ಬೆಳಗಾವಿ: ತಾಲ್ಲೂಕಿನ ಮುತಗಾದ ಗ್ರಾಮ್ ಒನ್ ಕೇಂದ್ರದ ‘ಯೂಸರ್ ಐಡಿ’ಯನ್ನು ಅಕ್ರಮವಾಗಿ ಬಳಸಿ ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡುತ್ತಿದ್ದ ಹಾಗೂ ಪ್ರತಿ ಅರ್ಜಿಗೆ ₹250 ತೆಗೆದುಕೊಳ್ಳುತ್ತಿದ್ದ ಆರೋಪದಡಿ ಇಲ್ಲಿನ ಚವಾಟ್ ಗಲ್ಲಿಯ ಜನತಾ ಆನ್‌ಲೈನ್ ಕೇಂದ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮತ್ತು ತಹಶೀಲ್ದಾರರು ಗುರುವಾರ ಜಪ್ತಿ ಮಾಡಿದರು.
‘ಕಿರಣ ಚೌಗಲಾ ಎಂಬಾತ ಗ್ರಾಮ ಒನ್ ಕೇಂದ್ರದ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅಕ್ರಮವಾಗಿ ಪಡೆದು, ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆ ಕೈಗೊಳ್ಳುತ್ತಿದ್ದ. ಆತ ಪ್ರತಿ ಅರ್ಜಿಗೆ ₹250 ಪಡೆಯುತ್ತಿರುವುದು ಕಂಡುಬಂದಿದೆ. ಅರ್ಜಿಗಳ ನೋಂದಣಿ ಕ್ರಮಾಂಕದ ಮೇಲೆ ಮುತಗಾ ಗ್ರಾಮ್ ಒನ್ ಕೇಂದ್ರದ ಐಡಿ ಪತ್ತೆಯಾಗಿದೆ. ಹಾಗಾಗಿ ಆನ್‌ಲೈನ್ ಸೆಂಟರ್ ಜಪ್ತಿಗೊಳಿಸಿದ್ದೇವೆ. ಮುತಗಾ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.