ಶುಕ್ರವಾರ, ಡಿಸೆಂಬರ್ 6, 2019
26 °C

₹15ಸಾವಿರ ವೇತನ, ಕಾಯಂಗೆ ಆಗ್ರಹಿಸಿ ಬಿಸಿಯೂಟ ಅಡುಗೆ ಸಿಬ್ಬಂದಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ತಿಂಗಳಿಗೆ ₹ 15ಸಾವಿರ ವೇತನ ನೀಡಬೇಕು ಹಾಗೂ ಕೆಲಸ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಬಿಸಿಯೂಟ ಅಡುಗೆ ಸಿಬ್ಬಂದಿ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಾದಾಗ ಅಂದರೆ 2003ರಲ್ಲಿ ನಾವು ನೇಮಕವಾಗಿದ್ದೇವೆ. ಮುಖ್ಯಅಡುಗೆಯವರಿಗೆ ₹ 650, 2ನೇಯವರಿಗೆ ₹ 450 ಹಾಗೂ 3ನೇಯವರಿಗೆ ₹ 300 ವೇತನ ನೀಡಲಾಗುತ್ತಿತ್ತು. 2–3 ವರ್ಷಗಳ ನಂತರ ಸ್ವಲ್ಪ ಹೆಚ್ಚಿಸಲಾಗಿದೆ. ವರ್ಷದಿಂದ ಮುಖ್ಯಅಡುಗೆಯವರಿಗೆ ₹ 2700, 2ರಿಂದ 4ನೇಯವರಿಗೆ ₹ 2600 ಕೊಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಇಷ್ಟು ಕಡಿಮೆ ಹಣದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ತಿಳಿಸಿದರು.

‘ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯ್ತಿ ನೌಕರರ ಹಾಗೂ ಶಾಲೆಗಳ ಆಯಾಗಳ ವೇತನಕ್ಕೆ ಹೋಲಿಸಿದರೆ ನಮ್ಮ ವೇತನ ಬಹಳ ಕಡಿಮೆ ಇದೆ. ತಾರತಮ್ಯ ಮಾಡಲಾಗಿದೆ’ ಎಂದು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಳಿನಿ ಲಿಗಾಡೆ ಮಾತನಾಡಿ, ‘ಪದವೀಧರರು, ವಿಧವೆಯರು ಈ ಕೆಲಸ ಮಾಡುತ್ತಿದ್ದಾರೆ. ಕೂಲಿ ಮಾಡಿದರೆ ನಿತ್ಯ ₹ 250 ದೊರೆಯುತ್ತದೆ. ಆದರೆ, ನಮಗೆ ದಿನಕ್ಕೆ ₹ 83 ಮಾತ್ರ ಸಿಗುತ್ತಿದೆ. ಕನಿಷ್ಟ ವೇತನವೂ ದೊರೆಯದೇ ಇರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ. ಹೋರಾಟ ನಡೆಸಿ ಸಾಕಾಗಿ ಹೋಗಿದೆ’ ಎಂದು ಹೇಳಿದರು.

‘ಶಾಲೆಗಳಿಗೆ ರಜೆ ಇದ್ದಾಗಲೂ ನಮಗೆ ವೇತನ ನೀಡಬೇಕು. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಬಳಸುವುದರಿಂದ ನಮಗೆ ಸುರಕ್ಷತೆಗೆ ಆದ್ಯತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳನ್ನು ನಮಗೂ ವಿಸ್ತರಿಸಬೇಕು. ನಮ್ಮ ಬೇಡಿಕೆ ಈಡೇರಿಕೆ ಕುರಿತು ಈ ಅಧಿವೇಶನದಲ್ಲಿಯೇ ಕ್ರಮ ಕೈಗೊಳ್ಳಬೇಕು.

‘ನಾವು ಪ್ರತಿಭಟನೆ ನಡೆಸುವುದಕ್ಕೂ ತೊಂದರೆಯಾಯಿತು. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಗೆ ಅವಕಾಶ ಸಿಗಲಿಲ್ಲ. ಅಲ್ಲಿ ಧರಣಿ ನಡೆಸುತ್ತಿದ್ದ ರೈತರು ಬೇರೆ ಕಡೆ ಹೋಗಿ ಎಂದರು. ಕನ್ನಡ ಸಾಹಿತ್ಯ ಭವನದ ಬಳಿ ಹೋದರೂ ಪೊಲೀಸರು ಬಿಡಲಿಲ್ಲ. ಬಳಿಕ, ಪೊಲೀಸರು ಇಲ್ಲಿ ಅವಕಾಶ ಮಾಡಿಕೊಟ್ಟರು’ ಎಂದು ತಿಳಿಸಿದರು.

ಕಮಲಾ ಕಿಕಳೆ, ಜಯಶ್ರೀ ಕಾಂಬಳೆ, ಲಿಂಗವ್ವ ಕಲ್ಲೋಳಿ, ಯಲ್ಲವ್ವ ಟಗರಿ, ಶಕುಂತಲಾ ಪಾಟೀಲ, ಲಕ್ಷ್ಮಿ ಪೂಜೇರಿ, ಶಿವಲೀಲಾ ಪಾಟೀಲ, ಎ.ಪಿ. ಪಾಟೀಲ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು