ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಲವು ವಿಶೇಷಗಳಿಗೆ ಸಾಕ್ಷಿಯಾದ ಚುನಾವಣೆ

Last Updated 6 ಸೆಪ್ಟೆಂಬರ್ 2021, 14:50 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯು ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು.

ಮಾಜಿ ಪತ್ರಕರ್ತೆಗೆ ಸೋಲು

ವಾರ್ಡ್ ನಂ.21ರಿಂದ ಸ್ಪರ್ಧಿಸಿದ್ದ ಮಾಜಿ ಪತ್ರಕರ್ತೆ ಸರಳಾ ಸಾತ್ಪುತೆ ಉತ್ತಮ ಪೈಪೋಟಿ ನೀಡಿ ಸೋಲನುಭವಿಸಿದ್ದಾರೆ. ಅಲ್ಲಿ ಬಿಜೆಪಿಯ ಪ್ರೀತಿ ಕಾಮಕರ್ ಜಯ ಸಾಧಿಸಿದ್ದಾರೆ. ಅಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇತ್ತು. ಅಲ್ಲಿ ‘ನೋಟಾ’ಗೆ 117 ಮತಗಳು ಬಂದಿವೆ.

ವೈದ್ಯರಿಗೆ ಸೋಲು

ಕಣದಲ್ಲಿ ಇಬ್ಬರು ವೈದ್ಯ ಪದವೀಧರರಿದ್ದರು. ವಾರ್ಡ್‌ ನಂ.36ರಲ್ಲಿ ಕಾಂಗ್ರೆಸ್‌ನ ಡಾ.ದಿನೇಶ್ ನಾಶಿಪುಡಿ ಮರು ಆಯ್ಕೆ ಬಯಸಿದ್ದರು. 48ನೇ ವಾರ್ಡ್‌ನಿಂದ ಡಾ.ಸುಭಾಷ್ ಅಲಕನೂರೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರಿಗೆ ಮತದಾರರು ಮಣೆ ಹಾಕಿಲ್ಲ.

ಎಂಜಿನಿಯರಿಂಗ್‌ ಪದವೀಧರ ಶ್ರೇಯಸ್ ನಾಕಾಡಿ ವಾರ್ಡ್ ನಂ.34ರಿಂದ ಗೆದ್ದಿದ್ದಾರೆ. ಬಿಜೆಪಿಯ ಜಿಲ್ಲಾ ಘಟಕದ ವಕ್ತಾರ ಹನುಮಂತ ಕೊಂಗಾಲಿ ಬಿ.ಎ. ಎಲ್‌ಎಲ್‌ಬಿ (46ನೇ ವಾರ್ಡ್‌) ಪದವೀಧರಾಗಿದ್ದು, ಗೆಲುವು ಸಾಧಿಸಿದ್ದಾರೆ.

ಕನ್ನಡ ಹೋರಾಟಗಾರರ ಪತ್ನಿಯರಿಗೆ ಸೋಲು

ನಗರಪಾಲಿಕೆ ಮಾಜಿ ಸದಸ್ಯ ಮತ್ತು ಕನ್ನಡ ಹೋರಾಟಗಾರರೂ ಆಗಿರುವ ರಮೇಶ ಸೊಂಟಕ್ಕಿ ಪತ್ನಿ ಜಯಶ್ರೀ ಅವರನ್ನು ಪಕ್ಷೇತರರಾಗಿ ವಾರ್ಡ್‌ ನಂ.40ರಿಂದ ಕಣಕ್ಕಿಳಿಸಿದ್ದರು. ಅದೇ ವಾರ್ಡ್‌ನಲ್ಲಿ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಪತ್ನಿ ಉಮಾ ಸ್ಪರ್ಧೆಯಲ್ಲಿದ್ದರು. ಅಲ್ಲಿ ಕನ್ನಡ ಹೋರಾಟಗಾರರ ಕುಟುಂಬಗಳ ನಡುವೆ ಗೆಲುವಿಗಾಗಿ ಪೈಪೋಟಿ ನಡೆದಿತ್ತು. ಬಿಜೆಪಿಯ ರೇಷ್ಮಾ ಕಾಮಕರ ಗೆದ್ದಿದ್ದಾರೆ. ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಹಾಕಿರಲಿಲ್ಲ.

ಒಂದೇ ಕುಟುಂಬದ ಇಬ್ಬರಿಗೆ ಜಯ

ಒಂದೇ ಕುಟುಂಬದ ಇಬ್ಬರು ಮಹಿಳೆಯರು ವಿಭಿನ್ನ ಪಕ್ಷದಿಂದ ಗೆದ್ದಿ ಗಮನಸೆಳೆದಿದ್ದಾರೆ.

47ನೇ ವಾರ್ಡ್‌ನಲ್ಲಿ ‍ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಸ್ಮಿತಾ ಭೈರಗೌಡ ಪಾಟೀಲ ಹಾಗೂ 55ನೇ ವಾರ್ಡ್‌ನಿಂದ ಸವಿತಾ ಮುರುಗೇಂದ್ರಗೌಡ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.

ಮುಜಮ್ಮಿಲ್ ‘ಹ್ಯಾಟ್ರಿಕ್’ ಸಾಧನೆ

ವಾರ್ಡ್ ನಂ.3ರಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮುಜಮ್ಮಿಲ್ ಡೋಣಿ ಸತತ ಮೂರನೇ ಬಾರಿಗೆ ಆಯ್ಕೆಯಾಗಿ ಸಾಧನೆ ಮಾಡಿದರು. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಫಿರೋಜ್‌ ಸೇಠ್‌ ಅವರ ಆಪ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

‘ಸತತ ಮೂರು ಬಾರಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷವು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ನೀಡಿತ್ತು. ಈಗ
ಅವರ ವಿಶ್ವಾಸ ಉಳಿಸಿಕೊಂಡಿದ್ದೇನೆ. ಬರುವ ದಿನಗಳಲ್ಲಿ ಕ್ಷೇತ್ರದ ಸಮಗ್ರ ಆಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ದಕ್ಷಿಣದಲ್ಲಿ ಬಿಜೆಪಿಗೆ ‘ಅಭಯ’

ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಭಾಷಿಕರನ್ನು ಹೊಂದಿರುವ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಗಮನಸೆಳೆದಿದೆ. ಆ ಕ್ಷೇತ್ರದ ವ್ಯಾಪ್ತಿಯಲ್ಲಿನ ಒಟ್ಟು 25 ವಾರ್ಡ್‌ಗಳ ಪೈಕಿ 22ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಶಾಸಕ ಅಭಯ ಪಾಟೀಲ ಕ್ಷೇತ್ರದಲ್ಲಿನ ತಮ್ಮ
ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಮುಖಭಂಗ ಆಗುವಂತೆ ತಂತ್ರ ರೂಪಿಸಿ ಯಶಸ್ವಿಯೂ ಆಗಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿಯ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಎಐಎಂಐಎಂ ‘ಖಾತೆ’

ಇಲ್ಲಿನ ಮಹಾನಗರಪಾಲಿಕೆಯಲ್ಲಿ ಎಐಎಂಐಎಂ ಖಾತೆ ತೆರೆದು ಗಮನಸೆಳೆದಿದೆ. ವಾರ್ಡ್ ನಂ.18ರಿಂದ ಜಯ ಗಳಿಸುವ ಮೂಲಕ ಶಾಹಿದ್‌ಖಾನ್ ಪಠಾಣ ಮಹಾನಗರಪಾಲಿಕೆಯಲ್ಲಿ ಮೊಟ್ಟಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಗೆಲುವಿನ ಖಾತೆ ತೆರೆಯುವಂತೆ ಮಾಡಿದ್ದಾರೆ. ‘ನನ್ನ ಗೆಲುವಿನ ಶ್ರೇಯಸ್ಸು ಪಕ್ಷದ ನಾಯಕರು ಹಾಗೂ ಮತದಾರರಿಗೆ ಸಲ್ಲಬೇಕು’ ಎಂದು ಹೇಳಿದರು.

ಇದೇ ಮೊದಲ ಬಾರಿಗೆ 27 ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಜೊತೆಗೆ ಜೆಡಿಎಸ್‌ ಕೂಡ ತೀವ್ರ ಮುಖಭಂಗ ಅನುಭವಿಸಿದೆ.

ಮೊದಲ ಯತ್ನದಲ್ಲೇ ಗೆದ್ದ ವಾಣಿ

ವಾರ್ಡ್ ನಂ.43ರಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪತ್ರಕರ್ತ ವಿಲಾಸ ಜೋಶಿ ಅವರ ಪತ್ನಿ ವಾಣಿ ಜೋಶಿ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಮಹಾನಗರ ಪಾಲಿಕೆ ಪ್ರವೇಶ ಮಾಡಿದ್ದಾರೆ. ಈ ವಾರ್ಡ್‌ ತೀವ್ರ ಪೈಪೋಟಿಯಿಂದ ಕೂಡಿತ್ತು. ಎಂಇಎಸ್ ಮುಖಂಡ ಹಾಗೂ ಮಾಜಿ ಮೇಯರ್ ಕಿರಣ ಸಾಯನಾಕ ಅವರ ಪತ್ನಿ ಜಯಶೀಲಾ ಸಾಯನಾಕ ಅವರನ್ನು 421 ಮತಗಳಿಂದ ಸೋಲಿಸಿದರು.

ಬಂಡಾಯ ಸಾರಿದವರು ಗೆಲ್ಲಲಿಲ್ಲ

ಟಿಕೆಟ್ ಸಿಗಲಿಲ್ಲವೆಂಬ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ತೊಡೆತಟ್ಟಿದ್ದ ಆಯಾ ಪಕ್ಷಗಳ ಬಂಡಾಯ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಮುಖ್ಯವಾಗಿ ಬಿಜೆಪಿಯಲ್ಲಿ ಮಾಜಿ ನಗರ ಸೇವಕಿ ಹಾಗೂ ಮಾಜಿ ಉಪಮೇಯರ್‌ ಜ್ಯೋತಿ ಭಾವಿಕಟ್ಟಿ, ನಗರಪಾಲಿಕೆ ಮಾಜಿ ಸದಸ್ಯ ದೀಪಕ ಜಮಖಂಡಿ ಸೋತ ಪ್ರಮುಖಂರು. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಮಾಡಿದ್ದ 9 ಮಂದಿಯನ್ನು ಬಿಜೆಪಿ ವರಿಷ್ಠರು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದಾರೆ. ಪಕ್ಷಕ್ಕೆ ಸವಾಲೆಸೆದು ಕಣದಲ್ಲಿದ್ದವರು ಸೋತಿದ್ದಾರೆ. ವಾರ್ಡ್‌ ನಂ.47ರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಮೇಯರ್‌ ಶಿವಾಜಿ ಸುಂಠಕರ ಅವರ ಪತ್ನಿ ಸುಲೋಚನಾ ಸುಂಠಕರ ಸೋಲನುಭವಿಸಿದ್ದಾರೆ. ಕಾಂಗ್ರೆಸ್‌ನಿಂದ ಬಂಡಾಯವಾಗ ಸ್ಪರ್ಧಿಸಿದ್ದ ಜಯಶ್ರೀ ಮಾಳಗಿ ಅವರೂ ಗೆಲ್ಲಲಾಗಿಲ್ಲ.

ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮನೆಗಳಿರುವ ವಾರ್ಡನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಮಾಜಿ ಶಾಸಕ ಫಿರೋಜ್ ಸೇಠ್‌ ಅವರ ಮನೆಗಳಿರುವ ವಾರ್ಡ್‌ ನಂ.23ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಅನಂತಕುಮಾರ ಬ್ಯಾಕೂಡ ಸೋಲು ಕಂಡಿದ್ದಾರೆ. ನಗರಪಾಲಿಕೆ ಮಾಜಿ ಸದಸ್ಯರಾದ ಅನುಶ್ರೀ ದೇಶಪಾಂಡೆ, ಡಾ.ದಿನೇಶ ನಾಶೀಪುಡಿ, ಸರಳಾ ಹೇರೇಕರ, ಪುಷ್ಪಾ ಪರ್ವತರಾವ್ ಸೋಲು ಕಂಡಿದ್ದಾರೆ.

ಕೌಜಲಗಿ ಸೊಸೆಗೆ ಸೋಲು

ಏಳು ಬಾರಿ ಶಾಸಕರಾಗಿದ್ದ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿ.ವಿ.ಎಸ್. ಕೌಜಲಗಿ ಅವರ ಸೊಸೆ ಸೀಮಾ ರಾಜದೀಪ ಕೌಜಲಗಿ ವಾರ್ಡ್ ನಂ.29ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

ಮಾತಿನ ಮಲ್ಲರಿಗೆ ಸೋಲು

ಕಳೆದ ಬಾರಿಯ ಮಹಾನಗರಪಾಲಿಕೆ ಕೌ‌ನ್ಸಿಲ್‌ನಲ್ಲಿ ತಮ್ಮ ಮಾತಿನ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದ ದೀಪಕ ಜಮಖಂಡಿ, ಪಂಡರಿ ಪರಬ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಸೋಲಿಸಿದ್ದಾರೆ. ಮೊದಲಿಂದಲೂ ಬಿಜೆಪಿಯಲ್ಲಿದ್ದ ಹಾಗೂ ಆರ್‌ಎಸ್ಎಸ್‌ ಕಾರ್ಯಕರ್ತ ದೀಪಕ ಜಮಖಂಡಿ ಅವರಿಗೆ ಪಕ್ಷದ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ, ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಇದೇ ಕಾರಣದಿಂದ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಅವರು ಈಗ ಅತಂತ್ರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT