ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗದೇ ರಸ್ತೆ ಕಾಮಗಾರಿ; ಹೈಕೋರ್ಟ್‌ ತರಾಟೆ

Published : 19 ಸೆಪ್ಟೆಂಬರ್ 2024, 5:27 IST
Last Updated : 19 ಸೆಪ್ಟೆಂಬರ್ 2024, 5:27 IST
ಫಾಲೋ ಮಾಡಿ
Comments

ಬೆಳಗಾವಿ: ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೇ ರಸ್ತೆ ಕಾಮಗಾರಿ ಮಾಡಿದ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿ ಅಧಿಕಾರಿಗಳನ್ನು ಹೈಕೋರ್ಟ್‌ ಧಾರವಾಡ ಪೀಠ ತರಾಟೆ ತೆಗೆದುಕೊಂಡಿದೆ.

‘ಭೂ ಮಾಲೀಕರಿಗೆ ₹20 ಕೋಟಿ ಪರಿಹಾರ ಕೊಡಬೇಕು ಇಲ್ಲವೇ ಭೂಮಿ ಮರಳಿಸಬೇಕು. ರಸ್ತೆಯನ್ನು ಸಂಪೂರ್ಣ ಕಿತ್ತೊಗೆಯಬೇಕು, ಅದರ ನಷ್ಟವನ್ನೂ ಭರಿಸಿಕೊಡಬೇಕು. ತಪ್ಪು ಮಾಡಿದ ಅಧಿಕಾರಿಗೆ ಕೊನೆಯವರೆಗೂ ಬಡ್ತಿ ಸಿಗದಂತೆ ಸೇವಾಪುಸ್ತಕದಲ್ಲಿ ಬರೆಯಬೇಕು’ ಎಂದು ಕಟ್ಟಪ್ಪಣೆ ಮಾಡಿದೆ.

ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು, ‘ಈಗಿನ ಸರ್ಕಾರಗಳಿಗೆ ಸಭ್ಯತೆ ಉಳಿದಿಲ್ಲ. ಅಧಿಕಾರಿಗಳು ನ್ಯಾಯಾಲಯದ ಒಳ್ಳೆಯತನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಎಲ್ಲಿಯೂ ಇಷ್ಟು ಬೇಜವಾಬ್ದಾರಿ ಕಂಡಿಲ್ಲ. ಇಂಥ ಪ್ರಕರಣ ನೋಡಿಲ್ಲ’ ಎಂದರು.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ನೋಡಿದ ನ್ಯಾಯಮೂರ್ತಿ, ‘ಖಾಸಗಿ ಭೂಮಿಯನ್ನು ದರೋಡೆ ಮಾಡಲು ಆಗುವುದಿಲ್ಲ. ಜನರಿಗೆ ತೊಂದರೆ ಆಗದಂತೆ ನಡೆದುಕೊಳ್ಳಬೇಕಲ್ಲವೇ? ನಾವೇನು ತಾಜ್‌ಮಹಲ್‌ ಕಟ್ಟಿಸಲು ಹೇಳುತ್ತಿದ್ದೇವೆಯೇ? ಸಂತ್ರಸ್ತರಿಗೆ ಪರಿಹಾರ ಕೊಡಿ ಅಷ್ಟೇ’ ಎಂದರು.

‘ಒಂದೇ ದಿನದಲ್ಲಿ ಭೂಮಿ ಮರಳಿಸಬೇಕು. ನಿಮ್ಮ ವೈಯಕ್ತಿಕ ಖಾತೆಯಿಂದ ₹5 ಲಕ್ಷ ದಂಡ ಕೊಡಬೇಕು. ಅಲ್ಲದೇ ನಿಮಗೆ ಎಂದೂ ಬಡ್ತಿ ಸಿಗದಂತೆ ಸೇವಾಪುಸ್ತಕದಲ್ಲಿ ಸೇರಿಸಲಾಗುವುದು’ ಎಂದು ಅವರು ಎಚ್ಚರಿಸಿದರು.

‘ದಂಡ ಹಾಗೂ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು. ನಾಲ್ಕು ದಿನ ಕಾಲಾವಕಾಶ ಕೊಡಬೇಕು’ ಎಂದು ಪಾಲಿಕೆ ಪರ ವಕೀಲ ಚೈತನ್ಯ ಮುನವಳ್ಳಿ ಮನವಿ ಮಾಡಿದರು.

‘ಸ್ಮಾರ್ಟ್‌ಸಿಟಿ ಕಂಪನಿ ಕಾಮಗಾರಿ ಮಾಡಿದ್ದು, ಪಾಲಿಕೆಗೆ ಇನ್ನೂ ಪೂರ್ಣವಾಗಿ ಹಸ್ತಾಂತರ ಮಾಡಿಲ್ಲ. ಇದರಲ್ಲಿ ಸ್ಮಾರ್ಟ್‌ಸಿಟಿ ಅಧಿಕಾರಿಗಳದ್ದೂ ದೋಷವಿದೆ’ ಎಂದೂ ವಾದ ಮಾಡಿದರು.

‘ಹಸ್ತಾಂತರ ಆಗಿಲ್ಲ ಎಂದಾದರೆ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಗೊತ್ತುವಳಿ ಪಾಸ್‌ ಮಾಡಿ, ಪರಿಹಾರ ಹೇಗೆ ಘೋಷಿಸಿದಿರಿ’ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

‘ಸೋಮವಾರ (ಸೆ.23) ಒಳಗೆ ಭೂಮಿ ಮರಳಿಸಿದರೆ ದಂಡ– ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತೀರಿ. ಇಲ್ಲದಿದ್ದರೆ ಆಜ್ಞೆ ಪ್ರತಿ ಸಿದ್ಧವಾಗಿ ಇಟ್ಟಿರುತ್ತೇನೆ. ಅವತ್ತು ಸಹಿ ಮಾಡುತ್ತೇನೆ’ ಎಂದೂ ಕೊನೆಯ ಎಚ್ಚರಿಕೆ ನೀಡಿದರು.

ಸಂತ್ರಸ್ತರ ಪರ ವಾದ ಮಾಡಿದ ವಕೀಲ ಆರ್‌.ಕೆ.ಪಾಟೀಲ, ‘ಇದು ಒಬ್ಬರ ಸಮಸ್ಯೆಯಲ್ಲ. ಈ ಅಧಿಕಾರಿಗಳು ಸಾರ್ವಜನಿಕರ ಕೋಟ್ಯಂತರ ಹಣ ಹಾಳು ಮಾಡಿದ್ದಾರೆ. ನ್ಯಾಯಾಲಯ ಅದನ್ನೂ ಪರಿಗಣಿಸಬೇಕು’ ಎಂದು ಕೋರಿದರು.

ದ್ವಿಮುಖ ರಸ್ತೆಗೆ ಸ್ಮಾರ್ಟ್‌ಸಿಟಿಯಿಂದ ₹5.88 ಕೋಟಿ ವೆಚ್ಚ ಮಾಡಲಾಗಿದೆ. ಇದು ಬಂದಾದರೆ ನಗರದಿಂದ ಹಳೆ ಪಿಬಿ ರಸ್ತೆ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಲಿದೆ.

ಪ್ರಕರಣ ಏನು?

ಬೆಳಗಾವಿ ನಗರದ ಎಸ್‌ಪಿಎಂ ಮಾರ್ಗದಲ್ಲಿ ದ್ವಿಮುಖ ರಸ್ತೆ ನಿರ್ಮಾಣಕ್ಕಾಗಿ 2021ರಲ್ಲಿ 23 ಗುಂಟೆ ಜಾಗ ಬಳಸಿಕೊಳ್ಳಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ಕಾಮಗಾರಿ ಮಾಡಲಾಗಿದೆ. ಬಳಿಕ ದರ ನಿಗದಿ ಮಾಡಲಾಗಿದೆ. ಅದರ ಪ್ರಕಾರ ಭೂ ಮಾಲೀಕರಿಗೆ ₹20 ಕೋಟಿ ಕೊಡಬೇಕು ಎಂದು ಆಗಿನ ಭೂಸ್ವಾಧೀನ ಅಧಿಕಾರಿ ನಿಗದಿ ಮಾಡಿದ್ದರು. ಇದು ಬಲು ದುಬಾರಿ ಎಂದು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ತಕರಾರು ವ್ಯಕ್ತವಾಗಿದೆ.

ಈ ಮಧ್ಯೆ, ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಧಾರವಾಡ ಹೈಕೋರ್ಟ್‌ ಮೊರೆ ಹೋದರು. ಮುಂಚಿತವಾಗಿ ಅಧಿಕಾರಿಗಳೇ ಒಪ್ಪಿಕೊಂಡಿದ್ದರಿಂದ ₹20 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಎಂದು ಹೈಕೋರ್ಟ್‌ ಪೀಠ ಆದೇಶ ನೀಡಿತ್ತು.

‘ಪರಿಹಾರ ಕೊಡಲು ಅಷ್ಟು ಹಣವಿಲ್ಲ. ಭೂಮಿಯನ್ನು ಮರಳಿ ನೀಡುತ್ತೇವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಇದಕ್ಕೆ ಭೂ ಮಾಲೀಕರೂ ಸಮ್ಮತಿ ಸೂಚಿಸಿದ್ದಾರೆ.

ಮಂಗಳವಾರ (ಸೆ.17)ವರೆಗೆ ಹೈಕೋರ್ಟ್‌ ಸಮಯಾವಕಾಶ ನೀಡಿತ್ತು. ಆದರೂ ಪ್ರಕ್ರಿಯೆ ಪೂರ್ಣಗೊಳ್ಳದ್ದರಿಂದ ನ್ಯಾಯಮೂರ್ತಿಗಳು ಅಧಿಕಾರಿಗಳ ತರಾಟೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT