ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಬಿಜೆಪಿಯವರ ಆಟ ನಡೆಯಲ್ಲ: ವೀರಪ್ಪ ಮೊಯ್ಲಿ

Published 29 ಅಕ್ಟೋಬರ್ 2023, 7:56 IST
Last Updated 29 ಅಕ್ಟೋಬರ್ 2023, 7:56 IST
ಅಕ್ಷರ ಗಾತ್ರ

ಬೆಳಗಾವಿ: 'ಬಿಜೆಪಿಯವರಿಗೆ ಆಪರೇಷನ್ ಕಮಲದ ರುಚಿ ಹಿಡಿದಿದೆ. ಈ ಅಸ್ತ್ರ ಪ್ರಯೋಗಿಸಿ ಏಳೆಂಟು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ. ಕಾಂಗ್ರೆಸ್ ನಲ್ಲಿ ಈಗ ನಾಯಕತ್ವದ ರೇಸ್ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

ಬೆಳಗಾವಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ‌ ಮೀನು ಹಿಡಿಯುವುದೇ ಕೆಲಸ. ಅವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗದಿರುವುದು ವಿಪರ್ಯಾಸ' ಎಂದರು‌.

'ಎರಡೂವರೆ ವರ್ಷದ ಬಳಿಕ ಸಿ.ಎಂ ಬದಲಾಗುತ್ತಾರಾ' ಎಂಬ ಪ್ರಶ್ನೆಗೆ, 'ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ. ಈಗ ಸರ್ಕಾರ ಸುಭದ್ರವಾಗಿದೆ. ನಾವು ಯಾವುದೇ ವದಂತಿಗಳಿಗೆ ಕಿವಿಗೊಡುವುದಿಲ್ಲ' ಎಂದು ಉತ್ತರಿಸಿದರು.

'ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಮಂತ್ರಿ ಆಗುವ ಆಸೆಯಿಂದ ಒಂದಿಬ್ಬರು ಶಾಸಕರು ಸಿ.ಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿರಬಹುದು. ಅದು ಸರಿಯಲ್ಲ. ಅವರು ಹೇಳಿಕೆ ಕೊಟ್ಟಮಾತ್ರಕ್ಕೆ ಮುಖ್ಯಮಂತ್ರಿ ಬದಲಾಗುವುದಿಲ್ಲ. ಶಾಸಕರು ಹೀಗೆ ಕೊಡುವುದನ್ನು ನಿಲ್ಲಿಸಬೇಕು' ಎಂದು ಕೋರಿದರು.

'ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾವಣೆಗೆ ಒಪ್ಪಂದವಾಗಿದೆಯೇ' ಎಂಬ ಪ್ರಶ್ನೆಗೆ, 'ಯಾವ ಒಪ್ಪಂದವೂ ಆಗಿಲ್ಲ' ಎಂದು ಪ್ರತಿಕ್ರಿಯಿಸಿದರು.

'ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ' ಎಂಬ ಪ್ರಶ್ನೆಗೆ, 'ನಾನು ಪಕ್ಷದ ಹೈಕಮಾಂಡ್ ಅಲ್ಲ. ಆದರೆ, ನಮ್ಮ ಪಕ್ಷವಂತೂ ಐದು ವರ್ಷ ಅಧಿಕಾರದಲ್ಲಿರುತ್ತದೆ' ಎಂದು ಹೇಳಿ ಜಾರಿಕೊಂಡರು.

ಸಚಿವ ಜಿ.ಪರಮೇಶ್ವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಡಿನ್ನರ್ ಪಾರ್ಟಿ ಆಯೋಜಿಸಿರುವ ಮತ್ತು ಅದಕ್ಕೆ ಡಿ.ಕೆ.ಶಿವಕುಮಾರ ಆಹ್ವಾನಿಸದ ಕುರಿತು ಪ್ರತಿಕ್ರಿಯಿಸಿದ ಮೊಯ್ಲಿ, 'ಇದು ಸೌಹಾರ್ದಯುತ ಭೇಟಿ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಎಲ್ಲ ನಾಯಕರನ್ನೂ ಇದಕ್ಕೆ ಆಹ್ವಾನಿಸಬೇಕು ಎಂದೇನೂ ಇಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ' ಎಂದು ಉತ್ತರಿಸಿದರು.

ಸಚಿವ ಸತೀಶ ಜಾರಕಿಹೊಳಿ ದುಬೈ ಪ್ರವಾಸಕ್ಕೆ ಹೋಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮೊಯ್ಲಿ, 'ಈ ಬಗ್ಗೆ ಸತೀಶ ಜಾರಕಿಜೊಳಿ ಬಳಿ ಸಮಾಲೋಚನೆ ನಡೆಸಿಲ್ಲ. ಅವರ ವೈಯಕ್ತಿಕ ವಿಚಾರಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ' ಎಂದರು.

'ಬಿಜೆಪಿ ಮತ್ತು ಜೆಡಿಎಸ್ ಬಣ್ಣ ಈಗ ಬಯಲಾಗಿದೆ. ತಾವಿಬ್ಬರೂ ಸೇರದಿದ್ದರೆ ಉಳಿಗಾಲವಿಲ್ಲ ಎಂದು ಹೆದರಿ ಒಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಅನುಕೂಲವಾಗಲಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಆಸೀಫ್ ಸೇಠ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT