ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಆಡಳಿತ ಕೊಂಡಾಡಿದ ಅಮಿತ್‌ ಶಾ

Last Updated 17 ಜನವರಿ 2021, 12:17 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಲವು ವರ್ಗದ ಜನರಿಗೆ ನೆರವಾಗಿದೆ. ಕೋವಿಡ್ ಪರಿಸ್ಥಿತಿಯನ್ನು ಸರ್ಕಾರ ಚೆನ್ನಾಗಿ ನಿಭಾಯಿಸಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಮಾಡಿರುವುದು ಬಹಳ ಸಂತಸ ತಂದಿದೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್‌ ಶಾ ಕೊಂಡಾಡಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ‘ಜನಸೇವಕ ಸಮಾವೇಶ’ ಸಮಾರೋಪದಲ್ಲಿ ಅಮಿತ್‌ ಶಾ ಮಾತನಾಡಿದರು.

‘ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಲವು ವರ್ಗದ ಜನರಿಗೆ ನೆರವಾಗಿದೆ. ಕೋವಿಡ್ ಪರಿಸ್ಥಿತಿಯನ್ನು ಸರ್ಕಾರ ಚೆನ್ನಾಗಿ ನಿಭಾಯಿಸಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಮಾಡಿರುವುದು ಬಹಳ ಸಂತಸ ತಂದಿದೆ. ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ಜನರಿಗೆ ನಾವು ಆಭಾರಿಯಾಗಿರಬೇಕು. ಮೋದಿ ಹಾಗೂ ನಾವು ಯಾವಾಗ ಕರ್ನಾಟಕಕ್ಕೆ ಬಂದಿದ್ದೇವೆಯೋ ಆಗೆಲ್ಲಾ ತುಂಬು ಪ್ರೀತಿಯನ್ನು ನೀಡಿದ್ದೀರಿ. ಹೀಗಾಗಿ ಬಹುಮತ ಪಡೆದು ಸ್ವತಂತ್ರ ಸರ್ಕಾರ ರಚನೆಯಾಗಿದೆ. ನಮ್ಮ ಬಗ್ಗೆ ಕಾಂಗ್ರೆಸ್ ನವರು ಏನೇ ಮಾತನಾಡಿದರೂ ಎರಡನೆ ಬಾರಿಗೂ ಬಹುಮತ ದೊರೆತಿದೆ’ ಎಂದು ಹೇಳಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರು ಚರ್ಚೆಗಳು, ಸಂಪುಟ ವಿಸ್ತರಣೆ ವೇಳೆ ನಾಯಕತ್ವದ ವಿರುದ್ಧ ಕೇಳಿ ಬಂದಿರುವ ಕೂಗು ಇದೆಲ್ಲದರ ಹಿನ್ನೆಲೆಯಲ್ಲಿ, ಅಮಿತ್‌ ಶಾ ಅವರು ಯಡಿಯೂರಪ್ಪ ಅವರ ಆಡಳಿತದ ಕುರಿತು ಆಡಿರುವ ಮಾತುಗಳು ಪ್ರಾಮುಖ್ಯತೆ ಪಡೆದಿದೆ.

‘ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆಯಾಗಿದೆ. ಜನರಿಗೆ ನಾವು ಆಭಾರಿಯಾಗಿರಬೇಕು. ಮೋದಿ ಹಾಗೂ ನಾವು ಯಾವಾಗ ಕರ್ನಾಟಕಕ್ಕೆ ಬಂದಿದ್ದೇವೆಯೋ ಆಗೆಲ್ಲಾ ತುಂಬು ಪ್ರೀತಿಯನ್ನು ನೀಡಿದ್ದೀರಿ. ಹೀಗಾಗಿ ಬಹುಮತ ಪಡೆದು ಸ್ವತಂತ್ರ ಸರ್ಕಾರ ರಚನೆಯಾಗಿದೆ. ನಮ್ಮ ಬಗ್ಗೆ ಕಾಂಗ್ರೆಸ್‌ನವರು ಏನೇ ಮಾತನಾಡಿದರೂ ಎರಡನೇ ಬಾರಿಗೂ ಬಹುಮತ ದೊರೆತಿದೆ’ ಎಂದರು.

ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ದೇಶದ ಸುರಕ್ಷಿತ ಕಡೆಗಣಿಸಲಾಗಿತ್ತು. ನೀವು ಮೋದಿ ಸರ್ಕಾರ ತಂದಿರಿ. ಒಮ್ಮೆ ಸರ್ಜಿಕಲ್‌ ಸ್ಟ್ರೈಕ್ ಹಾಗೂ ಇನ್ನೊಮ್ಮೆ ಏರ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ‌ಬುದ್ಧಿ‌ ಕಲಿಸಿದೆ ಮೋದಿ ನೇತೃತ್ವದ ಸರ್ಕಾರ‌ ಎಂದರು.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಭವ್ಯ ಮಂದಿರ ತಲೆ ಎತ್ತಲಿದೆ. ರಾಮ ಜನ್ಮಭೂಮಿಯಲ್ಲಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದು ಬಹು ವರ್ಷಗಳ ಕನಸಾಗಿತ್ತು. ಅದೀಗ ನನಸಾಗುತ್ತಿದೆ ಎಂದರು ಹೇಳಿದರು.

ಕೊರೊನಾ ಸಂಕಷ್ಟ ಎದುರಾಯಿತು. ಬಹಳ ಸವಾಲುಗಳಿದ್ದವು. ಇಷ್ಟು ‌ದೊಡ್ಡ ಸಂಖ್ಯೆಯ ಜನರಿರುವ ಈ ದೇಶದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಕೆಲಸವನ್ನು ಮಾಡಿದ್ದೇವೆ. ಕೊರೊನಾ ಮುಕ್ತ ಭಾರತ ನಿರ್ಮಾಣಕ್ಕಾಗಿ ಎಲ್ಲರಿಗೂ ಲಸಿಕೆ ಕೊಡುವ ಮೂಲಕ ಸುರಕ್ಷಾ ಕವಚ ನೀಡುತ್ತಿದ್ದೇವೆ. ಈ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕಾಂಗ್ರೆಸ್ ನವರ ಮಾತುಗಳನ್ನು ‌ನಂಬಬೇಡಿ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸುತ್ತೇನೆ. ಸೋನಿಯಾ ಮನಮೋಹನ್ ಸಿಂಗ್ ಸರ್ಕಾರ ಕರ್ನಾಟಕಕ್ಕೆ ಏನು ಕೊಟ್ಟಿತ್ತು? ಪಟ್ಟಿ ಬಿಡುಗಡೆ ಮಾಡಲಿ. ಎಷ್ಟು ಅನುದಾನ ನೀಡಿದ್ದಾರೆ. ಉತ್ತರ ಕೊಡಬೇಕಲ್ಲವೇ? ನಮ್ಮ ಸರ್ಕಾರ ₹ 2 ಲಕ್ಷ‌ ಕೋಟಿಗೂ ಜಾಸ್ತಿಅನುದಾನ ನೀಡಿದೆ. ಅವರು ₹88,583 ಕೋಟಿ ಸಾವಿರ ಕೋಟಿಅನುದಾನ ಕೊಟ್ಟಿದ್ದರು. ಅಲ್ಲಿ ಮೋದಿ ಇಲ್ಲಿ ಯಡಿಯೂರಪ್ಪ ಜೋಡಿ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳ ಚುನಾವಣೆ ಬರುತ್ತಿದೆ. ಬಿಜೆಪಿಗೆ ಶೇ 75ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಪಕ್ಷ‌ ಬಲಪಡಿಸಬೇಕು. ಈ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕಾರ್ಯಕರ್ತರ ಕೈಎತ್ತಿಸಿ ವಚನ ಪಡೆದರು.

ದೇಶದ ಇಡೀ ರೈತರ ಉನ್ನತಿಗೆ ಮಕರ ಸಂಕ್ರಾಂತಿ ನೆರವಾಗಲಿ ಎಂದು ಪ್ರಾರ್ಥಿಸುತ್ತೇನೆ. ಬೆಳವಡಿ ಮಲ್ಲಮ್ಮ, ಶಿವಾಜಿ ಮಹಾರಾಜರ ಹೋರಾಟ ಸ್ಮರಿಸಿದರು. ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶೌರ್ಯವನ್ನೂ ಸ್ಮರಿಸಿದರು. ಪಕ್ಷಕ್ಕೆ ದಿವಂಗತ ಸುರೇಶ ಅಂಗಡಿ ಅವರ ಕೊಡುಗೆ ದೊಡ್ಡದು. ಈಚೆಗೆ ನಿಧನರಾದ ಮುಖಂಡರಾದ ರವಿ ಹಿರೇಮಠ, ರಾಜು ಚಿಕ್ಕನಗೌಡರ ಅವರನ್ನೂ ನೆನೆದರು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತನಾಡಿ, ಇಡೀ ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೆಲಸಮವಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ನಮ್ಮ ಕಾರ್ಯಕರ್ತರು ಗಳಿಸಿದ್ದಾರೆ.

ಈ ಭಾಗದಲ್ಲಿ ಯುವ,‌ ಮಹಿಳಾ, ಎಸ್‌ಸಿ, ಎಸ್‌ಟಿ ಮೋರ್ಚಾ ಸಂಘಟನೆ ಬಲವಾಗಲು ಶಕ್ತಿ ಮೀರಿ ಶ್ರಮಿಸಬೇಕು. ಪಕ್ಷದ‌ ಚಿಹ್ನೆಯಲ್ಲಿ ನಡೆಯುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗಳ ಅಧಿಕಾರವನ್ನು ದೊಡ್ಡ ಪ್ರಮಾಣದಲ್ಲಿ ಹಿಡಿಯಬೇಕು. ಇದಕ್ಕಾಗಿ ಈಗಿನಿಂದಲೇ ಸಿದ್ಧವಾಗಬೇಕು. ಹಣ, ಹೆಂಡ ತೋಳ್ಬಲದಿಂದ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ನವರು ಇದ್ದರು. ಆದರೆ ಉಪ ಚುನಾವಣೆಗಳಲ್ಲಿ ಆ ಪಕ್ಷ ನೆಲ‌ ಕಚ್ಚಿದೆ ಎಂದು ಕರೆ ನೀಡಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಕ್ಷೇತ್ರವನ್ನು ಗೆಲ್ಲಬೇಕು. ನಾಳೆಯಿಂದಲೇ ಗ್ರಾಮದ ಮುಖಂಡರನ್ನು ಜಾತ್ಯತೀತವಾಗಿ ಭೇಟಿಯಾಗಿ ಆಶೀರ್ವಾದ ಪಡೆಯಬೇಕು. ಅವರ ಅಭಿಪ್ರಾಯ ಆಲಿಸಬೇಕು. ಪ್ರಧಾನಿ ಬಹಳ ಹಣ ಕೊಡುತ್ತಿದ್ದಾರೆ. ಅದನ್ನು ಬಳಸಿಕೊಂಡು ಗ್ರಾಮಗಳನ್ನು ಕಟ್ಟಬೇಕು. ರಾಮ ರಾಜ್ಯದ ಕನಸು ನನಸು ಮಾಡಬೇಕು.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ಚಾಲನೆ ‌ನೀಡಲಾಗಿದೆ. ನಮ್ಮೆಲ್ಲರ ಕನಸು ನನಸಾಗಿದೆ. ಉಪ ಚುನಾವಣೆಯಲ್ಲಿ ದಿ.ಸುರೇಶ ಅಂಗಡಿ ಋಣ ತೀರಿಸಲು, ಎರಡೂವರೆ ಲಕ್ಷ ಅಂತರದಿಂದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಸಂಕಲ್ಪ‌ ಮಾಡುವಂತೆ ಕಾರ್ಯಕರ್ತರ ಕೈಎತ್ತಿಸಿ ಪ್ರಮಾಣ ಪಡೆದರು. ಯಾರೇ ಅಭ್ಯರ್ಥಿಯಾದರೂ ಪಕ್ಷ. ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದರು.

ನಳಿನ್ ಕುಮಾರ್ ಕಟೀಲ್ ಇಡೀ ರಾಜ್ಯದಾದ್ಯಂತ ಸುತ್ತಿ ಅಭೂತಪೂರ್ವ ಗೆಲುವು ಗಳಿಸಲು ಕಾರಣವಾಗಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, 45ಸಾವಿರ ಬಿಜೆಪಿ ಬೆಂಬಲಿತರು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುತ್ತಿರುವುದು ಹಾಗೂ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದು ಇದು ಸಾಧ್ಯವಾಗಿದೆ.

ಹಳ್ಳಿ ಹಳ್ಳಿಗಳಲ್ಲಿ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಾಣವಗಿದೆ. ನಗರದಲ್ಲಿ ಮಾತ್ರ ಬಿಜೆಪಿ ಸೀಮಿತವಾಗಿದೆ ಎಂಬ ಮಾತು ಈಗ ಇಲ್ಲ. ಹಳ್ಳಿಗಳಿಗೂ ನಮ್ಮ ಬೇರು ವ್ಯಾಪಿಸಿರುವುದು ಸಾಬೀತಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಮುಂಬರುವ ಉಪ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪಕ್ಷದ ವಿಜಯ ಪತಾಕೆ ಹಾರಿಸಲು ಕಾರ್ಯಕರ್ತರೆಲ್ಲರೂ ಶ್ರಮಿಸಬೇಕು. ಮುಂದೆಯೂ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ದೇಶವು ವನವಾಸದಿಂದ ಮುಕ್ತವಾಗಿ ನಮ್ಮ ರಾಮರಾಜ್ಯವಾಗುವತ್ತ ಹೆಜ್ಜೆ ಹಾಕುತ್ತಿದೆ. ಹಲವು ಜನಪರ ಯೋಜನೆಗಳ ಮೂಲಕ ಪ್ರಧಾನಿ ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರು.

ಸಮಾವೇಶದಲ್ಲಿ ಸಚಿವ ಉಮೇಶ ಕತ್ತಿ ಮಾತನಾಡಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಪಡೆಯಲು ಮಿತಿ ಇಲ್ಲ. ನೂತನ ಗ್ರಾಮ ಪಂಚಾಯ್ತಿ ಸದಸ್ಯರು ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಜಿಲ್ಲೆಯಲ್ಲಿ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದಾರೆ. ಹೀಗಾಗಿ ಅವರನ್ನು ‌ಅಭಿನಂದಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದಾರೆ. ಅವರು ಇಲ್ಲಿಗೆ ಬರಲು ನೀವೆಲ್ಲರೂ (ಗ್ರಾಮ ಪಂಚಾಯ್ತಿ ಸದಸ್ಯರು) ಕಾರಣವಾಗಿದ್ದೀರಿ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ನಮ್ಮ ಜಯ ಘೋಷ ಮುಟ್ಟಬೇಕು ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಕೊರೊನಾದಿಂದಾಗಿ ದೇಶ ಆರ್ಥಿಕವಾಗಿ ತೊಂದರೆಯಲ್ಲಿದ್ದಾಗ ನಮ್ಮ ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿದೆ. ಉಚಿತವಾಗಿ ಪಡಿತರ ಹಾಗೂ ಅಡುಗೆ ಅನಿಲ‌ ಕೊಟ್ಟಿದ್ದಾರೆ ಎಂದರು.

ಸಿ.ಟಿ. ರವಿ ಮಾತನಾಡಿ, ‘ಮೋದಿ - ಅಮಿತ್ ಶಾ ಜೋಡಿ ಆಗಲೇ ಇದ್ದಿದ್ದರೆ ಪಾಕಿಸ್ತಾನ ಇರುತ್ತಿತ್ತಾ? ಪಾಕಿಸ್ತಾನ ಬೇಕು ಎನ್ನುವವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರು. ದೇಶ ತುಂಡಾಗುತ್ತಿರಲಿಲ್ಲ. ಪಾಕಿಸ್ತಾನ ಬೇಕು ಎನ್ನುವವರು ತುಂಡಾಗುತ್ತಿದ್ದರು. ಕಿಸಾನ್ ಸಮ್ಮಾನ್ ಯೋಜನೆ ಕಾಂಗ್ರೆಸ್ ಸರ್ಕಾರದಲ್ಲಿ ಇತ್ತಾ? ದೇವೇಗೌಡರು ಇದ್ದಾಗ ಇತ್ತಾ? ರೈತ ಪರ ಯೋಜನೆಗಳನ್ನು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ಆಗುತ್ತಾರಾ? ನಮ್ಮ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ. ಇಷ್ಟು ವರ್ಷ ರೈತನ ಶೋಷಣೆ ಮಾಡಿದ ಕೆಟ್ಟ ವ್ಯವಸ್ಥೆ ತೆಗೆದುಹಾಕಿ ರೈತರಿಗೆ ಸ್ವಾತಂತ್ರ್ಯ ಕೊಡುತ್ತಿದ್ದೇವೆ. ಇದು ರೈತ ವಿರೋಧಿನಾ’ ಎಂದು ಪ್ರಶ್ನಿಸಿದರು.

ದಲ್ಲಾಳಿಗಳ ಪರ ಕೆಲಸ ಮಾಡಿದ್ದು ಕಾಂಗ್ರೆಸ್. ಪ್ರಧಾನಿ ಪ್ರಧಾನ ಸೇವಕರಾದರೆ ನಾವು ಜನಸೇವಕರಾಗಿದ್ದೇವೆ. ಸೌಲಭ್ಯಗಳನ್ನು ಕಲ್ಪಿಸಲು ಜನಸೇವೆ ಮಾಡಬೇಕು. ಊರಿನಲ್ಲಿ ಆಗುವ ಅನ್ಯಾಯ, ಅಸ್ಪೃಶ್ಯತೆ ಹಾಗೂ ಜಾತಿ ದೌರ್ಜನ್ಯದ ವಿರುದ್ಧ ನಾವೂ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT