ಸೋಮವಾರ, ಮಾರ್ಚ್ 27, 2023
31 °C

ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ಬೆಳಗ್ಗೆ ಮತದಾನಕ್ಕೆ ಮಳೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಸದಸ್ಯರ ಆಯ್ಕೆಗೆ ಮತದಾನ ಆರಂಭವಾಗಿದೆ.

58 ವಾರ್ಡ್‌ಗಳಲ್ಲಿ 385 ಅಭ್ಯರ್ಥಿಗಳು‌ ಕಣದಲ್ಲಿದ್ದಾರೆ. ಒಟ್ಟು 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತದಾನ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಇಲ್ಲಿ ಇದೇ ಮೊದಲಿಗೆ ರಾಜಕೀಯ ಪಕ್ಷಗಳು ತಮ್ಮ ಚಿಹ್ನೆ ಮೇಲೆ ಸ್ಪರ್ಧಿಸಿವೆ. ಇದರಿಂದಾಗಿ ‌ಚುನಾವಣೆ ಗಮನಸೆಳೆದಿದೆ. ಬಿಜೆಪಿಯ 55 ಹಾಗೂ ಕಾಂಗ್ರೆಸ್‌ನ 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತುಂತುರು ಮಳೆ ಆಗುತ್ತಿರುವುದು ಮತದಾನಕ್ಕೆ ಅಡ್ಡಿಯಾಗಿದೆ. ಮತಗಟ್ಟೆಗಳಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ಬೆರಳೆಣಿಕೆಯಷ್ಟು ಮರದಾರರಷ್ಟೆ ಕಂಡುಬಂದರು. ಮಳೆ ನಿಂತು ಬಿಸಿಲು ಬಂದ ಬಳಿಕ ಮತದಾನ ಬಿರುಸು ಪಡೆದುಕೊಂಡಿದೆ.

ಬೆಳಗಾವಿಯ ಶಾಹೂನಗರ ಸರ್ಕಾರಿ ಶಾಲೆಯ ಮತಗಟ್ಟೆಗೆ ನೂರು ಮೀಟರ್ ಹೊರಗೆ ಅಭ್ಯರ್ಥಿಗಳ ಕಡೆಯವರು ಹಾಕಿದ್ದ ಟೇಬಲ್‌ಗಳ ಬಳಿ ಜನರು ಸೇರಿದ್ದರು.

ಮತದಾರರ ಮನವೊಲಿಕೆಗೆ ಕಸರತ್ತು: ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಮತದಾನ ಆರಂಭವಾಗಿದ್ದು, ಅಭ್ಯರ್ಥಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರು ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ.

ಮತದಾನ ಕೇಂದ್ರಗಳ ನೂರು ಮೀಟರ್ ಅಂತರದ ಹೊರಗೆ ಟೆಂಟ್‌ಗಳನ್ನು ಹಾಕಿಕೊಂಡಿರುಬ ಅಭ್ಯರ್ಥಿಗಳ ಕಡೆಯವರು ಹಾಗೂ ಕಾರ್ಯಕರ್ತರು ಮತದಾರರಿಗೆ ಮತಗಟ್ಟೆ ಸಂಖ್ಯೆಯ ಚೀಟಿ ಬರೆದುಕೊಡುತ್ತಿದ್ದಾರೆ. ತಮ್ಮ ಅಭ್ಯರ್ಥಿಗೇ ಮತಹಾಕುವಂತೆ ಕೋರುತ್ತಿದ್ದಾರೆ.

ವಾರ್ಡ್ ನಂ.34ರ ಶಾಹೂನಗರ ಸರ್ಕಾರಿ ಶಾಲೆ ಆವರಣದ ಬಳಿಯೇ ಮತ ಯಾಚಿಸುತ್ತಿದ್ದ ಬಿಜೆಪಿ ಅಭ್ಯರ್ಥಿ ಶ್ರೇಯಸ್ ನಾಕಾಡಿ ಹಾಗೂ ಪಕ್ಷೇತರ ಅಭ್ಯರ್ಥಿ ವಂದನಾ ಬೆಳಗಾಂವಕರ ಅವರನ್ನು ಪೊಲೀಸರು ಹೊರಗೆ ಕಳುಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು