ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕ್ರಮಗಳಿಲ್ದೆ ಬಾಳ ತ್ರಾಸ್‌ ಆಗೈತ್ರೀ: ಗ್ರಾಮೀಣ ಕಲಾವಿದರ ಬದುಕು ಮೂರಾಬಟ್ಟೆ

Last Updated 30 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್‌ನಿಂದ ಕಲಾ ಪ್ರದರ್ಶನಕ್ಕೆ ಬಾಳಷ್ಟು ಅವಕಾಶ ತಪ್ಪಿದಾವ‌ರ್‍ರೀ. ಎರಡು ವರ್ಷಗಳಿಂದ ಸರಿಯಾಗಿ ಕೆಲಸವಿಲ್ಲದೆ ಬಡ ಕಲಾವಿದರಿಗೆ ಬಾಳ ತ್ರಾಸ ಆಗೇದ್ರೀ. ಜೀವನ ನಿರ್ವಹಣೆಯೇ ಬಹಳ ಕಷ್ಟವಾಗೈತ್ರಿ’.

– ಹೀಗೆಂದು ಹೇಳಿದ ಜೋಕಾನಟ್ಟಿಯ ಡೊಳ್ಳು ಕುಣಿತ ಕಲಾವಿದೆ ಅಕ್ಕಮಹಾದೇವಿ ಮಾದರ ಅವರು ಜನಪದ ಕಲಾವಿದರಿಗೆ ಎದರುರಾಗಿರುವ ಸಂಕಷ್ಟವನ್ನು ಕಟ್ಟಿಕೊಟ್ಟರು.

‍ಪ್ರಸ್ತುತ ಕೋವಿಡ್‌ನಿಂದಾಗಿ ಜಾತ್ರೆ ಮತ್ತು ಸಂಭ್ರಮಾಚರಣೆಗಳು ಕಡಿಮೆಯಾಗಿವೆ. ಸರಳ ಆಚರಣೆಯ ಕಾರಣದಿಂದಾಗಿ ಬಹುತೇಕ ಪ್ರದರ್ಶನ ಕಲೆಗಳ ಕಲಾವಿದರಿಗೆ ಅವಕಾಶಗಳು ಸಿಗುತ್ತಿಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲೂ ಅವರಿಗೆ ವೇದಿಕೆ ದೊರೆಯುತ್ತಿಲ್ಲ;ಸಂಭಾವನೆ ಲಭ್ಯವಾಗುತ್ತಿಲ್ಲ. ಪರಿಣಾಮ ಅವರೆಲ್ಲರೂ ಗಳಿಕೆ ಇಲ್ಲದೆ ಪರದಾಡುತ್ತಿದ್ದಾರೆ. ‘ಈ ಅಲೆ’ಯಲ್ಲಿ ಸರ್ಕಾರವೂ ಕೈಹಿಡಿದಿಲ್ಲ. ಇನ್ನೊಂದೆಡೆ ಕೆಲಸವೂ ಇಲ್ಲದೆ ಕಂಗಾಲಾಗಿದ್ದಾರೆ.

ಜನಪದ ಸೊಗಡನ್ನು ಎಲ್ಲೆಡೆ ಪಸರಿಸುವ ಕೆಲವರು ಅನಿವಾರ್ಯವಾಗಿ ಉದ್ಯೋಗ ಖಾತ್ರಿ ಮೊದಲಾದ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.

12 ಸಾವಿರಕ್ಕೂ ಹೆಚ್ಚು

ಜಾತ್ರೆ, ಉತ್ಸವ, ಮದುವೆ ಕಾರ್ಯಕ್ರಮಗಳಲ್ಲಿ ಕಲಾ ತಂಡಗಳಿಗೆ ದೊರೆಯುವ ಅವಕಾಶ ಇಲ್ಲವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜತ್ವದ ಕಾರ್ಯಕ್ರಮಗಳೆಲ್ಲ ನಿಂತಿವೆ. ಜಾನಪದ ಜಾತ್ರೆ, ಸುಗ್ಗಿ ಹುಗ್ಗಿ, ಗಿರಿಜನ ಉತ್ಸವ, ಚಿಗುರು, ವಿವಿಧ ಉತ್ಸವಗಳು ಎರಡು ವರ್ಷಗಳಿಂದ ಇಲ್ಲವಾಗಿ ಅವಕಾಶಗಳಿಂದ ವಂಚಿವಾಗಿರುವ ಬಗ್ಗೆ ವೀರಗಾಸೆ ಕಲಾವಿದ ಘೂಳಪ್ಪ ವಿಜಯನಗರ ಅವರು ಕಲಾವಿದರು ಪಡುತ್ತಿರುವ ಕಷ್ಟವನ್ನು ‘ಪ್ರಜಾವಾಣಿ’ಯೊಂದಿಗೆ ಬಿಚ್ಚಿಟ್ಟರು.

ಗೀಗೀಪದ ಮೇಳಗಳ ಪ್ರದರ್ಶನ ನೀಡುತ್ತಿರುವ ಕಲಾವಿದರು (ಸಂಗ್ರಹ ಚಿತ್ರ)
ಗೀಗೀಪದ ಮೇಳಗಳ ಪ್ರದರ್ಶನ ನೀಡುತ್ತಿರುವ ಕಲಾವಿದರು (ಸಂಗ್ರಹ ಚಿತ್ರ)

ಸರ್ಕಾರಿ ಅಂಕಿ–ಅಂಶಗಳ ಪ್ರಕಾರವೇ, ಜಿಲ್ಲೆಯಲ್ಲಿ 12ಸಾವಿರಕ್ಕೂ ಹೆಚ್ಚಿನ ವಿವಿಧ ಪ್ರಕಾರದ ಕಲಾವಿದರಿದ್ದಾರೆ. ಸಂಗೊಳ್ಳಿರಾಯಣ್ಣ ಉತ್ಸವದಲ್ಲಿ ಒಂದಷ್ಟು ಕಲಾವಿದರು ಸರ್ಕಾರದಿಂದ ಸಂಭಾವನೆ ಪಡೆಯುತ್ತಿದ್ದರು. ಆದರೆ, ಈ ಬಾರಿಯೂ ಉತ್ಸವ ಸರಳವಾಗಿ ನಡೆಯಿತು.

ಕಲಾವಿದರ ಕಣ್ಣಿಗೆ ಸುಣ್ಣ

ಸರ್ಕಾರ ರೂಪಿಸಿರುವ ಕೋವಿಡ್ ನಿಯಮಗಳಿಂದ ಜಾನಪದ ಕಲಾವಿದರು, ರಂಗಕರ್ಮಿಗಳು ಮತ್ತು ಚಲನಚಿತ್ರ ಪೋಷಕ ಪಾತ್ರ ಮಾಡುವವರು ಸಂಕಷ್ಟದಲ್ಲಿದ್ದಾರೆ. ಜಾತ್ರೆ ಮತ್ತು ಮದುವೆ ಕಾರ್ಯಕ್ರಮಗಳು ಸೀಮಿತವಾಗಿ ಜಾನಪದ ಕಲಾವಿದರು ಹೊಟ್ಟೆಪಾಡಿಗಾಗಿ ಬೇರೆ ಉದ್ಯೋಗಗಳ ಮೊರೆ ಹೋಗಿದ್ದಾರೆ. ಸರ್ಕಾರವು ರಾಜಕೀಯ ನಾಯಕರಿಗೆ ಒಂದು ನಿಯಮ, ಜನಸಾಮಾನ್ಯರಿಗೆ ಮತ್ತೊಂದು ನಿಯಮ ಮಾಡಿರುವುದು ಖಂಡನೀಯ ಎನ್ನುತ್ತಾರೆ ಕಲಾಪ್ರೇಮಿ ಮುನವಳ್ಳಿಯ ಕಿರಣ ಯಲಿಗಾರ.

ಸಮಸ್ಯೆ, ಅಳಲು

ಮೂಡಲಗಿ: ‘ಪ್ರತಿ ವರ್ಷ 30ರಿಂದ 40 ಪ್ರದರ್ಶನ ಮಾಡುತ್ತಿದ್ದೆವು. ಈಗ ಅವಕಾಶಗಳಿಂದ ವಂಚಿತ ಆಗೇದಿವಿರ್ರೀ. ಕಲೆಯನ್ನು ನಂಬಿಕೊಂಡಿರುವ ನಾವು ಸಾಲ ಮಾಡಿಕೊಂಡು ಜೀವನಾ ಮಾಡಾಕತ್ತೈದಿವ್ರೀ’ ಎಂದು ತಾಲ್ಲೂಕಿನ ಜೋಕಾನಟ್ಟಿಯ ಡೊಳ್ಳು ಕುಣಿತ, ಭಜನೆ, ಜಾನಪದ ಹಾಡುಗಳ ಕಲಾವಿದೆ ಅಕ್ಕಮಹಾದೇವಿ ಮಾದರ ಅಳಲು ಹೇಳಿಕೊಂಡರು.

ಇದು ಅವರೊಬ್ಬರ ಅಳಲಲ್ಲ. ಬಹುತೇಕ ಜನಪದ ಕಲಾವಿದರ ಪರಿಸ್ಥಿತಿ ಹೀಗೆಯೇ ಇದೆ. ವೀರಗಾಸೆಯ ಕಲ್ಲೋಳಿಯ ಘೂಳಪ್ಪ ವಿಜಯನಗರ, ಪುರವಂತಿಕೆಯ ಬಾಳಪ್ಪ ಹಟ್ಟಿಗೌಡರ, ಭಜನಾ ಕಲಾವಿದ ಖಾನಟ್ಟಿಯ ಮುತ್ತಪ್ಪ ಸವದಿ, ದಟ್ಟಿ ಕುಣಿತದ ಉದ್ದಣ್ಣ ಗೋಡೇರ, ಸಂಬಾಳ ತಂಡದ ಮಹಾಂತೇಶ ಹೂಗಾರ, ಪಾರಿಜಾತ ಕಲಾವಿದ ಹನಮಂತ ದಂಡಿದಾಸರ, ಬಯಲಾಟ ಕಲಾವಿದೆ ಕೆಂಪವ್ವ ಹರಿಜನ, ಜಾನಪದ ಗಾಯಕ ಶಬ್ಬಿರ ಡಾಂಗೆ ಹೀಗೆ... ಅಸಂಖ್ಯ ಜಾನಪದ ಕಲಾವಿದರು ಕೋವಿಡ್‌ ಸಂಕಷ್ಟಕ್ಕೆ ಸಿಲುಕಿ ಹೈರಾಣ ಆಗಿದ್ದಾರೆ.

‘ವೀರಗಾಸೆ ಕಲೆಯಿಂದ ತಿಂಗಳಿಗೆ ₹10 ಸಾವಿರ ಆದಾಯ ಇತ್ತರ್ರೀ, ಈಗ ಏನು ಇಲ್ಲದ್ಹಾಂಗ ಆಗೈತ್ರೀ’ ಎಂದು ಘೂಳಪ್ಪ ತಿಳಿಸಿದರು. ರಾಜ್ಯ ಮತ್ತು ಕೇಂದ್ರದಿಂದ ಕೊಡುವ ಕಲಾವಿದರ ಮಾಸಾಶನ ಸರಿಯಾಗಿ ಜಮೆಯಾಗುತ್ತಿರುವ ಬಗ್ಗೆ ಕೆಲವು ಫಲಾನುಭವಿಗಳು ತಿಳಿಸಿದರು.

ರಂಗಭೂಮಿ ಕಲಾವಿದರ ಬದುಕು ಮೂರಾಬಟ್ಟೆ

ನೇಸರಗಿ: ಗ್ರಾಮೀಣ ಭಾಗದಲ್ಲಿ ನಾಟಕ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ಗೊಂಬೆಯಾಟ, ಹಗಲು ವೇಷ ಮೊದಲಾದ ರಂಗ ಚಟುವಟಿಕೆಗಳನ್ನು ನಡೆಸುವ ಕಲಾವಿದರಿಗೆ ಕೊರೊನ ಹೊಡೆತ ಕೊಟ್ಟಿದೆ. ಅವರ ಆದಾಯಕ್ಕೆ ಕೊಕ್ಕೆ ಬಿದ್ದಂತಾಗಿದೆ.

ನೇಸರಗಿ ಸಮೀಪದ ನಾಗನೂರ ಗ್ರಾಮವು ಕಲಾವಿದರ ತವರೂರೆಂದೆ ಖ್ಯಾತಿ ಗಳಿಸಿದೆ. ಅಲ್ಲಿ ಶ್ರೀಕೃಷ್ಣ ಪಾರಿಜಾತ, ನಾಟಕ, ಸಣ್ಣಾಟ, ವೇಷಗಾರ ಕಲಾವಿದರು ಇದ್ದಾರೆ. ಅವರು ಎಷ್ಟೋ ದಿನಗಳಿಂದ ಕಲಾ ಪ್ರದರ್ಶನವಿಲ್ಲದೆ ಕುಟುಂಬವನ್ನು ನಿಭಾಯಿಸಲಾರದೆ ಸಂಕಷ್ಟದಲ್ಲಿ ದಿನ ದೂಡುವಂತಾಗಿದೆ. ಮನಸ್ಸಿನಲ್ಲಿ ಸಾವಿರಾರು ನೋವುಗಳಿದ್ದರೂ ತಮ್ಮ ಹಾಡು, ಅಭಿ‌ನಯ, ಮಾತಿನ ಮೂಲಕ ಜನರನ್ನು ರಂಜಿಸುವ ನೋವು ದೂರಗೊಳಿಸುವ ಕಲಾವಿದರು ನೋವಿನಿಂದ ನರಳುವ ಪರಿಸ್ಥಿತಿ ಬಂದೊದಗಿದೆ.

‘ಕಿತ್ತೂರು ಉತ್ಸವ, ಸಂಗೊಳ್ಳಿ ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ, ಕಸಾಪ ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಬಹುರೂಪಿ ವೇಷಗಾರನಾಗಿ, ಭಜನೆ, ಸಣ್ಣಾಟದಲ್ಲಿ ಪಾಲ್ಗೊಳ್ಳುತ್ತಿದ್ದೆ. ಆದರೆ, ಕೊರೊನಾದಿಂದ ಪ್ರದರ್ಶನ ನಡೆಸಲು ಅವಕಾಶ ಇಲ್ಲದೆ ಜೀವನ ದುರ್ಬರವಾಗಿದೆ’ ಎಂದು ಕಲಾವಿದ ಹಣಮಂತ ಸಣ್ಣಮನಿ ಅಳಲು ತೋಡಿಕೊಂಡರು.

ತೆಲಸಂಗ ಗ್ರಾಮದ ಗೀಗೀಪದ ಕಲಾವಿದೆ ರಾಧಾ ಜಾತ್ರೆಯಲ್ಲಿ ಕಾರ್ಯಕ್ರಮ ನೀಡಿದರು (ಸಂಗ್ರಹ ಚಿತ್ರ)
ತೆಲಸಂಗ ಗ್ರಾಮದ ಗೀಗೀಪದ ಕಲಾವಿದೆ ರಾಧಾ ಜಾತ್ರೆಯಲ್ಲಿ ಕಾರ್ಯಕ್ರಮ ನೀಡಿದರು (ಸಂಗ್ರಹ ಚಿತ್ರ)

‘ಕಲಾವಿದರು ಸರ್ಕಾರದ ಮಾಸಾಶನ ಆಶ್ರಯಿಸಿಕೊಂಡು ಕುಟುಂಬ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೊರೊನಾದಿಂದ ಕಲಾ ಪ್ರಪಂಚ ಸ್ಥಗಿತವಾಗಿದೆ. ರಂಗ ವೃತ್ತಿಯನ್ನೇ ನಂಬಿದವರ ಬದುಕು ಅತಂತ್ರವಾಗಿದೆ. ಸರ್ಕಾರದ ಸೌಲಭ್ಯಗಳೂ ಸಕಾಲಕ್ಕೆ ಸಿಗದೆ ರಂಗ ಕಲಾವಿದರು ಕಂಗಾಲಾಗಿದ್ಧಾರೆ’ ಎಂದು ನಾಟಕ ಕಲಾವಿದ ಚನ್ನಪ್ಪ ಬೈಲಪ್ಪ ಹುಣಶಿಮರದ ತಿಳಿಸಿದರು.

ಕೆಲಸಕ್ಕಾಗಿ ಕಲಾವಿದರ ಗುಳೆ!

ರಾಮದುರ್ಗ: ಕೊರೊನಾ ಮೂರೂ ಅಲೆಗಳು ಜಾನಪದ ಕಲಾವಿದರ ಮೇಲೆ ದುಷ್ಪರಿಣಾಮ ಬೀರಿವೆ. ಕಲೆಯನ್ನು ನಂಬಿಕೊಂಡಿರುವ ಅದೇಷ್ಟೋ ಕುಟುಂಬಗಳು ಕೃಷಿ, ಕೂಲಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಕೆಲವರು ಕೆಲಸಕ್ಕಾಗಿ ವಲಸೆ ಕೂಡ ಹೋಗಿದ್ದಾರೆ.

ರಾಜ್ಯ ಸರ್ಕಾರ ನೀಡುವ ಕಲಾವಿದರ ಮಾಸಾಶನ ಹಿರಿಯ ನಾಗರಿಕರಿಗೆ ಮಾತ್ರ ಸಿಗುತ್ತದೆ. ಅದಕ್ಕಿಂತ ಚಿಕ್ಕ ವಯಸ್ಸಿನ ಕಲಾವಿದರು ಕೃಷಿ ಕೂಲಿಗೆ ಹೊಂದಿಕೊಂಡಿದ್ದಾರೆ. ಮುಖ್ಯವಾಗಿ ಕಲಾವಿದರ ಜೀವನ ಕಷ್ಟಕ್ಕೆ ಅನ್ನುವುದಕ್ಕಿಂತಲೂ ಕಲೆಯೇ ನಶಿಸಿ ಹೋಗುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಕಲಾವಿದರು ಸಂಘ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದರು. ಪ್ರದರ್ಶನಗಳು ನಿಂತಿದ್ದರಿಂದ ಸದಸ್ಯರು ಚದುರಿ ಹೋಗಿದ್ದಾರೆ.

ಆರ್ಥಿಕ ಸಂಕಷ್ಟ ತಂದೊಡ್ಡಿದೆ

ತೆಲಸಂಗ: ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕಲಾವಿದರು ಆರ್ಥಿಕ ತೊಂದರೆಗೆ ಸಿಲುಕಿ ಕಷ್ಟ ಅನುಭವಿಸುತ್ತಿದ್ದಾರೆ. ಕಲೆಯ ಆದಾಯ ನೆಚ್ಚಿಕೊಂಡು ಮನೆ, ದ್ವಿಚಕ್ರವಾಹನ ಮೊದಲಾದವುಗಳಿಗೆ ಸಾಲ ಮಾಡಿದ್ದವರು ಕಂತು ಕಟ್ಟಲಾಗದೆ ಪರದಾಡುತ್ತಿದ್ದಾರೆ.

ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದ್ದರಿಂದ ಆಗಿರುದ ತೊಂದರೆ ಅಷ್ಟಿಷ್ಟಲ್ಲ ಎನ್ನುತ್ತಾರೆ ಬೈಲಾಟ, ನಾಟಕ, ಗಾಯನ, ನೃತ್ಯ, ಹಾಸ್ಯ, ಗೀಗಿ ಪದ, ಡೊಳ್ಳಿನ ಪದಗಳು ಸೇರಿದಂತೆ ವಿವಿಧ ಕ್ಷೇತ್ರದ ಕಲಾವಿದರು. ಬೇರೆ ಕೆಲಸ ಗೊತ್ತಿಲ್ಲದವರು ಮತ್ತಷ್ಟು ತೊಂದರೆಗೀಡಾಗಿದ್ದಾರೆ. ಸರ್ಕಾರದಿಂದ ನೀಡಿದ ಕೋವಿಡ್ ಪರಿಹಾರ ಎಲ್ಲರಿಗೂ ಸಿಕ್ಕಿಲ್ಲ ಎನ್ನುವ ದೂರುಗಳೂ ಇವೆ.

ಕಲಾವಿದರ ಮನದಾಳ

***

ಸರ್ಕಾರ ಕೈ ಹಿಡಿಯಲಿ

ಊರೂರು ತಿರುಗಿ ಜಾತ್ರೆ, ಉತ್ಸವಗಳಲ್ಲಿ ಗೀಗಿ ಪದ ಹಾಡುವುದನ್ನೇ ಕಸುಬಾಗಿಸಿಕೊಂಡ ನಮಗೆ ಕೊರೊನಾ ಕಾಲದಲ್ಲಿ ಬಹಳಷ್ಟು ತೊಂದರೆಯಾಗಿದೆ. ಈಗಲೂ ಕಾರ್ಯಕ್ರಮಗಳಿಲ್ಲ. ನನ್ನಂತಹ ಬಹಳ ಕಲಾವಿದರು ಬೀದಿಗೆ ಬಂದಿದ್ದಾರೆ. ಕಲೆ ಜೀವಂತ ಉಳಿಯಬೇಕಾದರೆ ಕಲಾವಿದರನ್ನು ಉಳಿಸಬೇಕು. ಸರ್ಕಾರ ನಮ್ಮ ಕೈಹಿಡಿಯಬೇಕು.

-ರಾಧಾ ಕೆ. ಸೂರ್ಯವಂಶಿ, ಗೀಗೀ ಪದ ಕಲಾವಿದೆ, ತೆಲಸಂಗ

***

ದೊಡ್ಡ ಮೊತ್ತದ ಪರಿಹಾರ ಕೊಡಲಿ

ಯುವ ಗಾಯಕರು ಸೇರಿ ತಂಡ ಕಟ್ಟಿಕೊಂಡು ಜಾತ್ರೆ, ಮದುವೆ, ಉತ್ಸವಗಳಲ್ಲಿ ಪ್ರದರ್ಶನ ನೀಡಿ ಜೀವನ ನಿರ್ವಹಣೆ ಮಾಡುತ್ತಿದ್ದೆವು. 2 ವರ್ಷದಿಂದ ವರಮಾನವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟವಾಗಿದೆ. ಸರ್ಕಾರ ದೊಡ್ಡ ಮೊತ್ತದ ಪರಿಹಾರ ಕೊಟ್ಟರೆ ಕಲಾವಿದರ ತೊಂದರೆ ನಿವಾರಣೆ ಆಗಬಹುದು.

– ರಾಜಕುಮಾರ ಹೊನಕಾಂಬಳೆ, ವೃತ್ತಿಪರ ಗಾಯಕ

***

ಎಲ್ಲರಿಗೂ ನೆರವು ಸಿಗಲಿ

ಹತ್ತು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ತಂಡಗಳೊಂದಿಗೆ ಸೇರಿ ಗಾಯನ ಪ್ರದರ್ಶನ ನೀಡುತ್ತಿದ್ದೆ. ಆದರೆ ಈಗ ನಮ್ಮ ಬಾಳು ನೀರಿನಿಂದ ಹೊರ ತೆಗೆದ ಮೀನಿನಂತಾಗಿದೆ. ಸರ್ಕಾರದ ₹ 3ಸಾವಿರ ಪರಿಹಾರ ಬೆರಳೆಣಿಕೆಯಷ್ಟು ಕಲಾವಿದರಿಗೆ ಮಾತ್ರವೇ ದೊರೆತಿದೆ. ಎಲ್ಲ ಕಲಾವಿದರಿಗೂ ನೆರವು ಸಿಗುವಂತಾಗಬೇಕು.

- ವಿದ್ಯಾ, ವೃತ್ತಿಪರ ಗಾಯಕಿ

***

ಕಲಾವಿದರನ್ನು ಉಳಿಸಲಿ

ಉತ್ತರ ಕರ್ನಾಟಕದಾದ್ಯಂತ ಮದುವೆ, ಜಾತ್ರೆ, ಉತ್ಸವ, ಜನ್ಮದಿನದ ಸಂಭ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ನಮಗೆ ಈಚೆಗೆ ಆಗಿರುವ ತೊಂದರೆ ಅಷ್ಟಿಷ್ಟಲ್ಲ. ನಮಗೆ ಬೇರೆ ಉದ್ಯೋಗ ಗೊತ್ತಿಲ್ಲ. ಸರ್ಕಾರ ಕಲಾವಿದರನ್ನು ಉಳಿಸಬೇಕು. ₹50ಸಾವಿರದಿಂದ ₹ 1 ಲಕ್ಷ ಪರಿಹಾರ ನೀಡಿದರೆ ಮಾತ್ರ ಕಲಾವಿದರು ಈಗಿನ ತೊಂದರೆಯಿಂದ ಹೊರಬರಬಹುದು.

-ಗಣೇಶ ಪಟ್ಟಣ, ಗಾಯಕ, ತೆಲಸಂಗ, ಅಥಣಿ ತಾಲ್ಲೂಕು

***

ಹೊಡೆತದಿಂದ ಪಾರು ಮಾಡಿ

25 ಜನರ ತಂಡ ಕಟ್ಟಿಕೊಂಡು 6 ತಿಂಗಳು ಬಿಡುವಿಲ್ಲದೆ ಬೈಲಾಟ ಪ್ರದರ್ಶನಗಳನ್ನು ನೀಡುತ್ತಿದ್ದ ನಮಗೆ ಕೋವಿಡ್ ಹೊಡೆತ ನೀಡಿದೆ. ಕಲೆಯ ಮೇಲಿನ ಪ್ರೀತಿ ಹಾಗೂ ಬೈಲಾಟಗಳ ಜೀವಂತಿಕೆಗಾಗಿ ನಾಟಕ ಮಾಡುತ್ತಾ ಬಂದಿರುವ ನಮಗೆ ಸರ್ಕಾರ ನೆರವಾಗಬೇಕು. 10 ವರ್ಷದಿಂದ ಬೈಲಾಟ ಮಾಡಿದವರಿಗೆ ಮಾಸಾಸನ ಕೊಡಬೇಕು. ಆಗ, ಕಲೆಯೂ ಉಳಿದೀತು.

-ಶಿವಾನಂದ ವಳಸಂಗ, ಬೈಲಾಟ ಕಲಾವಿದ, ಕನ್ನಾಳ

***

ಪ್ರಯತ್ನಿಸಲಾಗುವುದು

ಕಲಾವಿದರು, ರಂಗ ಚಟುವಟಿಕೆ ನಡೆಸುವವರಿಗೆ ಕೊರೊನಾದಿಂದ ಸಮಸ್ಯೆಯಾಗಿದೆ. ಸರ್ಕಾರದಿಂದ ಅಗತ್ಯ ಸೌಲಭ್ಯ ಸಿಗುವಂತೆ ಪ್ರಯತ್ನಿಸಲಾಗುವುದು.

–ಸೂರನಾಯ್ಕ ಪರವಿನಾಯ್ಕ, ಸದಸ್ಯ, ಕರ್ನಾಟಕ ನಾಟಕ ಅಕಾಡೆಮಿ

***

ಉಳಿಯಬಹುದು

ಸರ್ಕಾರದ ಮಾಸಾಶನದಿಂದ ಜಾನಪದ ಕಲಾವಿದರ ಜೀವನ ಸಾಗುವುದಿಲ್ಲ. ಸಂಘ ಸಂಸ್ಥೆಗಳು, ಶ್ರೀಮಂತರು ಗ್ರಾಮೀಣ ಕಲಾವಿದರ ಗ್ರಾಮಗಳನ್ನು ದತ್ತು ಪಡೆದು ಪೋಷಿಸಿದರೆ ಅವರ ಬದುಕು ಉಳಿಯಬಹುದು.

–ಸಿದ್ದು ಮೋಟೆ, ಮಾಜಿ ಸೆನೆಟ್‌ ಸದಸ್ಯ, ಜಾನಪದ ವಿಶ್ವವಿದ್ಯಾಲಯ

***

ಬೇಡಿಕೆ ಬಂದಿದೆ

ದೊಡ್ಡ ‍ಪ್ರಮಾಣದ ಉತ್ಸವಗಳಿಗೆ ಸದ್ಯ ಅವಕಾಶ ಇಲ್ಲ. ಆದರೆ, ಲಾಕ್‌ಡೌನ್‌ ರೀತಿ ಪರಿಸ್ಥಿತಿ ಇಲ್ಲ. ಅಲ್ಲಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ನೆರವು ನೀಡುವಂತೆ ಕಲಾವಿದರಿಂದ ಬೇಡಿಕೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಾಗುತ್ತದೆ.

–ವಿದ್ಯಾವತಿ ಭಜಂತ್ರಿ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

***

ಪ್ರಜಾವಾಣಿ ತಂಡ: ಬಾಲಶೇಖರ ಬಂದಿ, ಚನ್ನಪ್ಪ ಮಾದರ, ಚ.ಯ. ಮೆಣಸಿನಕಾಯಿ, ಜಗದೀಶ ಖೊಬ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT