ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಅಥಣಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ: ಆಗ್ರಹ

Published 15 ಫೆಬ್ರುವರಿ 2024, 8:31 IST
Last Updated 15 ಫೆಬ್ರುವರಿ 2024, 8:31 IST
ಅಕ್ಷರ ಗಾತ್ರ

ಬೆಳಗಾವಿ: ‘ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ವಿಭಜಿಸಲೇಬೇಕು. ಅಥಣಿಯನ್ನು ಪ್ರತ್ಯೇಕ ಜಿಲ್ಲಾಕೇಂದ್ರವಾಗಿ ಘೋಷಿಸಬೇಕು’ ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ ಆಗ್ರಹಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಥಣಿ ತಾಲ್ಲೂಕಿನ ಕಡೇ ಹಳ್ಳಿಗಳು ಬೆಳಗಾವಿ ಮಹಾನಗರದಿಂದ 200 ಕಿ.ಮೀ ದೂರದಲ್ಲಿವೆ. ಯಾವುದೇ ಸರ್ಕಾರಿ ಕೆಲಸಕ್ಕಾಗಿ ಜಿಲ್ಲಾಕೇಂದ್ರಕ್ಕೆ ಹೋಗಿಬರಲು ಇಡೀದಿನ ಬೇಕಾಗುತ್ತದೆ. ಸಮಯದೊಂದಿಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ಹಾಗಾಗಿ ಅಥಣಿಯನ್ನೇ ಪ್ರತ್ಯೇಕ ಜಿಲ್ಲೆಯಾಗಿಸಿದರೆ ಅನುಕೂಲವಾಗುತ್ತದೆ’ ಎಂದರು.

‘ಈಗ ಸರ್ಕಾರ ಬೆಳಗಾವಿ ಜಿಲ್ಲೆ ವಿಭಜಿಸಿ, ಗೋಕಾಕ, ಚಿಕ್ಕೋಡಿ ಜಿಲ್ಲೆಗಳನ್ನು ರಚಿಸುತ್ತಿರುವುದಾಗಿ ತಿಳಿದುಬಂದಿದೆ. ಆದರೆ, ಜಿಲ್ಲೆಗಳನ್ನು ವಿಭಜಿಸುವ ಮುನ್ನ ಜಿಲ್ಲಾ ವಿಂಗಡಣಾ ಆಯೋಗ ರಚಿಸಬೇಕು. ಅದು ನೀಡುವ ವರದಿ ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ನಮಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಕಾನೂನಾನ್ಮಕವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

‘ಅಥಣಿ ತಾಲ್ಲೂಕಿನ ತೆಲಸಂಗ ಭಾಗದವರು ತಮ್ಮನ್ನು ವಿಜಯಪುರ ಜಿಲ್ಲೆಗೆ ಸೇರಿಸುವಂತೆ ಒತ್ತಾಯಿಸುತ್ತಿರುಬಹುದು. ಆದರೆ, ಇಡೀ ತಾಲ್ಲೂಕಿನ ಜನರು ವಿಜಯಪುರ ಜಿಲ್ಲೆಗೆ ಸೇರಲು ಸಿದ್ಧರಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖಂಡ ದೀಪಕ ಬುರ್ಲಿ, ‘ಚಿಕ್ಕೋಡಿ ಮತ್ತು ಗೋಕಾಕ ಹೊಸ ಜಿಲ್ಲೆಗಳನ್ನು ರಚಿಸಿ, ಅಥಣಿಯನ್ನು ಅವುಗಳ ವ್ಯಾಪ್ತಿಗೆ ಸೇರಿಸಿದರೆ ನಮ್ಮ ಪರದಾಟ ತಪ್ಪುವುದಿಲ್ಲ. ಇವೆರಡೂ ಪಟ್ಟಣಗಳೂ ಅಥಣಿಯಿಂದ ದೂರದಲ್ಲೇ ಇವೆ. ಅಥಣಿ ಪ್ರತ್ಯೇಕ ಜಿಲ್ಲೆಯೊಂದೇ ನಮ್ಮ ಸಮಸ್ಯೆಗಳಿಗೆ ಪರಿಹಾರ’ ಎಂದರು.

ಪರಶುರಾಮ, ಜಯವೇಂದ್ರ ಬಿಸ್ವಾಗರ, ಶಶಿಧರ ಬರ್ಲಿ, ಬಾಲಾಜಿ ಗಾಡಿವಡ್ಡರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT