ಶನಿವಾರ, ಜುಲೈ 24, 2021
28 °C
ರಾಜ್ಯಸಭಾ ಟಿಕೆಟ್‌: ಇಬ್ಬರ ಜಗಳ ಮೂರನೇಯವನಿಗೆ ಲಾಭ;

ಕೋರೆ, ಕತ್ತಿ ಪೈಪೋಟಿ: ಕಡಾಡಿಗೆ ಒಲಿದ ಅದೃಷ್ಟ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಬೆಳಗಾವಿ: ಅತ್ಯಂತ ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿಯ ಬೆಳಗಾವಿ ವಿಭಾಗದ ಉಸ್ತುವಾರಿ ಈರಣ್ಣಾ ಕಡಾಡಿಯವರಿಗೆ ರಾಜ್ಯಸಭಾ ಟಿಕೆಟ್‌ ದಕ್ಕಿದೆ. ಹಾಲಿ ಸದಸ್ಯರಾಗಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅವರ ನಡುವೆ ನಡೆದ ತೀವ್ರ ಪೈಪೋಟಿಯ ನಡುವೆ ಈರಣ್ಣಾ ಅವರಿಗೆ ಟಿಕೆಟ್‌ ಸಿಕ್ಕಿರುವುದು ಆಶ್ಚರ್ಯ ಮೂಡಿಸಿದೆ. ಇಬ್ಬರ ಜಗಳ, ಮೂರನೇಯವನಿಗೆ ಲಾಭ ಎನ್ನುವಂತೆ ಈರಣ್ಣಾ ಅವರಿಗೆ ಟಿಕೆಟ್‌ ದಕ್ಕಿದೆ.

ಲಿಂಗಾಯತ (ಪಂಚಮಸಾಲಿ) ಸಮುದಾಯಕ್ಕೆ ಸೇರಿದ ಈರಣ್ಣಾ ಅವರು ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಲ್ಲೋಳಿ ಗ್ರಾಮದವರು. ಅವರು ತಮ್ಮ 22ನೇ ವಯಸ್ಸಿನಿಂದಲೇ ಪಕ್ಷದ ಜೊತೆ ಗುರುತಿಸಿಕೊಂಡವರು. ಸಂಘ ಪರಿವಾರದಲ್ಲೂ ಸಕ್ರಿಯವಾಗಿ ದುಡಿದಿದ್ದಾರೆ. ಸುಮಾರು 32 ವರ್ಷಗಳ ಕಾಲ ಪಕ್ಷದಲ್ಲಿ ದುಡಿದ ಅವರಿಗೆ ರಾಜ್ಯಸಭಾ ಟಿಕೆಟ್‌ ದೊರೆತಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ಈರಣ್ಣಾ ಅವರು ಹೆಚ್ಚಿನ ಸಮಯ ಪಕ್ಷ ಸಂಘಟಿಸುವಲ್ಲಿಯೇ ಕಳೆದಿದ್ದಾರೆ. ಅರಭಾವಿ ಯುವ ಮೋರ್ಚಾ ಅಧ್ಯಕ್ಷ, ಅರಭಾವಿ ಮಂಡಳ ಅಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಮಿತಿ ಕಾರ್ಯದರ್ಶಿ ಹಾಗೂ ಬೆಳಗಾವಿ ವಿಭಾಗದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2008ರಲ್ಲಿ ಧಾರವಾಡದ ಎನ್‌ಜಿಇಎಫ್‌ ಅಧ್ಯಕ್ಷರಾಗಿ ಹಾಗೂ 2010ರಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಇವರು ಪಕ್ಷಕ್ಕಾಗಿ ದುಡಿದ ಸೇವೆಯನ್ನು ಗಮನಿಸಿದರೆ, ಇವರಿಗೆ ಸಿಕ್ಕ ಅಧಿಕಾರಾವಧಿ ಕಡಿಮೆಯಾಗಿತ್ತು. ಈ ಕೊರತೆಯನ್ನು ರಾಜ್ಯಸಭಾ ಟಿಕೆಟ್‌ ನೀಡುವ ಮೂಲಕ ಹೈಕಮಾಂಡ್‌ ನೀಗಿಸಿದೆ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

ಹೈಕಮಾಂಡ್‌ ಸಂದೇಶ:

‘ನಾಯಕರ ವೈಯಕ್ತಿಕ ವರ್ಚಸ್ಸು, ಸಿರಿತನ, ಹಿರಿತನಕ್ಕಿಂತ ಪಕ್ಷ ಸಂಘಟನೆಯಲ್ಲಿ ತೊಡಗಿರುವವರಿಗೆ ಆದ್ಯತೆ ಎನ್ನುವ ಸ್ಪಷ್ಟ ಸಂದೇಶವನ್ನು ಹೈಕಮಾಂಡ್‌ ಈ ಮೂಲಕ ರವಾನಿಸಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿರುವವರಿಗೆ ಪ್ರೋತ್ಸಾಹಿಸುವುದು, ಆತ್ಮ ವಿಶ್ವಾಸ ಮೂಡಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ. ಮುಂಬರುವ ದಿನಗಳಲ್ಲಿ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಪಕ್ಷ ಕಟ್ಟಲಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಮುಂದಿನ ನಡೆ ಏನು?:

ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ ಕೋರೆ ಅವರು ಇನ್ನೊಂದು ಅವಧಿಗೆ ಸದಸ್ಯರಾಗಲು ಬಯಸಿದ್ದರು. 1990, 2008 ಹಾಗೂ 2014ರಲ್ಲಿ ಆಯ್ಕೆಯಾಗಿದ್ದರು. ಇದೇ ತಿಂಗಳಲ್ಲಿ ಅವರ ಅವಧಿ ಮುಗಿಯಲಿದ್ದು, ತಮ್ಮನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಬೇಕೆಂದು ಅವರು ಹೈಕಮಾಂಡ್‌ಗೆ ಕೇಳಿಕೊಂಡಿದ್ದರು.

ಕತ್ತಿ ಅಡ್ಡಗಾಲು:

ಕಳೆದ ಬಾರಿ ತಮಗೆ ಲೋಕಸಭಾ ಚುನಾವಣೆಗೆ ಟಿಕೆಟ್‌ ನೀಡಲಿಲ್ಲ. ಈ ಸಲ ರಾಜ್ಯಸಭಾ ಟಿಕೆಟ್‌ ನೀಡಲೇಬೇಕು ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಪಕ್ಷದ ಹೈಕಮಾಂಡ್‌ಗೆ ಒತ್ತಡ ಹೇರಿದ್ದರು. ಅವರ ಸಹೋದರ ಶಾಸಕ ಉಮೇಶ ಕತ್ತಿ ಬೆನ್ನೆಲುಬಾಗಿ ನಿಂತಿದ್ದರು. ಉತ್ತರ ಕರ್ನಾಟಕದ ಶಾಸಕರನ್ನು ಒಗ್ಗೂಡಿಸಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು.

ಕೋರೆ ಹಾಗೂ ಕತ್ತಿ ಇಬ್ಬರೂ ಪ್ರಭಾವಿ ನಾಯಕರಾಗಿದ್ದರಿಂದ ಇಬ್ಬರ ಹೆಸರನ್ನೂ ರಾಜ್ಯ ವರಿಷ್ಠರು ಪಕ್ಷದ ಕೇಂದ್ರ ಸಮಿತಿಗೆ ರವಾನಿಸಿದ್ದರು. ಆದರೆ, ಕೇಂದ್ರ ಸಮಿತಿಯು ಇವರನ್ನು ಬಿಟ್ಟು, ಈರಣ್ಣಾ ಅವರಿಗೆ ಟಿಕೆಟ್‌ ನೀಡಿದೆ.

ಉತ್ತರ ಕರ್ನಾಟಕದ ಬೃಹತ್‌ ಶಿಕ್ಷಣ ಸಂಸ್ಥೆ ಕೆಎಲ್‌ಇ ಕಾರ್ಯಾಧ್ಯಕ್ಷರೂ ಆಗಿರುವ ಪ್ರಭಾಕರ ಕೋರೆ ಅವರು ತಮ್ಮದೇ ಪ್ರಭಾವ ಹೊಂದಿದ್ದಾರೆ. ಅದೇ ರೀತಿ, ಕತ್ತಿ ಸಹೋದರರು ಕೂಡ ರಾಜಕೀಯದಲ್ಲಿ ಸಾಕಷ್ಟು ಹಿಡಿತ ಹೊಂದಿದ್ದಾರೆ. ಟಿಕೆಟ್‌ ಸಿಗದಿದ್ದರಿಂದ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲ ಕೆರಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು