ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಚುನಾವಣೆ ಜಿಲ್ಲೆಯ ರಾಜಕೀಯ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುವಂತೆ ಮಾಡಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿದ್ದವರು ಈಗ ದೋಸ್ತಿ ಆಗಿದ್ದರೆ; ಆಗ ಗುರು–ಶಿಷ್ಯರಾಗಿದ್ದವರು ಈಗ ವಿರೋಧಿಗಳಾಗಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ಸೇರಿಕೊಂಡು ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸೋಲಿಸಿದ್ದರು. ಸತೀಶ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸಂಸದೆಯಾದರು. ಇದಕ್ಕೂ ಮುಂಚೆ ವಿಧಾನಸಭೆ ಚುನಾವಣೆಯಲ್ಲೂ ನಿಪ್ಪಾಣಿ ಕ್ಷೇತ್ರದಲ್ಲಿ ಶಶಿಕಲಾ ಜಿಲ್ಲೆ ಅವರನ್ನು ಸೋಲಿಸಲು ಜಾರಕಿಹೊಳಿ ಸಹೋದರರು ಇನ್ನಿಲ್ಲದ ಅಸ್ತ್ರಗಳನ್ನು ಪ್ರಯೋಗಿಸಿದ್ದರು. ಜಾರಕಿಹೊಳಿ ಆಪ್ತ ಉತ್ತಮ ಪಾಟೀಲ ಸೋಲುಂಡರು.

ಆದರೆ ಈಗ ‘ಹವಾಮಾನ’ ತಿರುವು– ಮುರುವಾಗಿದೆ. ಬಿಡಿಸಿಸಿ ನಿರ್ದೇಶಕ ಚುನಾವಣೆಯಲ್ಲಿ ಅಣ್ಣಾಸಾಹೇಬ ಅವರನ್ನು ಗೆಲ್ಲಿಸಲು ಮೂವರೂ ಸಹೋದರರು ಒಂದಾಗಿ ನಿಂತಿದ್ದಾರೆ. ‘ಅಣ್ಣಾಸಾಹೇಬ ಹಣದ ದರ್ಪ ತೋರುತ್ತಾರೆ, ಜನರ ಕೆಲಸ ಮಾಡುವುದಿಲ್ಲ’ ಎಂದು ಆರೋಪ ಮಾಡುತ್ತಿದ್ದವರೇ ಈಗ ‘ಜನಪರ ನಾಯಕ, ಸಹಕಾರ ಧುರೀಣ’ ಎಂದು ಹೊಗಳುತ್ತಿದ್ದಾರೆ. ವೇದಿಕೆ ಹಂಚಿಕೊಂಡು ‘ಮತಭಿಕ್ಷೆ’ ಕೇಳುತ್ತಿದ್ದಾರೆ. ಎದುರು ಸೆಡ್ಡು ಹೊಡೆದಿರುವುದು ಅವರದೇ ಶಿಷ್ಯ ಉತ್ತಮ ಪಾಟೀಲ!

ಆಗ ದೋಸ್ತಿ ಈಗ ದುಷ್ಮನಿ: ಇದೇ ಬ್ಯಾಂಕಿಗೆ ನಾಲ್ಕು ಬಾರಿ ಅಧ್ಯಕ್ಷರಾದ ರಮೇಶ ಕತ್ತಿ, ನಿರ್ದೇಶಕರೂ ಆಗಿರುವ ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ, ಮಾಜಿ ಸಚಿವ ಎ.ಬಿ.ಪಾಟೀಲ ಒಂದಾಗಿ ಜಾರಕಿಹೊಳಿ ಸಹೋದರರ ವಿರುದ್ಧ ನಿಂತಿದ್ದಾರೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ರಮೇಶ ಕತ್ತಿಯೇ ಕಾರಣವಾದರು ಎಂದು ಅಣ್ಣಾಸಾಹೇಬ ಮುನಿಸಿಕೊಂಡರು. ಜಾರಕಿಹೊಳಿ ಸಹೋದರರ ಜತೆ ಕೈಜೋಡಿಸಿ ರಮೇಶ ಕತ್ತಿ ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಇಳಿಸುವಲ್ಲಿ ಯಶಸ್ವಿಯಾದರು.

ಇಷ್ಟೆಲ್ಲ ನಾಟಕೀಯ ಬೆಳವಣಿಗೆಗಳಾಗಿ ವರ್ಷ ಉರುಳಿದೆ. ಸದ್ಯ ಬಿಡಿಸಿಸಿ ಬ್ಯಾಂಕಿನ 16 ಸ್ಥಾನಗಳಿಗೆ ಅ.19ರಂದು ಚನಾವಣೆ ನಿಗದಿಯಾಗಿದೆ.

9 ಸ್ಥಾನಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿವೆ. ಉಳಿದ 7 ಕ್ಷೇತ್ರಗಳಲ್ಲಿ ‘ಜೆ’ ಕಂಪನಿ (ಜಾರಕಿಹೊಳಿ ಹಾಗೂ ತಂಡ) ಹಾಗೂ ‘ಕೆ’ ಕಂಪನಿ (ಕತ್ತಿ ಹಾಗೂ ತಂಡ) ಮಧ್ಯೆ ಇನ್ನಿಲ್ಲದ ಪೈಪೋಟಿ ಏರ್ಪಟ್ಟಿದೆ.

ಸಚಿವ ಶಾಸಕ ಸಂಸದರೂ ಪೈಪೋಟಿ!

‘ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದವರು ಶಾಸಕರಷ್ಟೇ ಬಲಾಢ್ಯರಾಗುತ್ತಾರೆ’ ಎಂಬುದು ಜಿಲ್ಲೆಯ ಸಹಕಾರ ಧುರೀಣರ ಮಾತು. ಹೀಗಾಗಿ ಸಂಸದರೂ ಶಾಸಕರು ವಿಧಾನ ಪರಿಷತ್ ಸದಸ್ಯರೂ ಈ ಬ್ಯಾಂಕಿನ ನಿರ್ದೇಶಕರಾಗಲು ಮುಗಿಬಿದ್ದಿದ್ದಾರೆ.

ಸ್ವತಃ ಸಚಿವ ಸತೀಶ ಜಾರಕಿಹೊಳಿ ಹಾಗೂ ಅವರ ಇಡೀ ತಂಡ ಎರಡು ತಿಂಗಳಿಂದ ಜಿಲ್ಲೆಯಲ್ಲೇ ಬೀಡುಬಿಟ್ಟಿದೆ. ಬ್ಯಾಂಕ್ ಸದ್ಯ ₹8000 ಕೋಟಿಗೂ ಅಧಿಕ ಠೇವಣಿ ₹7894.96 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹5230.74 ಕೋಟಿ ಬಡ್ಡಿರಹಿತ ಸಾಲ ನೀಡಿದೆ. ಜಿಲ್ಲೆ 40 ಲಕ್ಷ ರೈತರಿಗೆ ಇದು ಜೀವಾಳ. ಸಣ್ಣ ಹಿಡುವಳಿದಾರರಿಂದ ಹಿಡಿದು ಬೃಹತ್ ಉದ್ಯಮ ಸಕ್ಕರೆ ಕಾರ್ಖಾನೆಗಳಿಗೂ ನೂರಾರು ಕೋಟಿ ಸಾಲ ನೀಡುವ ಸಾಮರ್ಥ್ಯ ಬ್ಯಾಂಕಿಗಿದೆ.

ಈ ಬ್ಯಾಂಕ್ ಮೇಲೆ ಹಿಡಿದ ಸಾಧಿಸಿದರೆ ಗ್ರಾಮ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಪಾರಮ್ಯ ಸಾಧಿಸುವುದು ಸುಲಭವಾಗುತ್ತದೆ ಎಂಬುದು ಲೆಕ್ಕಾಚಾರ ಎನ್ನುತ್ತಾರೆ ಹಿರಿಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.