ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅದ್ಧೂರಿ ಲೋಕಾರ್ಪಣೆ

ಬಿಜೆಪಿ – ಕಾಂಗ್ರೆಸ್‌ ಪ್ರತಿಷ್ಠೆಯ ಕಣವಾದ ಶಿವಾಜಿ ಮಹಾರಾಜರ ಪ್ರತಿಮೆ
Last Updated 5 ಮಾರ್ಚ್ 2023, 19:08 IST
ಅಕ್ಷರ ಗಾತ್ರ

ರಾಜಹಂಸಗಡ (ಬೆಳಗಾವಿ ತಾ.): ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜಹಂಸಗಡ ಕೋಟೆಯಲ್ಲಿ, ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆಯನ್ನು ಭಾನುವಾರ ಎರಡನೇ ಬಾರಿಗೆ ಲೋಕಾರ್ಪಣೆ ಮಾಡಲಾಯಿತು.

ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಸಂಭಾಜಿರಾಜೇ ಛತ್ರಪತಿ ಅವರು 36 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಲಾತೂರ್‌ ಶಾಸಕ ಧೀರಜ್‌ ದೇಶಮುಖ, ಕೊಲ್ಹಾಪುರ ಶಾಸಕ ಸತೇಜ್‌ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡರು.

ಈ ಪ್ರತಿಮೆ ಪ್ರತಿಷ್ಠಾಪನೆ ಬಿಜೆಪಿ– ಕಾಂಗ್ರೆಸ್‌ ಮಧ್ಯೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ ನಾಯಕರನ್ನು ಆಹ್ವಾನಿಸಿ, ಲೋಕಾರ್ಪಣೆ ಮಾಡಲು ಲಕ್ಷ್ಮೀ ಹೆಬ್ಬಾಳಕರ ಮುಂದಾಗಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು; ಶಿಷ್ಟಾಚಾರದ ಪ್ರಕಾರ ಸರ್ಕಾರಿ ಕಾರ್ಯಕ್ರಮ ಮಾಡಬೇಕು ಎಂದು ಪಟ್ಟು ಹಿಡಿದರು. ಅದರಂತೆ, ಮಾರ್ಚ್‌ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಕ್ಷಿಪ್ತವಾಗಿ ಉದ್ಘಾಟಿಸಿದ್ದರು.

ಆದರೆ, ತಮ್ಮ ಪಟ್ಟು ಬಿಡದ ಲಕ್ಷ್ಮೀ ಹೆಬ್ಬಾಳಕರ ಭಾನುವಾರ ಮತ್ತೊಮ್ಮೆ ಶಾಸ್ತ್ರೋಕ್ತವಾಗಿ, ಅತ್ಯಂತ ಅದ್ಧೂರಿಯಾಗಿ ಲೋಕಾರ್ಪಣೆ ನೆರವೇರಿಸಿದರು.

ನೂಪುರ ಲೋಕ ಸೃಷ್ಟಿ: ರಾಜಹಂಸಗಡವನ್ನು ಬಣ್ಣಬಣ್ಣದ ಹೂವು, ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಎಲ್ಲೆಲ್ಲೂ ಭಗವಾಧ್ವಜಗಳೇ ರಾರಾಜಿಸಿದವು. ಡೋಲ್‌ ತಾಶಾ ಮೇಳ, ಡೊಳ್ಳು ಕುಣಿತ, ದಿಂಡಿ ಭಜನೆ, ಹೋಮ, ಹವನ, ಅಭಿಷೇಕ, ಪಲ್ಲಕ್ಕಿ ಉತ್ಸವ, ಸಿಡಿಮದ್ದು ಪ್ರದರ್ಶನ, ಲೇಜರ್ ಶೋ ಸೇರಿದಂತೆ ಎರಡು ದಿನ ಧಾರ್ಮಿಕ ಹಾಗೂ ಮರಾಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

60 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಸತೇಜ್‌ ಪಾಟೀಲ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ರಾಜಪೋಷಾಕಿನಲ್ಲಿ ಬಂದ ಪುರುಷ ಕಲಾವಿದರು, ಮರಾಠಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಯುವತಿಯರು ನೂಪುರ ಲೋಕ ಸೃಷ್ಟಿಸಿದರು. ಜನಸ್ತೋಮದಲ್ಲಿ ಜೈ ಶಿವಾಜಿ, ಜೈ ಭವಾನಿ ಘೋಷಣೆಗಳು ನಿರಂತರ ಮೊಳಗಿದವು.

*
ಪ್ರತಿಮೆ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಮುಖ್ಯಮಂತ್ರಿ ಉದ್ಘಾಟನೆ ಮಾಡಿದರು. ಅವರ ಹಟ ಸಾಧಿಸಲು ಛತ್ರಪತಿ ಶಿವಾಜಿ ಮಹಾರಾಜರಿಗೇ ಅವಮಾನ ಮಾಡಿದರು.
-ಲಕ್ಷ್ಮೀ ಹೆಬ್ಬಾಳಕರ, ಶಾಸಕಿ

*
ಒಮ್ಮೆ ಮುಖ್ಯಮಂತ್ರಿ ಅವರೇ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಮೊಂಡುತನದಿಂದ ಮತ್ತೊಮ್ಮೆ ಲೋಕಾರ್ಪಣೆ ಮಾಡಿದವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
-ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT