ಶನಿವಾರ, ಜುಲೈ 24, 2021
26 °C
ವಾರಾಂತ್ಯ. ರಜಾ ದಿನಗಳಲ್ಲಿ ವೀಕ್ಷಣೆಗೆ ನಿಷೇಧವಿದೆ

ಖಾನಾಪುರ: ಪುಳಕಗೊಳಿಸುವ ಭಟವಾಡಾ ಜಲಪಾತ

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ: ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವ ಕಾರಣ, ಜಾಂಬೋಟಿ ಗ್ರಾಮದಿಂದ 3 ಕಿ.ಮೀ. ಅಂತದರಲ್ಲಿರುವ ಭಟವಾಡಾ ಜಲಪಾತ ನಿಸರ್ಗಪ್ರಿಯರನ್ನು ಆಕರ್ಷಿಸುತ್ತಿವೆ. ಭೇಟಿ ನೀಡುವವರ ಮೈ-ಮನ ಪುಳಕಗೊಳಿಸುತ್ತಿದೆ.

ಚಾಪೋಲಿ-ಮುಡಗೈ ಅರಣ್ಯ ಪ್ರದೇಶದಲ್ಲಿ ಹುಟ್ಟುವ ಚಿಕ್ಕ ಹಳ್ಳ ಮುಂದೆ ಜಾಂಬೋಟಿ ಬಳಿ 15 ಅಡಿಗಳಷ್ಟು ಎತ್ತರದ ಬೆಟ್ಟದಿಂದ ಪ್ರಪಾತಕ್ಕೆ ಧುಮ್ಮಿಕ್ಕಿ ಹರಿದು ಮುಂದೆ ಕಾಲಮನಿ ಗ್ರಾಮದ ಬಳಿ ಈ ಭಾಗದ ಜೀವನದಿ ಮಲಪ್ರಭಾ ನದಿಯನ್ನು ಸಂಗಮಿಸುತ್ತದೆ.

ಮಳೆಗಾಲದ ಜೂನ್-ಅಕ್ಟೋಬರ್ ಅವಧಿಯಲ್ಲಿ ಮಾತ್ರ ಉಂಟಾಗುವ ಈ ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯಗಳು, ಜಲಪಾತ ಸಂಪರ್ಕಿಸುವ ಮಾರ್ಗದಲ್ಲಿರುವ ದಟ್ಟ ಅರಣ್ಯ, ತಣ್ಣನೆಯ ಗಾಳಿ ಮತ್ತು ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ.

ಮುನ್ನೆಚ್ಚರಿಕೆ ಅಗತ್ಯ: ಮುಖ್ಯವಾಗಿ ಜಲಪಾತಗಳ ವೀಕ್ಷಣೆಗೆ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯುವುದು ಮತ್ತು ಸ್ಥಳೀಯರ ಸಹಾಯದಿಂದ ಜಲಪಾತ ವೀಕ್ಷಣೆಗೆ ತೆರಳುವುದು ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮತ್ತು ಕಡ್ಡಾಯ.

ಈ ಜಲಪಾತ ವೀಕ್ಷಿಸಲು ಹೋಗುವ ಅಥವಾ ಅರಣ್ಯ ಚಾರಣಕ್ಕೆ ಮುನ್ನ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಜಲಪಾತದ ಬಗ್ಗೆ ಮಾಹಿತಿ ಇರುವ ಸ್ಥಳೀಯ ವ್ಯಕ್ತಿ ಅಥವಾ ಅರಣ್ಯ ಇಲಾಖೆಯವರ ಮಾರ್ಗದರ್ಶನದಲ್ಲಿ ಚಾರಣ ಮಾಡಬೇಕು. ಕೊಡೆ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ಸಂಜೆಯಾಗುವುದಕ್ಕೆ ಮುನ್ನವೇ ವಾಪಸಾಗುವುದು ಸುರಕ್ಷಿತ. ಪ್ಲಾಸ್ಟಿಕ್‌ ಚೀಲಗಳು ಅಥವಾ ಬಾಟಲಿಗಳನ್ನು ಒಯ್ಯಬಾರದು. ಅಪಾಯಕಾರಿ ಸ್ಥಳಕ್ಕೆ ತೆರಳುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎನ್ನುವುದು ಜಾಂಬೋಟಿ ನಿವಾಸಿಗಳ ಸಲಹೆಯಾಗಿದೆ.

ಕೋವಿಡ್ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದಾಗಿ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಇಲ್ಲಿನ ಹಲವು ಜಲಪಾತಗಳ ವೀಕ್ಷಣೆಗೆ ನಿಷೇಧ ವಿಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು