ಶುಕ್ರವಾರ, ಫೆಬ್ರವರಿ 3, 2023
18 °C
ಇಬ್ಬರ ಮೇಲೆ ಹಲ್ಲೆ, ಚಾಕು ಇರಿತ

ಬೆಳಗಾವಿ: ಬೈಕ್‌ ಪಕ್ಕಕ್ಕೆ ಸರಿಸಲಿಲ್ಲ ಎಂಬ ಕಾರಣಕ್ಕೆ ಗುಂಪು ಘರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದುರ್ಗ (ಬೆಳಗಾವಿ): ಬೈಕ್‌ ಪಕ್ಕಕ್ಕೆ ಸರಿಸಲಿಲ್ಲ ಎಂಬ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಪಟ್ಟಣದಲ್ಲಿ ಘರ್ಷಣೆ ಸಂಭವಿಸಿದ್ದು, ಯುವಕರಿಬ್ಬರ ಮೇಲೆ ಚಾಕು ಹಾಗೂ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಲಾಗಿದೆ.

ರಾಮದುರ್ಗದ ಗೋಪಾಲ ಬಂಡಿವಡ್ಡರ ಅವರಿಗೆ ಚಾಕು ಇರಿಯಲಾಗಿದ್ದು, ರವಿ ಬಂಡಿವಡ್ಡರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆಯಲಾಗಿದೆ. ಇಬ್ಬರನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳ ಬಿಡಿಸಲು ಬಂದ ನಂಜುಂಡಿ ಸಾಬಣ್ಣ ಬಂಡಿವಡ್ಡರ ಎಂಬುವವರ ಮರ್ಮಾಂಗಕ್ಕೆ ಪೆಟ್ಟು ಬಿದ್ದಿದೆ.

‘ರಾಮದುರ್ಗದ ಭಾಗ್ಯ ನಗರ ನಿವಾಸಿ ಅಮೀನ್ ರಾಜಾಸಾಬ್‌ ಜಂಗಲಶೇಖ್ ಮತ್ತು ಸಹಚರರಿಂದ ಹಲ್ಲೆ ನಡೆದಿದೆ. ಹುಡುಗರ ಮಧ್ಯೆ ನಡೆದ ಗಲಾಟೆಯಲ್ಲಿ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ’ ಎಂದು ಗಾಯಗೊಂಡ ಗೋಪಾಲ ಪೊಲೀರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಮೀನ್‌ ತಲೆಗೆ ಪೆಟ್ಟಾಗಿದ್ದು ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗೋಪಾಲ ಶ್ರೀರಾಮ ಸೇನಾ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರಿಂದ ಸ್ಥಳದಲ್ಲಿ ಯುವಕರ ಗುಂಪು ಸೇರಿತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಎಲ್ಲರನ್ನೂ ಮನೆಗೆ ಕಳುಹಿಸಿದರು. ಸಿಪಿಐ ಐ.ಆರ್. ಪಟ್ಟಣಶೆಟ್ಟಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಯಿತು.

‘ಮುಸ್ಲಿಂ ಸಮಾಜಕ್ಕೆ ಎಚ್ಚರಿಕೆ ನೀಡುತ್ತೇನೆ’: 
‘ನಾನು ಶಾಸಕನಾದ ಮೇಲೆ ನಾಲ್ಕೂವರೆ ವರ್ಷಗಳಿಂದ ಹಿಂದೂ– ಮುಸ್ಲಿಂ ಗಲಾಟೆ ನಡೆದಿಲ್ಲ. ಇಂದು ಮುಸ್ಲಿಮರಿಗೂ ಹಬ್ಬವಿದೆ ಹಿಂದೂಗಳಿಗೂ ಚರಗ ಚೆಲ್ಲುವ ಸಂಭ್ರಮವಿದೆ. ಇಂಥ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಸಿದ್ದು ಖಂಡನೀಯ. ನಾನು ಮುಸ್ಲಿಂ ಸಮಾಜದವರಿಗೆ ಎಚ್ಚರಿಕೆ ಕೊಡುತ್ತೇನೆ. ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಬುದ್ಧಿ ಹೇಳಿ, ಅವರ ಸಂಗದಲ್ಲಿರುವ ಗೂಂಡಾಗಳಿಗೂ ಎಚ್ಚರಿಕೆ ಕೊಡಿ. ಇದು ಹೀಗೇ ಮುಂದುವರಿದರೆ ಮುಂದೆ ಬೇರೇನೇ ನಡೆಯುತ್ತದೆ’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ಆಸ್ಪತ್ರೆಗೆ ದೌಡಾಯಿಸಿ ಯುವಕರ ಆರೋಗ್ಯ ವಿಚಾರಿಸಿದ ನಂತರ ಅವರು ಮಾಧ್ಯಮದವರ ಮುಂದೆ ಮಾತನಾಡಿದರು.

‘ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚವರಿಗೂ ಮನವರಿಕೆ ಮಾಡುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು