ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ: ಇಬ್ಬರ ಜಾಮೀನು ರದ್ದು

Published 30 ಮೇ 2024, 16:17 IST
Last Updated 30 ಮೇ 2024, 16:17 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ 12 ಆರೋಪಿಗಳಲ್ಲಿ ಇಬ್ಬರ ಜಾಮೀನು ರದ್ದು ಮಾಡಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.

2018ರಲ್ಲಿ ಹೊಸ ವಂಟಮುರಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಬಣ್ಣೆಪ್ಪ ಪಾಟೀಲ ಎಂಬುವರ ಕೊಲೆ ಯತ್ನ ನಡೆದಿತ್ತು. ಆ ಪ್ರಕರಣದಲ್ಲಿ ಆಗಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ರಾಯಪ್ಪ ವನ್ನೂರಿ ಹಾಗೂ ಬಸು ರುದ್ರಪ್ಪ ನಾಯಕ ಮುಖ್ಯ ಆರೋಪಿಗಳಾಗಿದ್ದರು. ಆಗಲೂ ನ್ಯಾಯಾಲಯವು ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಆದರೆ, 2023ರ ಡಿಸೆಂಬರ್‌ 11ರಂದು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಅವರು ಮತ್ತೆ ಆರೋಪಿಗಳಾಗಿದ್ದಾರೆ. ನ್ಯಾಯಾಲಯದ ಷರತ್ತು ಉಲ್ಲಂಘಿಸಿದ ಕಾರಣ 2018ರ ಪ್ರಕರಣದಲ್ಲಿ ನೀಡಿದ ಜಾಮೀನನ್ನು ರದ್ದು ಮಾಡುವಂತೆ ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ 11ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಇಬ್ಬರ ಜಾಮೀನು ರದ್ದು ಮಾಡಿದೆ.

ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋದರು ಎಂಬ ಕಾರಣಕ್ಕೆ ಯುವತಿಯ ತಂದೆ, ತಾಯಿ, ಸಹೋದರರು ಸಂಬಂಧಿಕರು ಸೇರಿಕೊಂಡು 2023ರ ಡಿಸೆಂಬರ್‌ 11ರಂದು ಯುವಕನ ಮನೆ ಧ್ವಂಸ ಮಾಡಿದ್ದರು. ಯುವಕನ ತಾಯಿಯನ್ನು ಬೆತ್ತಲೆ ಮಾಡಿ ಮೂರು ತಾಸು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.

ಕಾನೂನು ಸಂಘರ್ಷಕ್ಕೆ ಒಳಪಟ್ಟ ಒಬ್ಬ ಬಾಲಕನ್ನು ಹೊರತುಪಡಿಸಿ ಎಲ್ಲ 12 ಮಂದಿಗೂ ಇದೇ ಏಪ್ರಿಲ್‌ 22ರಂದು ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜೈಲಿನಿಂದ ಹೊರಬಂದ ಆರೋಪಿಗಳು ಸಿಹಿ ಹಂಚಿ, ಮಾಲೆ ಹಾಕಿಸಿಕೊಂಡು ಸಂಭ್ರಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT