ಬುಧವಾರ, ಆಗಸ್ಟ್ 17, 2022
29 °C
ರೈತರ ಪರವಾಗಿ ಪ್ರತಿಭಟನೆ ನಡೆಸಲು ನಿರ್ಧಾರ

ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮಂಗಳವಾರ (ಡಿ.8) ಕರೆ ನೀಡಿರುವ ಭಾರತ ಬಂದ್‌ ಬೆಂಬಲಿಸಲಾಗುವುದು ಹಾಗೂ ಪ್ರತಿಭಟನಾ ರ‍್ಯಾಲಿ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದ ಎಂದು ತಿಳಿಸಿವೆ.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಸಭೆ ಸೇರಿದ್ದ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು  ಕಾರ್ಯಕರ್ತರು ಬಂದ್ ಯಶಸ್ವಿಗೊಳಿಸಲು  ಒಮ್ಮತದ ನಿರ್ಧಾರ ಕೈಗೊಂಡರು. ಬೆಳಿಗ್ಗೆ 6ರಿಂದ ಸಂಜೆ 6ವರೆಗೆ ಬಂದ್ ನಡೆಯಲಿದೆ. ವರ್ತಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು  ಕೋರಿದರು.

‘ರಾಣಿ ಚನ್ನಮ್ಮ ವೃತ್ತದಿಂದ, ಕಾಲೇಜು ರಸ್ತೆ, ಖಡೇಬಜಾರ್‌ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಗುವುದು’ ಎಂದು ಮುಖಂಡರು ತಿಳಿಸಿದರು.

‘ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕೆಎಸ್‍ಆರ್‌ಟಿಸಿ, ಆಟೊರಿಕ್ಷಾ, ಮ್ಯಾಕ್ಸಿಕ್ಯಾಬ್, ಲಾರಿ ಚಾಲಕರ ಸಂಘದವರು, ವರ್ತಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘಗಳು ಬೆಂಬಲ ಸೂಚಿಸಿವೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ಹಿಂಪಡೆಯುವುದಿಲ್ಲ’ ಎಂದು ಭಾರತೀಯ ಕೃಷಿಕ ಸಮಾಜದ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕಿ ಜಯಶ್ರೀ ಗುರನ್ನವರ, ‘ದೆಹಲಿಯಲ್ಲಿ ರೈತರ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದ್ದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಭಾರತ ಬಂದ್‍ಗೆ ಕರೆ ನೀಡಲಾಗಿದೆ. ಅನ್ನ ತಿನ್ನುವ ಪ್ರತಿಯೊಬ್ಬರೂ ಬೆಂಬಲ ಸೂಚಿಸಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಾದುದು ಇಡೀ ಸಮಾಜದ ಕರ್ತವ್ಯವಾಗಿದೆ’ ಎಂದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಮುಖಂಡ ಸೋಮು ರೈನಾಪುರೆ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ಎಐಡಿಎಸ್‌ಒ ಬೆಂಬಲ:

ರೈತ ವಿರೋಧಿ ಕರಾಳ ಕಾನೂನುಗಳ ವಿರುದ್ಧ ನಡೆಸಲಾಗುವ ಭಾರತ್ ಬಂದ್‌ಗೆ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಬೆಂಬಲ ನೀಡಲಿದೆ ಎಂದು ಜಿಲ್ಲಾ ಸಂಘಟನಾಕಾರ ಮಹಾಂತೇಶ ಬಿಳೂರ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಇಡೀ ದೇಶದ ಜನರು ಕೋವಿಡ್–19ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹೊತ್ತಿನಲ್ಲಿ, ಕೇಂದ್ರದ ಬಿಜೆಪಿ ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ಮಾಡಿದೆ. ಇದನ್ನು ಗಮನಿಸಿದರೆ ಸರ್ಕಾರ ನಿಜವಾಗಿಯೂ ಯಾರ ಹಿತಾಸಕ್ತಿ ಕಾಪಾಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಸಾಲದೆಂಬಂತೆ, ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೀದಿಗಿಳಿದಿರುವ ರೈತರ ಮೇಲೆ ಅಪ್ರಜಾತಾಂತ್ರಿಕ ನಿಲುವನ್ನು ತೋರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು