ಬುಧವಾರ, ಮಾರ್ಚ್ 29, 2023
32 °C
ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ

ದೀಪಗಳ ಹಬ್ಬಕ್ಕೆ ಕುಂದಾನಗರಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ‘ಬೆಳಕಿನ ಹಬ್ಬ’ ದೀಪಾವಳಿಯನ್ನು ಈ ಬಾರಿ ಸಂಭ್ರಮ–ಸಡಗರದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.

ಮನೆಗಳಲ್ಲಿ ಆಕರ್ಷಕ ಆಕಾಶಬುಟ್ಟಿಗಳು ತೂಗಾಡುತ್ತಿದ್ದು, ಸಡಗರದ ಸಂದೇಶವನ್ನು ಸಾರುತ್ತಿವೆ. ಹಬ್ಬವು ಕೊರೊನಾ ಸಾಂಕ್ರಾಮಿಕದ ಆತಂಕ ದೂರ ಮಾಡಿ ಹೊಸಬೆಳಕು ನೀಡಲಿ ಎಂಬ ಆಶಯದಲ್ಲಿ ಜನರಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಮನೆಗಳು, ಅಂಗಡಿಗಳು, ಕೆಲಸದ ಸ್ಥಳಗಳಲ್ಲಿ ಲಕ್ಷ್ಮಿ ಪೂಜೆ ಮಾಡುವುದು ವಿಶೇಷ. ಇದಕ್ಕಾಗಿ ಜನರು ಮಂಗಳವಾರ ಸಿದ್ಧತೆ ಮಾಡಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಅವರು ಮುಗಿಬಿದ್ದಿದ್ದರಿಂದಾಗಿ, ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ವಿವಿಧ ಮಾದರಿಯ, ವಿನ್ಯಾಸದ ಮತ್ತು ಬಣ್ಣದ ಆಕಾಶ ಬುಟ್ಟಿಗಳು, ಹಣತೆಗಳು, ಬಣ್ಣ ಬಣ್ಣದ ರಂಗೋಲಿ ಪುಡಿಗಳು, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆಗಳ ಖರೀದಿಯಲ್ಲಿ ಜನರು ತೊಡಗಿದ್ದರು.

ಲಕ್ಷ್ಮಿ ಪೂಜೆ ಹಿನ್ನೆಲೆಯಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇತ್ತು. ಎಂದಿಗಿಂತ ಸರಾಸರಿ ಶೇ 20ರಷ್ಟು ಬೆಲೆ ಹೆಚ್ಚಾಗಿತ್ತು. ಬೆಲೆ ಏರಿಕೆಯ ನಡುವೆಯೂ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಪೂಜೆ ಬಳಿಕ ಸಿಹಿ ಹಂಚುವುದು ಅಥವಾ ಸಿಹಿ ತಿನಿಸುಗಳ ಡಬ್ಬಿಗಳನ್ನು ಉಡುಗೊರೆಯಾಗಿ ಕೊಡುವುದು ಇಲ್ಲಿನ ಸಂಪ್ರದಾಯ. ಹೀಗಾಗಿ, ಸಿಹಿ ತಿನಿಸುಗಳಿಗೂ ಬೇಡಿಕೆ ಕಂಡುಬಂದಿದೆ.

ಮನೆಗಳ ಮುಂದೆ ಅಕಾಶಬುಟ್ಟಿಗಳನ್ನು ಕಟ್ಟಿ, ದೀಪಾಲಂಕಾರ ಮಾಡುವುದು ಸಾಮಾನ್ಯ. ಹೀಗಾಗಿ, ಹಲವು ಬಣ್ಣ ಹಾಗೂ ವಿನ್ಯಾಸದ ಅಕಾಶಬುಟ್ಟಿಗಳು ಮಾರುಕಟ್ಟೆಗೆ ಬಂದಿವೆ. ಇವುಗಳ ಬೆಲೆ ಸರಾಸರಿ ₹ 100ರಿಂದ ₹2,500ವರೆಗೂ ಇದೆ.

ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲ್ಲೂಕುಗಳಲ್ಲಿ ಮನೆಗಳ ಬಳಿ ಅಥವಾ ಗಲ್ಲಿಯಲ್ಲಿ ಮಕ್ಕಳು ಕೋಟೆ ಮಾದರಿ ಕಟ್ಟಿ ಪ್ರದರ್ಶಿಸುವುದು ವಿಶೇಷ. ಕೋಟೆಗಳು ಅಲ್ಲಲ್ಲಿ ಸಿದ್ಧವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಗಣಿಯಿಂದ ಮಾಡಿದ ಮೂರ್ತಿಗಳನ್ನು ‘ಹಟ್ಟೆವ್ವ’ ಅಥವಾ ‘ಪಾಂಡವರು’ ಎಂದು ಹೆಸರಿಸಿ ಪೂಜಿಸುವ ಸಂಪ್ರದಾಯವಿದೆ. ಮೂಡಲಗಿ ಮೊದಲಾದ ಕಡೆಗಳಲ್ಲಿ ಕುರಿಗಾಹಿಗಳು ಕುರಿಗಳನ್ನು ಬೆದರಿಸುವ ಕಾರ್ಯಕ್ರಮ ನಡೆಸುತ್ತಾರೆ. ಅಲ್ಲದೇ, ರಾತ್ರಿ ವೇಳೆ ಜನರು ಪಗಡೆ ಆಡುವ ಆಚರಣೆಯೂ ಆ ಭಾಗದಲ್ಲಿದೆ. ನಗರದ ಅಲ್ಲಲ್ಲಿ ಗೌಳಿಗರು ಎಮ್ಮೆ ಮತ್ತು ಕೋಣಗಳನ್ನು ಅಲಂಕರಿಸಿ ಮೆರವಣಿಗೆ ನಡೆಸುತ್ತಾರೆ. ತಮ್ಮ ಜೀವನೋಪಾಯಕ್ಕೆ ಸಹಕಾರಿಯಾಗಿರುವ ರಾಸುಗಳಿಗೆ ನಮಿಸುತ್ತಾರೆ.

ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಕೋವಿಡ್ ಸಾಂಕ್ರಾಮಿಕ ಹರಡುವಿಕೆ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಹೀಗಾಗಿ, ಹಬ್ಬಕ್ಕೆ ಕಳೆ ಬಂದಿದೆ. ಜನರು ಮಾರುಕಟ್ಟೆಗಳ ಕಡೆಗೆ ಬರುತ್ತಿರುವುದರಿಂದ ವರ್ತಕರು ಕೂಡ ಖುಷಿಯಾಗಿದ್ದಾರೆ. ಹಬ್ಬದ ಸಂದರ್ಭದಲ್ಲಿ ಒಂದಷ್ಟು ಗಳಿಕೆ ಕಾಣಬಹುದು ಎನ್ನುವ ನಿರೀಕ್ಷೆ ಅವರದಾಗಿದೆ. ಮಾರುಕಟ್ಟೆಗಳಲ್ಲಿ ಕಂಡು ಬಂದ ಜನಸಂದಣಿಯು ಮಾರುಕಟ್ಟೆ ಚೇತರಿಕೆಯ ಆಶಾದಾಯಕ ಸಂದೇಶವನ್ನು ರವಾನಿಸಿತು.

ಬಿಜೆಯಿಂದ ಅಷ್ಟಗಂಧ, ಹಣತೆ ವಿತರಣೆ

ದೀಪಾವಳಿಯ ಹಬ್ಬದ ನಿಮಿತ್ತ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳದವರು 90 ಗ್ರಾಮಗಳ 20ಸಾವಿರ ಮನೆಗಳಿಗೆ ಉಚಿತವಾಗಿ ಅಷ್ಟಗಂಧವನ್ನು ವಿತರಿಸಿದರು.

ಗಣೇಶಪುರದ ಜ್ಯೋತಿ ನಗರದ ನಿವಾಸಿಗಳಿಗೆ ಮಂಗಳವಾರ ಸಿಹಿ ಹಾಗೂ ಅಷ್ಟಗಂಧವನ್ನು ವಿತರಿಸಿದರು.

‘ಹಿಂದೂ ಧರ್ಮದ ಪರಂಪರೆ ಹಾಗೂ ದೀಪಾವಳಿಯಲ್ಲಿ ಅಭ್ಯಂಗಸ್ನಾದ ಮಹತ್ವ ತಿಳಿಸುವುದಕ್ಕಾಗಿ ಅಷ್ಟಗಂಧವನ್ನು ಮನೆಮನೆಗೆ ವಿತರಿಸಿದ್ದೇವೆ’ ಎಂದು ಮಂಡಳ ಅಧ್ಯಕ್ಷ ಧನಂಜಯ ಜಾಧವ ತಿಳಿಸಿದರು.

ಪ್ರಧಾನ ಕಾರ್ಯದರ್ಶಿಗಳಾದ ಪಂಕಜ ಘಾಡಿ ಮತ್ತು ಬಸವರಾಜ ಧಮನಗಿ, ಕಾರ್ಯಾಲಯ ಕಾರ್ಯದರ್ಶಿ ನಾರಾಯಣ ಪಾಟೀಲ, ಯತ್ತೇಶ ಹೆಬ್ಬಾಳಕರ, ಅನಿಲ ಪಾಟೀಲ, ಪ್ರದೀಪ ಪಾಟೀಲ, ಭುಜಂಗ ಸಾಲಗುಡೆ, ಲಿಂಗರಾಜ ಹಿರೇಮಠ, ಭಾಗ್ಯಶ್ರೀ ಕೊಕಿತಕರ ಮೊದಲಾದವರು ಪಾಲ್ಗೊಂಡಿದ್ದರು.

ಬಿಜೆಪಿ ಮುಖಂಡ ಡಾ.ರವಿ ಬಿ. ಪಾಟೀಲ ಅವರು ಉತ್ತರ ಮತಕ್ಷೇತ್ರದ ಮನೆ ಮನೆಗಳಿಗೆ ಹಣತೆಗಳನ್ನು ವಿತರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.