ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | 3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

Published : 16 ಸೆಪ್ಟೆಂಬರ್ 2024, 9:35 IST
Last Updated : 16 ಸೆಪ್ಟೆಂಬರ್ 2024, 9:35 IST
ಫಾಲೋ ಮಾಡಿ
Comments

ಬೆಳಗಾವಿ: ‘ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಆಧುನಿಕ ಸೌಲಭ್ಯ ಒಳಗೊಂಡ ಜಿಲ್ಲಾ ಕ್ರೀಡಾಂಗಣದ ಕಾಮಗಾರಿ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ರಾಮತೀರ್ಥ ನಗರದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಆವರಣ ಗೋಡೆ ನಿರ್ಮಾಣ, ನೆಲ ಸಮತಟ್ಟುಗೊಳಿಸುವುದು ಸೇರಿದಂತೆ ಮೊದಲ ಹಂತದ ಕಾಮಗಾರಿಗಳು ಒಂದು ವರ್ಷದೊಳಗೆ ಪೂರ್ಣಗೊಳ್ಳಲಿವೆ’ ಎಂದರು.

‘ಸದ್ಯ ಇರುವ ಜಿಲ್ಲಾ ಕ್ರೀಡಾಂಗಣದ ಲೀಸ್‌ ಅವಧಿ ಇನ್ನೆರಡು ವರ್ಷಗಳಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ ಕ್ರೀಡಾ ಚಟುವಟಿಕೆಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗಾಗಿ ನಗರಕ್ಕೆ ಹೊಸ ಕ್ರೀಡಾಂಗಣದ ಅಗತ್ಯವಿತ್ತು. ಇದಕ್ಕೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ 17.36 ಎಕರೆ ಜಮೀನು ಮಂಜೂರುಗೊಳಿಸಿದ್ದು, ಮೊದಲ ಹಂತದ ಕಾಮಗಾರಿ ಆರಂಭಿಸಲಾಗುವುದು. ಟ್ರ್ಯಾಕ್‌ಗಳು, ಗ್ಯಾಲರಿಗಳು, ಇತರೆ ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ, ಹೊಸ ಜಿಲ್ಲಾ ಕ್ರೀಡಾಂಗಣಕ್ಕೆ ಚಿಂತನೆ ನಡೆಸಿದ್ದೆವು. ನಾವು ಅಧಿಕಾರ ಹಿಡಿದ ನಂತರ, ಈ ಪ್ರಕ್ರಿಯೆ ಚುರುಕುಗೊಳಿಸಿದೆವು. ಜಾಗ ಗುರುತಿಸಿದೆವು. ಮೊದಲ ಹಂತದ ಕಾಮಗಾರಿಗೆ ₹10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದರು.

‘ಹೊಸ ಕ್ರೀಡಾಂಗಣಕ್ಕೆ ಗುರುತಿಸಿದ ಜಾಗದಲ್ಲಿ ದೇವಸ್ಥಾನ ಇದೆ. ಅದನ್ನು ಸ್ಥಳಾಂತರಿಸಲು ದೇವಸ್ಥಾನದ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದೆ. ಕ್ರೀಡಾಂಗಣ ಪಕ್ಕದಲ್ಲೇ ದೇವಾಲಯದ ಪುನರ್‌ನಿರ್ಮಾಣ ಮಾಡಲಾಗುವುದು. ನಿವಾಸಿಗಳ ಬೇಡಿಕೆಯಂತೆ, ಅಲ್ಲಿ ಸಮುದಾಯ ಭವನ ಸಹ ನಿರ್ಮಿಸಲಾಗುವುದು’ ಎಂದು ಹೇಳಿದರು.

‘ಹೊಸ ಕ್ರೀಡಾಂಗಣದಲ್ಲಿ ಲಭ್ಯವಾಗುವ ಸೌಕರ್ಯ ಬಳಸಿಕೊಂಡು, ಈ ಭಾಗದ ಕ್ರೀಡಾಪಟುಗಳು ಸಾಧನೆಯ ನಾಗಾಲೋಟದಲ್ಲಿ ಮುನ್ನುಗ್ಗಬೇಕು’ ಎಂದು ಕರೆಕೊಟ್ಟರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ರವಿ ಸಾಳುಂಕೆ, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇತರರಿದ್ದರು.

₹150 ಕೋಟಿ ವೆಚ್ಚ: ಸೇಠ್‌

ಅಧ್ಯಕ್ಷತೆ ವಹಿಸಿದ್ದ ಶಾಸಕ ಆಸೀಫ್ ಸೇಠ್, ₹150 ಕೋಟಿ ವೆಚ್ಚದಲ್ಲಿ ನೂತನ ಕ್ರೀಡಾಂಗಣ ನಿರ್ಮಾಣವಾಗಲಿದೆ. ಈಗ ₹10 ಕೋಟಿ ಬಿಡುಗಡೆಯಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಗಳಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT