ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನೀರು ಲಭ್ಯವಿದೆ, ನಿರ್ವಹಣೆಯಲ್ಲಿ ನಿರ್ಲಕ್ಷ್ಯ

ಜಿಲ್ಲೆಯ ಅಲ್ಲಲ್ಲಿ ಪರದಾಡುತ್ತಿರುವ ಜನರು
Last Updated 2 ಮೇ 2022, 7:39 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಜಲಮೂಲಗಳಿವೆ. ಕಳೆದೆರಡು ವರ್ಷಗಳಿಂದ ಮುಂಗಾರಿನಲ್ಲಿ ಉತ್ತಮ ಮಳೆಯಾದ್ದರಿಂದ ನೀರಿನ ಸಂಗ್ರಹವಿದೆ. ಆದರೆ, ಸ್ಥಳೀಯ ಸಂಸ್ಥೆ ಅಥವಾ ಏಜೆನ್ಸಿಗಳು ಪೂರೈಕೆ ಮತ್ತು ನಿರ್ವಹಣೆಯಲ್ಲಿ ವಿಫಲವಾದ ‍ಪರಿಣಾಮ ಅಲ್ಲಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಪೂರ್ವ ಮಳೆಯೂ ಉತ್ತಮವಾಗಿ ಆಗುತ್ತಿದೆ. ಹಳೆಯ ಪಂಪ್‌ಸೆಟ್‌ಗಳು ಮತ್ತು ವಿದ್ಯುತ್‌ ಕೈಕೊಡುವುದರಿಂದ ತೊಂದರೆಯಾಗುತ್ತಿದೆ. ಜಲಾಶಯಗಳಲ್ಲಿ ಮಳೆಗಾಲ ಆರಂಭಗೊಳ್ಳುವವರೆಗೆ ಸಾಕಾಗುವಷ್ಟು ನೀರು ಸಂಗ್ರಹವಿದೆ. ಆದರೆ, ಸರಬರಾಜಿನಲ್ಲಿ ಲೋಪ ಕಂಡುಬರುತ್ತಿದೆ.

ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಾಧಿತವಾಗಬಹುದಾದ 120 ಹಳ್ಳಿಗಳ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಅಥಣಿ, ರಾಯಬಾಗ ಮತ್ತು ಕಾಗವಾಡ ತಾಲ್ಲೂಕಿನ ಹಳ್ಳಿಗಳೇ ಹೆಚ್ಚಾಗಿ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಟ್ಯಾಂಕರ್‌ ನೀರು

ಬೆಳಗಾವಿ ನಗರವೊಂದರಲ್ಲೇ 75ಸಾವಿರ ಕುಡಿಯುವ ನೀರಿನ ಸಂಪರ್ಕಗಳಿವೆ. ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದಿಂದ ನಿತ್ಯ 54 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ) ಹಾಗೂ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಿಂದ 65 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆಯಿರುವ ಒಂದೆರಡು ಬಡಾವಣೆಗಳಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ.

ಹಿಡಕಲ್‌ ಜಲಾಶಯದಲ್ಲಿ 9 ಟಿಎಂಸಿ ಬಳಸಬಹುದಾದ ನೀರು (ಲೈವ್‌ ಸ್ಟೋರೇಜ್‌) ಸಂಗ್ರಹವಿದೆ. ಜುಲೈ 31ರವರೆಗೆ ಸಾಕಾಗಾಲಿದೆ. ರಕ್ಕಸಕೊಪ್ಪ ಜಲಾಶಯದಲ್ಲಿನ ನೀರು ಜೂನ್‌ 15ರವರೆಗೆ ಲಭ್ಯವಾಗಲಿದೆ. ಆದರೆ, ಮಳೆಯಿಂದಾಗಿ ಆಗಾಗ ನಿಲುಗಡೆಯಾಗುತ್ತಿರುವ ವಿದ್ಯುತ್‌ ಸಮಸ್ಯೆಯಿಂದಾಗಿ ಪಂಪ್‌ಹೌಸ್‌ಗಳಲ್ಲಿ ತೊಂದರೆಯಾಗುತ್ತಿದ್ದು, ನೀರು ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ವಾರಕ್ಕೊಮ್ಮೆ ನೀರು

ಈ ಹಿಂದೆ ನಗರಕ್ಕೆ 3 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕೆಲ ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅದರಲ್ಲೂ ಸಹ್ಯಾದ್ರಿ ನಗರ, ಉದ್ಯಮಬಾಗ್‌ ಕೈಗಾರಿಕೆ ಪ್ರದೇಶ, ಅಲಾರವಾಡ, ಶ್ರೀನಗರದ ಕೆಲಭಾಗ ಮತ್ತು ಶನಿವಾರ ಖೂಟ್‌ನಲ್ಲಿ ಸಮಸ್ಯೆ ಹೆಚ್ಚಿದೆ.

‘ಶ್ರೀನಗರ ಸೆಕ್ಟರ್‌ ಸಂಖ್ಯೆ 5 ಹಾಗೂ ಶನಿವಾರ ಖೂಟ್‌ ಪ್ರದೇಶಕ್ಕೆ ನಿತ್ಯ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದೇವೆ’ ಎಂದು ಎಲ್ ಆ್ಯಂಡ್‌ ಟಿ ಕಂಪನಿಯವರು ತಿಳಿಸಿದರು.

ಖಾನಾಪುರದಲ್ಲಿ ತೊಂದರೆ ಇಲ್ಲ

ಖಾನಾಪುರ: ಕಳೆದ ವರ್ಷ ಸಮೃದ್ಧವಾಗಿ ಮಳೆಯಾದ ಕಾರಣ ತಾಲ್ಲೂಕಿನಲ್ಲಿ ಈ ವರ್ಷ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸಿಲ್ಲ. ನದಿ, ಕೆರೆ ಸೇರಿದಂತೆ ತಾಲ್ಲೂಕಿನ ಬಹುತೇಕ ಜಲಮೂಲಗಳಲ್ಲಿ ನೀರಿನ ಸಂಗ್ರಹವಿದೆ. ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟವೂ ಉತ್ತಮವಾಗಿದೆ. ಜೊತೆಗೆ ಇತ್ತೀಚಿನ ಕೆಲ ದಿನಗಳಿಂದ ‘ಅಡ್ಡಮಳೆ’ಯೂ ಸುರಿದು ಇಳೆಯನ್ನು ತಂಪಾಗಿಸಿದೆ. ಈ ಎಲ್ಲ ಕಾರಣಗಳಿಂದ ತಾಲ್ಲೂಕಿನಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಲಕ್ಷಣಗಳು ಗೋಚರಿಸಿಲ್ಲ.

ಸರಬರಾಜಿನಲ್ಲಿ ತೊಂದರೆ

ಚನ್ನಮ್ಮನ ಕಿತ್ತೂರು: ಕಳೆದೆರಡು ವರ್ಷಗಳಿಂದ ಅಧಿಕ ಮಳೆಯಾದ ಪರಿಣಾಮ ತಾಲ್ಲೂಕಿನ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿಲ್ಲ. ಕೆರೆ-ಹಳ್ಳಗಳಲ್ಲಿ ಈಗಲೂ ನೀರಿದೆ. ಮುಂಗಾರು ಮಳೆ ಎರಡು ಬಾರಿ ಭರ್ಜರಿಯಾಗಿ ಸುರಿದಿದ್ದು ಕೂಡ ನೀರಿನ ಕೊರತೆ ಹೋಗಲಾಡಿಸಲು ಕಾರಣವಾಗಿದೆ. ಗ್ರಾಮಗಳ ಕೆರೆಗಳು ಬತ್ತಿಲ್ಲವಾದ್ದರಿಂದ ಅಂತರ್ಜಲ ಮಟ್ಟವೂ ಹೆಚ್ಚು ಕುಸಿದಿಲ್ಲ. ಕೊಳವೆಬಾವಿಗಳೂ ಸಾಕಷ್ಟು ನೀರು ಎಸೆಯುತ್ತಿವೆ. ಕೈಕೊಡುವ ವಿದ್ಯುತ್ ನಿಂದಾಗಿ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿರುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಮುಖ್ಯ ರಸ್ತೆಯ ಬದಿಗಿರುವ ನೆಲದೊಳಗೆ ಅಳವಡಿಸಿರುವ ಪೈಪ್‌ಗಳು ಭಾರಿ ವಾಹನ ಸಂಚಾರದಿಂದ ಒಡೆಯುತ್ತಿವೆ. ಇದರಿಂದ ಆಗಾಗ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ನದಿಗಳಿಂದ ಅನುಕೂಲ

ಚಿಕ್ಕೋಡಿ: ಪಂಚನದಿಗಳು ಹರಿಯುತ್ತಿರುವ ಚಿಕ್ಕೋಡಿ ತಾಲ್ಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.

ತಾಲ್ಲೂಕಿನ ಸದಲಗಾ, ಚಿಕ್ಕೋಡಿ ಹೋಬಳಿಗಳ ವ್ಯಾಪ್ತಿಯ ಹತ್ತಾರು ಗ್ರಾಮಗಳಿಗೆ ಕೃಷ್ಣಾ ಮತ್ತು ದೂಧ್‌ಗಂಗಾ ನದಿಗಳಿಂದ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳ ಮೂಲಕ ನಿಯಮಿತವಾಗಿ ಕುಡಿಯುವ ನೀರಿನ ಸರಬರಾಜು ಆಗುತ್ತಿದೆ.

ಜೈನಾಪುರ ಮತ್ತು ಇತರ 11 ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಜಾರಿಗೊಳಿಸಿರುವ ಕುಡಿಯುವ ನೀರಿನ ಸರಬರಾಜು ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಆದರೂ ಆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಪ್ರಸಕ್ತ ವರ್ಷ ಮಳೆಯೂ ಚೆನ್ನಾಗಿ ಆಗಿದ್ಸು, ಕೆರೆ ಕಟ್ಟೆಗಳೂ ತುಂಬಿವೆ. ಇದರಿಂದಾಗಿ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಬಳಕೆಗೆ ಬಾರದಂತಾಗಿವೆ. ಇದರಿಂದಾಗಿ ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಲ ಜೀವನ ಮಿಷನ್ ಯೋಜನೆ ಕಾಮಗಾರಿಯೂ ಭರದಿಂದ ಸಾಗಿದೆ.

ಆಗಾಗ ತೊಂದರೆ

ಬೈಲಹೊಂಗಲ: ಪಟ್ಟಣದ ಪುರಸಭೆ ವ್ಯಾಪ್ತಿಯ ಮಲಪ್ರಭಾ ನದಿಯ ಎಕ್ಸ್‌ಪ್ರೆಸ್‌ ಜಾಕ್‌ವೆಲ್‌ ದುರಸ್ತಿಯಿಂದ ಆಗಾಗ ಕುಡಿಯುವ ನೀರಿನ ಸಮಸ್ತೆ ಉಂಟಾಗುತ್ತಿದೆ. ಒಂದು ವಾರದಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗಿಲ್ಲ. ಅಲ್ಲಲ್ಲಿ ಬೋರವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಇದರಿಂದ ಜನರಿಗೆ ನೀರಿನ ಅಭಾವ ಆಗಿಲ್ಲ. ಮಲಪ್ರಭಾ ನದಿ ನೀರು ಪೂರೈಸುವ ಜಾಕ್‌ವೆಲ್ ದುರಸ್ತಿಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪುರಸಭೆಯವರು ನೋಡಿಕೊಳ್ಳಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ಸಂಕೇಶ್ವರ ಗ್ರಾಮೀಣ ಭಾಗದಲ್ಲಿ ಸಮಸ್ಯೆ

ಸಂಕೇಶ್ವರ: ಸಂಕೇಶ್ವರ ಪಟ್ಟಣವು 23 ವಾರ್ಡ್‌ಗಳನ್ನು ಹೊಂದಿದ್ದು ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಪಟ್ಟಣಕ್ಕೆ ಹಿಡಕಲ್ ಜಲಾಶಯದಿಂದ ನೇರವಾಗಿ ಪ್ರತ್ಯೇಕ ಪೈಪ್‌ಲೈನ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಸಾಕಷ್ಟು ಸಂಗ್ರಹವಿದ್ದು ಗಂಭೀರ ಸಮಸ್ಯೆ ಉಂಟಾಗಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಸಮಸ್ಯೆ ಇದೆ. ಬಾಡ, ಕರಜಗಾ ಭಾಗದಲ್ಲಿ ತೀವ್ರ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದನ್ನು ಮನಗಂಡ ಬಾಡ ಗ್ರಾಮದ ಸಮಾಜ ಸೇವಕ ಪ್ರಕಾಶ ಮೈಲಾಖೆ ಅವರು ತಮ್ಮ ಟ್ರ್ಯಾಕ್ಟರ್‌ ಮೂಲಕ ಬಾಡ ಗ್ರಾಮಕ್ಕೆ ನಿತ್ಯವೂ ಕುಡಿಯುವ ನೀರು ಪೂರೈಸುತಿದ್ದಾರೆ.

ನಿವಾರಣೆಗೆ ಕ್ರಮ

ರಾಮದುರ್ಗ: ಪಟ್ಟಣದಲ್ಲಿ ಕಳೆದ ಐದಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ನವೀಲು ತೀರ್ಥ ಅಣೆಕಟ್ಟೆಯಿಂದ ನೇರವಾಗಿ ನೀರು ಪೂರೈಕೆ ಮಾಡಲಾಗುತ್ತಿರುವುದು ಇದಕ್ಕೆ ಕಾರಣ. ಪಟ್ಟಣದ ಭಾಗ್ಯನಗರ ಮತ್ತು ಶ್ರೀಪತಿ ನಗರಗಳು ತುರನೂರ ಪಂಚಾಯ್ತಿಯಿಂದ ಪುರಸಭೆಗೆ ಈಚೆಗೆ ಸೇರ್ಪಡೆಗೊಂಡಿದ್ದರಿಂದ ಕೆಲ ವರ್ಷಗಳ ಕಾಲ ನೀರಿನ ಸಮಸ್ಯೆಗೆ ಒಳಗಾಗಿದ್ದವು. ತಾ.ಪಂ.ಯಲ್ಲಿರುವ ತೆರದ ಬಾವಿಗೆ ನೀರನ್ನು ತುಂಬಿಸಿ ಭಾಗ್ಯನಗರ ಮತ್ತು ಶ್ರೀಪತಿ ನಗರಗಳಿಗೆ ಸರಬರಾಜು ಮಾಡುತ್ತಿದ್ದು, ಅಲ್ಲಿದ್ದ ಸಮಸ್ಯೆಯೂ ನಿವಾರಣೆಯಾಗಿದೆ.

ನೀರು ಬರುವುದನ್ನೇ ಕಾಯಬೇಕು

ನೇಸರಗಿ: ಬೇಸಿಗೆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ. ಎಲ್ಲ ಕಡೆಯೂ ನೀರಿನ ಟ್ಯಾಂಕ್‌ಗಳು ಹಾಗೂ ನಳದ ಸಂಪರ್ಕ ಇಲ್ಲ. ಕೊಳವೆಬಾವಿ ನೀರಿನ ಅವಲಂಬನೆ ಹೆಚ್ಚಿದೆ. ವಾರದಲ್ಲಿ ಕೆಲವು ದಿನ ನೀರು ಬಿಡಲಾಗುತ್ತಿದ್ದು, ಸಂಗ್ರಹಿಸಲು ಪರದಾಡಬೇಕಿದೆ.

ಜನರ ಆಕ್ರೋಶ

ಸವದತ್ತಿ: ಪಟ್ಟಣವು ಮಲಪ್ರಭಾ ಜಲಾಶಯದ ‍ಪಕ್ಕದಲ್ಲೇ ಇದ್ದರೂ ಸಮರ್ಪಕವಾಗಿ ನೀರು ಸರಬರಾಜು ಮಾಡುವ ಕಾರ್ಯ ನಡೆಯುತ್ತಿಲ್ಲ. ಸಕಾಲಕ್ಕೆ ನೀರು ಪೂರೈಸುವಲ್ಲಿ ಸವದತ್ತಿ ಯಲ್ಲಮ್ಮ ಪುರಸಭೆ ವಿಫಲವಾಗಿದೆ. ಜನರು ಪರದಾಡುತ್ತಿದ್ದಾರೆ. 6ರಿಂದ 9 ದಿನಗಳಿಗೊಮ್ಮೆ ನೀರು ಸಿಗುತ್ತಿದೆ. ಆಕ್ರೋಶಗೊಂಡ ಜನರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

(ಪ್ರಜಾವಾಣಿ ತಂಡ: ಇಮಾಮ್‌ಹುಸೇನ್‌ ಗೂಡುನವರ, ಪ್ರದೀಪ ಮೇಲಿನಮನಿ, ಸುಧಾಕರ ತಳವಾರ, ಬಸವರಾಜ ಶಿರಸಂಗಿ, ಪ್ರಸನ್ನ ಕುಲಕರ್ಣಿ, ರವಿ ಎಂ. ಹುಲಕುಂದ, ಚನ್ನಪ್ಪ ಮಾದರ, ಸುರೇಶ ಮಂಜರಗಿ, ಚ.ಯ. ಮೆಣಶಿನಕಾಯಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT