್ತೆ ಎತ್ತರದಲ್ಲಿರುವ ಕಾರಣ ಮಳೆ ನೀರು ಮನೆಗಳಿಗೆ ನುಗ್ಗುವ ಸಾಧ್ಯತೆ ಇದೆ. ಇನ್ನೆರಡು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ಮನೆಗೆ ಮಳೆನೀರು ನುಗ್ಗುವುದನ್ನು ತಪ್ಪಿಸಬೇಕು –ಮೋಹನ್ ಕಮ್ಮಾರ ಸ್ಥಳೀಯ ಸವಾರರಿಗೆ ಅನುಕೂಲ ಕಲ್ಪಿಸಿ ಮೊದಲು ನಮ್ಮ ಮನೆಗಳ ನೆಲಮಟ್ಟಕ್ಕೆ ಪೂರಕವಾಗಿ ರಸ್ತೆ ಇತ್ತು. ಈಗ ನಿರ್ಮಿಸಿದ ರಸ್ತೆ ನಮಗೆ ಸಂಕಷ್ಟ ತಂದಿದೆ. ಮನೆಗೆ ಬರುವವರು ತಮ್ಮ ವಾಹನ ನಿಲ್ಲಿಸಲು ಪರದಾಡುವಂತಾಗಿದೆ. ಈ ಲೋಪ ಸರಿಪಡಿಸಿ ಸವಾರರಿಗೆ ಆಗುತ್ತಿರುವ ಅನಾನುಕೂಲತೆ ತಪ್ಪಿಸಬೇಕು–ಗುರು ರಾವಳ ಸ್ಥಳೀಯ

ಎಲ್ಲೆಲ್ಲಿ ಪಾರ್ಕಿಂಗ್‌ ಸಮಸ್ಯೆ? ಬೈಲಹೊಂಗಲ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ಅದಕ್ಕೆ ಪೂರಕವಾಗಿ ರಸ್ತೆಗಳು ವಿಸ್ತರಣೆಯಾಗುತ್ತಿಲ್ಲ. ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲ. ಇಲ್ಲಿನ ಬಜಾರ್‌ ರಸ್ತೆ ಸೋಮವಾರ ಪೇಟೆ ರಾಣಿ ಚನ್ನಮ್ಮನ ಸಮಾಧಿಯ ರಸ್ತೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ಹೆಚ್ಚಿದ್ದು ಜನರು ಹೆಜ್ಜೆ ಹೆಜ್ಜೆಗೂ ಪರದಾಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT