ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿಗಣತಿ ವರದಿ ಬಿಡುಗಡೆಗೆ ಭೀಮ್ ಆರ್ಮಿ ಸಂಘಟನೆ ಒತ್ತಾಯ

Published 8 ಡಿಸೆಂಬರ್ 2023, 14:26 IST
Last Updated 8 ಡಿಸೆಂಬರ್ 2023, 14:26 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿಯಲು ಜಾತಿಗಣತಿ ವರದಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ತಾಲ್ಲೂಕಿನ ಕೊಂಡಸಕೊಪ್ಪ ಗುಡ್ಡದಲ್ಲಿ ಶನಿವಾರ ಪ್ರತಿಭಟಿಸಿದರು.

ನಟ ಚೇತನ್‌ ಮಾತನಾಡಿ, ‘₹200 ಕೋಟಿ ವ್ಯಯಿಸಿ, ಜಾತಿಗಣತಿ ವರದಿ ಸಿದ್ಧಪಡಿಸಲಾಗಿದೆ. ರಾಜ್ಯ ಸರ್ಕಾರ ಅದನ್ನು ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶ ಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಅವರ ಲೆಕ್ಕಾಚಾರವೇ ಹೊರತು ಜನರ ಬದುಕು ಸುಧಾರಿಸುವುದಲ್ಲ. ಒಕ್ಕಲಿಗರು ಮತ್ತು ಲಿಂಗಾಯತರಂತಹ ಪ್ರಭಾವಿ ಸಮುದಾಯಗಳ ಒತ್ತಡಕ್ಕೆ ಮುಖ್ಯಮಂತ್ರಿ ಮಣಿಯದೆ, ತಕ್ಷಣ ಜಾತಿಗಣತಿ ವರದಿ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ನಾವು ಲಿಂಗಾಯತರು, ಒಕ್ಕಲಿಗರ ವಿರುದ್ಧವಿಲ್ಲ. ಆದರೆ, ಅವರಂತೆ ನಮಗೂ ಸೌಲಭ್ಯ ಸಿಗಬೇಕು. ನಮಗೆ ಬದಲಾವಣೆಬೇಕು. ಆದರೆ, ಸಿದ್ದರಾಮಯ್ಯ ಅವರಿಗೆ ನಮ್ಮನ್ನು ಬದಲಿಸುವುದು ಇಷ್ಟವಿಲ್ಲ. ತಾವು ಅಹಿಂದ ನಾಯಕ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳು ಶೋಷಣೆಯೊಳಗೆ ಉಳಿಯಲಿ ಎಂಬ ಮನಸ್ಥಿತಿ ಸಿದ್ದರಾಮಯ್ಯ ಸರ್ಕಾರದಲ್ಲಿ ಇದೆ’ ಎಂದರು.

ಗ್ಯಾರಂಟಿ ಯೋಜನೆ ಬಳಸಿದರೆ ಹೇಗೆ?

‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ₹11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದರೆ ಹೇಗೆ’ ಎಂದು ನಟ ಚೇತನ್‌ ಪ್ರಶ್ನಿಸಿದರು.

ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಡಿ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಪರಿಶಿಷ್ಟರ ವಿರೋಧಿ ಸರ್ಕಾರ. ಪರಿಶಿಷ್ಟರು ಮತ್ತು ಆದಿವಾಸಿಗಳಿಗೆ ಮೀಸಲಿಟ್ಟ ಹಣ ದುರುಪಯೋಗ ಮಾಡುತ್ತಿದೆ. ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ, ಮುಖ್ಯಮಂತ್ರಿ ಸೀಟು ಪಡೆಯುವುದಕ್ಕೆ ಗೊತ್ತಿದೆಯೇ ಹೊರತು, ನ್ಯಾಯದ ನಿಜವಾದ ಪರಿಕಲ್ಪನೆ ಗೊತ್ತಿಲ್ಲ’ ಎಂದು ಟಾಂಗ್‌ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT