ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ |ಮಂಗಾಯಿದೇವಿ ಜಾತ್ರೆ; ತೆಂಗಿನಕಾಯಿ ಒಡೆಯಲ್ಲ, ಗಂಟೆ ಬಾರಿಸಲ್ಲ

ವಿವಿಧ ಧಾರ್ಮಿಕ ಆಚರಣೆ ಪಾಲಿಸುವ ಭಕ್ತರು
Published 30 ಜೂನ್ 2024, 6:01 IST
Last Updated 30 ಜೂನ್ 2024, 6:01 IST
ಅಕ್ಷರ ಗಾತ್ರ

ಬೆಳಗಾವಿ: ಈ ಬಡಾವಣೆಯಲ್ಲಿ ಮಂಗಾಯಿ ದೇವಿ ಭಕ್ತರು ಒಂದು ತಿಂಗಳು ಮಾಂಸಾಹಾರ ಸೇವಿಸುವುದಿಲ್ಲ. ದೇವಸ್ಥಾನದಲ್ಲಿ ಗಂಟೆ ಬಾರಿಸುವುದಿಲ್ಲ. ಮನೆಯಲ್ಲಿ ತೆಂಗಿನಕಾಯಿ ಒಡೆಯುವುದಿಲ್ಲ. ಸ್ಥಳೀಯರ ವಿವಾಹ ನಡೆದರೂ ಸೀಮೆಯ ಆಚೆಗೆ...

ಇಲ್ಲಿನ ವಡಗಾವಿಯಲ್ಲಿ ನಡೆಯಲಿರುವ ಮಂಗಾಯಿ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರು ಇಂಥ ಆಚರಣೆ ಪಾಲಿಸುತ್ತ ಬಂದಿದ್ದಾರೆ.

ವಡಗಾವಿಯ ಮಂಗಾಯಿ ದೇವಿ ದೇವಸ್ಥಾನ ಸುಮಾರು 300 ವರ್ಷಗಳ ಇತಿಹಾಸ ಹೊಂದಿದೆ. ಹಿರಿಯರ ಪ್ರಕಾರ, 225 ವರ್ಷಗಳಿಂದ ಜಾತ್ರೆ ನೆರವೇರುತ್ತಿದೆ. ಈ ಬಾರಿಯ ಜಾತ್ರೆ ಜುಲೈ 30ರಂದು ನಡೆಯಲಿದ್ದು, ಜೂನ್‌ 28ರಂದು ಧಾರ್ಮಿಕ ವಿಧಿಗಳಿಗೆ ಚಾಲನೆ ಸಿಕ್ಕಿದೆ. ಒಂದಿಡೀ ತಿಂಗಳು ಭಕ್ತರು ವಿಶಿಷ್ಟ ವ್ರತ ಪಾಲಿಸಲಿದ್ದಾರೆ.

ಗೃಹಪ್ರವೇಶವೂ ನಡೆಯಲ್ಲ: ‘ಪ್ರತಿವರ್ಷ ಆಷಾಢ ಮಾಸದಲ್ಲಿ ಮಂಗಾಯಿ ದೇವಿ ಜಾತ್ರೆ ನೆರವೇರುತ್ತದೆ. ಇದಕ್ಕಾಗಿ ತಿಂಗಳ ಮುಂಚೆಯಿಂದಲೇ ಕಾರ್ಯಕ್ರಮ ಆರಂಭಿಸುತ್ತೇವೆ. ಈ ಅವಧಿಯಲ್ಲಿ ವಡಗಾವಿಯಲ್ಲಿ ಭಕ್ತರು ಮಾಂಸಾಹಾರ ಸೇವನೆ ತ್ಯಜಿಸುತ್ತಾರೆ. ಮನೆಯಲ್ಲಿ ತೆಂಗಿನಕಾಯಿ ಒಡೆಯುವುದಿಲ್ಲ. ದೇವಿಗೆ ಉಡಿ ತುಂಬುವುದಿಲ್ಲ. ಗೃಹಪ್ರವೇಶದಂಥ ಕಾರ್ಯಕ್ರಮಗಳೂ ನಡೆಯುವುದಿಲ್ಲ’ ಎಂದು ಅರ್ಚಕ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ಕಾಲದಲ್ಲೊಮ್ಮೆ ಹೊಲದಲ್ಲಿ ಉತ್ತಮ ಫಸಲು ಬಂದಿರಲಿಲ್ಲ. ಜನರಿಗೆ ರೋಗ– ರುಜಿನ ಹೆಚ್ಚಿದ್ದವು. ಆಗ ಮಂಗಾಯಿ ದೇವಿಗೆ ಬೇಡಿಕೊಂಡು ಇವೆಲ್ಲ ಆಚರಣೆ ಪಾಲಿಸಿದ್ದರಿಂದ ಎಲ್ಲ ಸಮಸ್ಯೆ ದೂರವಾದವು ಎಂಬುದು ನಂಬಿಕೆ. ಹಾಗಾಗಿ ಇದನ್ನು ಪಾಲಿಸುತ್ತ ಬಂದಿದ್ದೇವೆ. ಇಲ್ಲಿ ನೇಕಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಜುಲೈನಲ್ಲಿ ಮೊದಲ ಮೂರು ವಾರಗಳಲ್ಲಿ 9 ದಿನ (ಪ್ರತಿ ಸೋಮವಾರ, ಮಂಗಳವಾರ ಮತ್ತು ಶುಕ್ರವಾರ) ಯಾರೂ ಮಗ್ಗಗಳನ್ನು ಆರಂಭಿಸುವುದಿಲ್ಲ. ಮನೆಯಲ್ಲಿ ರೊಟ್ಟಿ ಬಡಿಯುವುದಿಲ್ಲ’ ಎಂದು ಹೇಳಿದರು.

ಬೆಳಗಾವಿಯ ವಡಗಾವಿಯ ಮಂಗಾಯಿ ದೇವಸ್ಥಾನ– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿಯ ವಡಗಾವಿಯ ಮಂಗಾಯಿ ದೇವಸ್ಥಾನ– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ವಿನಾಯಕ ಪಾಟೀಲ
ವಿನಾಯಕ ಪಾಟೀಲ
ಸುನಂದಾ
ಸುನಂದಾ

ಮಂಗಾಯಿ ದೇವಸ್ಥಾನ ಮಾತ್ರವಲ್ಲ; ವಡಗಾವಿಯ ಬಹುತೇಕ ದೇವಸ್ಥಾನಗಳ ಗಂಟೆಗಳನ್ನು ಬಟ್ಟೆಯಿಂದ ಕಟ್ಟಲಾಗುತ್ತದೆ. ಒಂದು ತಿಂಗಳು ಯಾರೂ ಅವುಗಳನ್ನು ಬಾರಿಸುವುದಿಲ್ಲ –ವಿನಾಯಕ ಪಾಟೀಲ ಅರ್ಚಕ

ಬಾಲ್ಯದಿಂದಲೂ ಧಾರ್ಮಿಕ ವಿಧಿ ಅನುಸರಿಸುತ್ತ ಬಂದಿದ್ದೇನೆ. ಇದನ್ನು ಪಾಲಿಸದವರು ಪೆಟ್ಟು ತಿಂದ ಉದಾಹರಣೆಯೂ ಇದೆ –ಸುನಂದಾ ಜಾಧವ ಸ್ಥಳೀಯ ಮಹಿಳೆ

ಕೋಳಿ ಮರಿ ಹಾರಿಸುತ್ತಾರೆ ನಾಡಿನಲ್ಲಿ ನಡೆಯುವ ಯಾವುದೇ ಜಾತ್ರೆಯಲ್ಲಿ ಭಕ್ತರು ತೇರಿಗೆ ಖಾರಿಕ್‌ ಶೇಂಗಾ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸುವುದು ಸಾಮಾನ್ಯ. ಆದರೆ ಮಂಗಾಯಿ ದೇವಿ ಜಾತ್ರೆಯಲ್ಲಿ ಮಾತ್ರ ದೇವಸ್ಥಾನದ ಮೇಲೆ ಕೋಳಿ ಮರಿಗಳನ್ನು ಹಾರಿಸಿ ಭಕ್ತಿ ಮೆರೆಯುತ್ತಾರೆ. ಈ ಜಾತ್ರೆಗೆ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾದಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಹಿಂದೂಗಳಷ್ಟೇ ಅಲ್ಲ;ಸರ್ವಧರ್ಮೀಯರು ಶ್ರದ್ಧೆಯಿಂದ ಜಾತ್ರೆಯಲ್ಲಿ ಭಾಗವಹಿಸುವುದು ಭಾವೈಕ್ಯತೆಗೆ ಸಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT