ಬೆಳಗಾವಿ: ರಸ್ತೆ ನಿರ್ಮಾಣಕ್ಕಾಗಿ ಶಹಾಪುರದ ಹೈಬತ್ತಿ ಕಾಲೊನಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ, ನ್ಯಾಯಾಲಯದ ಆದೇಶದಂತೆ ಮಹಾನಗರ ಪಾಲಿಕೆಯವರು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಂತ್ರಸ್ತರೊಬ್ಬರು ಇಲ್ಲಿನ ಪಾಲಿಕೆ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಉಪ ಆಯುಕ್ತರ ವಾಹನಕ್ಕೆ ನೋಟಿಸ್ ಪ್ರತಿ ಅಂಟಿಸಿದ ಪ್ರಸಂಗ ಮಂಗಳವಾರ ನಡೆಯಿತು.
‘ನಾನು ರಸ್ತೆ ನಿರ್ಮಾಣಕ್ಕಾಗಿ 5 ಗುಂಟೆ ಜಮೀನು ನೀಡಿದ್ದೇನೆ. ಆದರೆ, ಹಲವು ವರ್ಷಗಳಿಂದ ಪರಿಹಾರ ಕೊಡದೆ ಸತಾಯಿಸುತ್ತಿದ್ದಾರೆ. ನನಗೆ ₹75.96 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ಪಾಲಿಕೆಯಲ್ಲಿನ ವಸ್ತುಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಹಾಗಾಗಿ ಪಾಲಿಕೆಯಲ್ಲಿನ ವಸ್ತುಗಳ ಜಪ್ತಿಗೆ ಬಂದಿದ್ದೇನೆ’ ಎಂದು ಸಂತ್ರಸ್ತ ನೇಮಾಣಿ ಜಾಂಗಳೆ ಹೇಳಿದರು.
ಆದರೆ, ವಸ್ತುಗಳ ಜಪ್ತಿಗೆ ಸಿಬ್ಬಂದಿ ಅವಕಾಶ ನೀಡದಿದ್ದಾಗ ಉಪ ಆಯುಕ್ತರ ವಾಹನಕ್ಕೆ ನೋಟಿಸ್ ಪ್ರತಿ ಅಂಟಿಸಿದರು.
‘ಈ ಪ್ರಕರಣದಲ್ಲಿ ಪರಿಹಾರ ನೀಡಲು ನ್ಯಾಯಾಲಯದ ಸಮಯಾವಕಾಶ ಕೇಳಿದ್ದೇವೆ. ಸೆ.4ರಂದೇ ಪ್ರಕರಣದ ವಿಚಾರಣೆ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.