ಬೆಳಗಾವಿ: ಸಮೀಪದ ನಾವಗೆ ಗ್ರಾಮದಲ್ಲಿನ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಬ್ಬ ಕಾರ್ಮಿಕ ಸುಟ್ಟು ಕರಕಲಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ನಗರದ ನಿವಾಸಿ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಮೃತ ಕಾರ್ಮಿಕ. ಎರಡು ತಿಂಗಳ ಹಿಂದಷ್ಟೇ ಅವರು ಕೆಲಸಕ್ಕೆ ಸೇರಿದ್ದರು.
ಬೆಂಕಿಯಿಂದ ತೀವ್ರ ಗಾಯ ಗೊಂಡಿರುವ ಬೆಳಗಾವಿ ತಾಲ್ಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಜುನೇಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35) ಮತ್ತು ರಾಝವಾಡಿಯ ರಂಜೀತ ದಶರಥ ಪಾಟೀಲ (39) ಅವರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಟೇಪ್ (ಅಂಟು) ಇಲ್ಲಿ ತಯಾರಿಸಲಾಗುತ್ತದೆ. ಸುಮಾರು 400 ಕಾರ್ಮಿಕರು ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ಮಂಗಳವಾರ ರಾತ್ರಿ ಪಾಳಿಯಲ್ಲಿ 74 ಕಾರ್ಮಿಕರು ಕೆಲಸದಲ್ಲಿದ್ದರು. ಊಟಕ್ಕೆ ಹೊರಗೆ ಬಂದಾಗ, ಲಿಫ್ಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡಿತು. ಒಳಗಿದ್ದ ಎಂಟು ಕಾರ್ಮಿಕರ ಪೈಕಿ ಏಳು ಮಂದಿ ಹೊರಗೆ ಓಡಿದರು. ಲಿಫ್ಟ್‌ನಲ್ಲಿದ್ದ ಯಲ್ಲಪ್ಪ ಅಲ್ಲಿಯೇ ಸಿಕ್ಕಿಕೊಂಡರು’ ಎಂದು ಕಾರ್ಮಿಕರು ತಿಳಿಸಿದರು.
‘ಕಾರ್ಖಾನೆಯ ಒಳಗೆ ಪ್ಲಾಸ್ಟಿಕ್, ಮದ್ದಿನಂಥ ವಸ್ತುಗಳು ಹೆಚ್ಚಿದ್ದ ಕಾರಣ ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿತು. ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೆ 16 ಗಂಟೆ ಹರಸಾಹಸ ಪಟ್ಟ ಬಳಿಕ ಬೆಂಕಿ ನಂದಿಸಲಾಯಿತು. ಮೂರು ಅಂತಸ್ತಿನ ಕಾರ್ಖಾನೆಗೆ ಎರಡೇ ಪ್ರವೇಶ ದ್ವಾರಗಳಿದ್ದು, ಎತ್ತರದ ಗೋಡೆಗಳಿವೆ. ಇದರಿಂದ ಬೆಂಕಿ ನಂದಿಸಲು ಕಷ್ಟವಾಯಿತು’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.
ಮೂರು ಜಿಲ್ಲೆಗಳ 6 ಅಗ್ನಿಶಾಮಕ ವಾಹನ, 250 ಅಗ್ನಿ ನಂದಕ ಸಿಬ್ಬಂದಿ, 50 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸುತ್ತಮುತ್ತಲಿನ 10 ಕಿ.ಮೀ. ಪ್ರದೇಶದಲ್ಲಿ ದಟ್ಟ ಹೊಗೆ ಮತ್ತು ಪ್ಲಾಸ್ಟಿಕ್ ಸುಟ್ಟ ಘಾಟು ವಾಸನೆ ವ್ಯಾಪಿಸಿತ್ತು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿ 200 ಪೊಲೀಸರು ರಾತ್ರಿಯಿಡೀ ಸ್ಥಳದಲ್ಲೇ ಬೀಡು ಬಿಟ್ಟರು.
ಕಾರ್ಖಾನೆಯಲ್ಲಿ ಇರುವ ಬೃಹತ್ ಗಾತ್ರದ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡರೆ, ಭಾರಿ ಅನಾಹುತ ಸಂಭವಿಸಲಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದರು. ಇದನ್ನು ತಳ್ಳಿ ಹಾಕಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಸಿಲಿಂಡರ್‌ಗಳು ಸ್ಫೋಟವಾಗುವ ಸಾಧ್ಯತೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ 200 ಬೆಡ್ ಸಿದ್ಧಪಡಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.