ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಒಂದಾಗಿ ಬಾಳಿದವರು, ಒಂದಾಗಿಯೇ ಹೋದರು!

ಜಾತಿ– ಧರ್ಮದ ಎಲ್ಲೆ ಮೀರಿ ದುಡಿಯುವ ಗ್ಯಾಂಗು ಕಟ್ಟಿದ ಬಡವರು
Last Updated 27 ಜೂನ್ 2022, 2:51 IST
ಅಕ್ಷರ ಗಾತ್ರ

ಬೆಳಗಾವಿ: ಆ ಎಲ್ಲ 18 ಮಂದಿಯೂ ಒಂದಾಗಿ ಬಾಳಿದರು. ಒಂದಾಗಿಯೇ ದುಡಿಯಲು ಹೋಗುತ್ತಿದ್ದರು. ಒಂದು ತುತ್ತು ಅನ್ನ ಸಿಕ್ಕರೂ, ಒಂದು ರೂಪಾಯಿ ಕೂಲಿ ಪಡೆದರೂ ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ಅವರಲ್ಲಿ ಏಳು ಮಂದಿ ಸಾವಿನಲ್ಲೂ ಒಂದಾದರು..!

ಗೋಕಾಕ ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದ ಮುನ್ನಾ ದೇಸಾಯಿ ಅವರು, ದುಡಿಮೆಯನ್ನೇ ನಂಬಿ ಬದುಕಿದವರ ಈ ಕತೆಯನ್ನು ‘ಪ್ರಜಾವಾಣಿ’ ಮುಂದೆ ಬಿಚ್ಚಿಟ್ಟರು.

ಸಮೀಪದ ಕಳ್ಯಾಳ್‌ ಗ್ರಾಮದ ಬಳಿ ಭಾನುವಾರ ಕ್ರೂಸರ್‌ ಪಲ್ಟಿಯಾಗಿ ಏಳು ಮಂದಿ ಮೃತಪಟ್ಟು, ಹನ್ನೊಂದು ಮಂದಿ ಗಾಯಗೊಂಡರು. 18 ಮಂದಿಯೂ ದುಡಿಯುವುದಕ್ಕಾಗಿ ಒಂದು ತಂಡ ಕಟ್ಟಿಕೊಂಡಿದ್ದರು. ಎಲ್ಲಿಯೇ ದುಡಿಮೆಗೆ ಹೋದರೂ ಜೊತೆಯಾಗೇ ಹೋಗುವುದು, ಎಲ್ಲ ಕೆಲಸಗಳನ್ನು ಸಮಾನಾಗಿಯೇ ಮಾಡುವುದು, ಬಂದ ಕೂಲಿಯನ್ನು ಸಮನಾಗೇ ಹಂಚಿಕೊಳ್ಳುವುದು ಅವರ ದಿನಚರಿ.

ಬಹಳ ವರ್ಷಗಳಿಂದ ಮುನ್ನಾ ಅವರ ಹೊಲದಲ್ಲೇ ಕೆಲಸ ಮಾಡುತ್ತಿದ್ದ ಇವರು, ಈಗ ಮಳೆ ಕೊರತೆಯ ಕಾರಣ ಹೊಲದಲ್ಲಿ ಕೆಲಸವಿಲ್ಲ ಎಂದು ಕೂಲಿಗೆ ಬೆಳಗಾವಿ ಕಡೆಗೆ ಹೊರಟಿದ್ದರು. ಅದು ಕೂಡ ಕೇವಲ ನಾಲ್ಕು ದಿನಗಳಿಂದ.

‘ಅವರ ಗ್ಯಾಂಗಿನ್ಯಾಗ ಲಿಂಗವಂತರು ಅದಾರಿ, ಮರಾಠಾ, ಎಸ್ಸಿ– ಎಸ್‌ಟಿ, ಮುಸ್ಲಿಂ ಅದಾರ. ಆದರೆ, ಯಾವತ್ತೂ ಅವರಿಗೆ ಜಾತಿ– ಧರ್ಮ ಅನ್ನೂದು ಫರಕ್‌ ಬರಲಿಲ್ಲ. ಹೊಟ್ಟಿತುಂಬ ಉಣ್ಣೋದು, ಮೈತುಂಬ ದುಡಿಯೋದು ಅದೇ ಅವರ ಧರ್ಮ...’ಎಂದುಕಣ್ಣೀರಾದರುಮುನ್ನಾ.

‘ಯಾವತ್ತೂ ಒಬ್ಬರನ್ನು ಹೊರಗಿಟ್ಟು ಕೆಲಸಕ್ಕೆ ಹೋದವರಲ್ಲ. ಆ ನಂಬಿಕೆ, ಆ ಒಗ್ಗಟ್ಟು ದೇವರಿಗೂ ನೋಡಾಕ ಆಗಲಿಲ್ಲರಿ. ಗ್ಯಾಂಗ್‌ ಒಡೆದುಬಿಟ್ಟ... ಬಾಳೇವು ಮೂರಾಬಟ್ಟಿ ಆತು...’ ಎಂದು ದುಃಖಿಸಿದರು ಗ್ರಾಮದ ಮಹಿಳೆ.

ಶವಾಗಾರದ ಮುಂದೆ ಆಕ್ರಂದನ: ಏಳು ಜನರ ಮರಣೋತ್ತರ ಪರೀಕ್ಷೆ ಭಾನುವಾರ ಸಂಜೆಗೆ ಮುಕ್ತಾಯವಾಗಿದ್ದು. ಕುಟುಂಬಸ್ಥರು ತಮ್ಮ ಊರುಗಳಿಗೆ ಶವಗಳನ್ನು ತೆಗೆದುಕೊಂಡು ಹೋದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಶವಗಳನ್ನು ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.

ಕೊನೆಯ ಬಾರಿ ಮುಖ ನೋಡಲು ಶವಾಗಾರದ ಮುಂದೆ ಸೇರಿದ ಗ್ರಾಮಸ್ಥರು, ಕುಟುಂಬಸ್ಥರು, ಸ್ನೇಹಿತರು ಇನ್ನಿಲ್ಲದಂತೆ ಗೋಗರೆದರು.

ಆಸ್ಪತ್ರೆ ಮುಂಭಾಗದಲ್ಲಿ ರಸ್ತೆ ಮೇಲೆ ಬಿದ್ದು ಹೊರಳಾಡಿದ ಮಹಿಳೆಯರನ್ನು ಸಮಾಧಾನ ಮಾಡಲು ಪೊಲೀಸರು, ಆಸ್ಪತ್ರೆ ಸಿಬ್ಬಂದಿ ಪರದಾಡಿದರು.

ರಕ್ತಸಿಕ್ತವಾದ ಬುತ್ತಿಗಳು: ಎಂದಿನಂತೆ ಬೆಳಿಗ್ಗೆ ಬುತ್ತಿ ಕಟ್ಟಿಕೊಂಡು, ನೀರಿನ ಬಾಟಲಿ ತುಂಬಿಕೊಂಡು ಕೆಲಸಕ್ಕೆ ಹೊರಟಿದ್ದರು. ಅಪಘಾತದ ಸ್ಥಳದಲ್ಲಿ ಎಲ್ಲರ ಬುತ್ತಿಗಂಟುಗಳೂ ಚೆಪ್ಪಾಪಿಲ್ಲಿಯಾಗಿ ಬಿದ್ದಿದ್ದವು, ಅನ್ನ, ರೊಟ್ಟಿ, ಪಲ್ಯದ ಡಬ್ಬಗಳು ರಕ್ತಸಿಕ್ತವಾಗಿದ್ದವು. ತುತ್ತಿನಚೀಲ ತುಂಬಿಸಿಕೊಳ್ಳಲು ಹೊರಟವರು ಮಸಣ ಸೇರಿದ್ದರು.

ಅಪಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ತಕ್ಷಣಕ್ಕೆ 15 ಆಂಬುಲೆನ್ಸ್ ಹಾಗೂ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದರು. ಶವಗಳ ಸಮೇತ ಎಲ್ಲರನ್ನೂ ಹೊತ್ತು ಬೆಳಗಾವಿಯತ್ತ ಧಾವಿಸಿದವು.

ಅಕ್ಕತಂಗೇರಹಾಳದಲ್ಲಿ ಸ್ಮಶಾನ ಮೌನ: ಇತ್ತ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ನಿಲ್ಲದ ಆಕ್ರಂದಣ. ಅತ್ತ ಅಕ್ಕತಂಗೇರಹಾಳದಲ್ಲಿ ಸ್ಮಶಾನ ಮೌನ.

ಅಪಘಾತದ ಸುದ್ದಿ ತಿಳಿದಾಗಿನಿಂದ ಊರಿನಲ್ಲಿ ಸೂತಕದ ಛಾಯೆ ಮೂಡಿತು. ಹಲವರು ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದರು. ಆಸ್ಪತ್ರೆಗೆ ಬಂದು ರಕ್ತ ಕೊಡಲು ಹಲವರು ಮುಂದೆ ಬಂದರು. ಇನ್ನೊಂದೆಡೆ, ಊರಿನಲ್ಲಿದ್ದ ಮಹಿಳೆಯರು, ಹಿರಿಯರು, ಮಕ್ಕಳನ್ನು ಸಂಬಾಳಿಸಲು ಜನ ಪರದಾಡಬೇಕಾಯಿತು.

ಸಂಜೆಯ ವೇಳೆಗೆ ಎಲ್ಲರ ಶವಗಳನ್ನು ಆಂಬುಲೆನ್ಸ್‌ನಲ್ಲಿ ತಂದಾಗ ಇಡೀ ಊರು ಒಂದೆಡೆ ಸೇರಿತು. ಅತ್ತ, ದಾಸನಟ್ಟಿ ಹಾಗೂ ಮಲ್ಲಾಪುರ(ಎಸ್‌.ಎ) ಗ್ರಾಮದಲ್ಲಿಯೂ ಶವ ಸಂಸ್ಕಾರಕ್ಕೆ ಅಪಾರ ಜನ ಸೇರಿದರು.

ಕೆಲಸದ ಮೊದಲ ದಿನವೇ ಮಸಣಕ್ಕೆ

‘ಆಕಾಶ ಗಸ್ತಿ ಇವತ್ತೇ ಮೊದಲ ದಿನ ಕೆಲಸಕ್ಕೆ ಹೋಗಿದ್ದರಿ. ಉಂಡು ಮನ್ಯಾಗ ಇರು ಮಗನ ಅಂತ ಅವರವ್ವ ಹೇಳಿದ್ಲು. ಓಡೋಡಿ ಬಂದು ಗಾಡಿ ಹತ್ತಿದ ಮಗ ಈಗ ಹೆಣವಾಗಿ ಬಿದ್ದಾನ. ಈ ಸಂಗ್ಟಾ ಅವರವ್ವ ಹೆಂಗ ತಡಕೋತಾಳೋ ಮಗನ...’ ಎಂದು ಗೋಳಾಡಿದರು ಅಜ್ಜಿ.

ಅಪಘಾತ ನಡೆದ ಸ್ಥಳದಲ್ಲಿ ಯುವಕನ ಶವ ತೊಡೆ ಮೇಲೆ ಹಾಕಿಕೊಂಡು ರೋಧಿಸಿದರು ಅಜ್ಜಿ.

ಆಕಾಶ (21) ಕೆಲಸಕ್ಕೆ ಹೊರಟ ಮೊದಲ ದಿನವಿದು. ಊರಿನಲ್ಲಿ ಖಾಲಿ ಇದ್ದು ಏನ್ ಮಾಡ್ತಿ, ಕೆಲಸಕ್ಕೆ ನಡಿ ಎಂದು ಓರಗೆಯವರು ಅವರನ್ನು ವಾಹನ ಹತ್ತಿಸಿದ್ದರು. ಅವರ ತಾಯಿ ಮಗನನ್ನು ತಡೆದರೂ ಗೆಳೆಯರ ಒತ್ತಾಯಕ್ಕೆ ಮಣಿದು ದುಡಿಮೆಗೆ ಹೊರಟಿದ್ದ ಆ ಹುಡುಗ.

ಗಂಭೀರವಾಗಿ ಗಾಯಗೊಂಡವರು

ಅಕ್ಕತಂಗೇರಹಾಳದ ರಾಜು ಕರಗುಪ್ಪಿ (38), ರಾಮಚಂದ್ರ ಬಿಚಗತ್ತಿ (38), ಲಗಮಪ್ಪ ತಳವಾರ (35), ಶಂಕರ ಮಾಳಗಿ (33) ಹಾಗೂ ವಾಹನ ಚಾಲಕ ಭೀಮಶಿ ಕುಂದರಗಿ (32) ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೂ ಸಣ್ಣಪ್ರಮಾಣದ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT