ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಆಸ್ತಿಕರ ಪರಿಷ್ಕರಣೆ ಕಡತ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿ ತಾರಕಕ್ಕೇರಿದೆ. ಪಾಲಿಕೆ ಆವರಣ ಬುಧವಾರ ಇಡೀ ದಿನ ಪ್ರತಿಭಟನೆ ನಡೆಯಿತು.
‘ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಸಮುದಾಯದ ಅಧಿಕಾರಿಗಳಿಗೆ ಶಾಸಕ ಅಭಯ ಪಾಟೀಲ ಮತ್ತು ಮೇಯರ್ ಶೋಭಾ ಸೋಮನಾಚೆ ಅವರು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
‘ಕಡತ ಕಾಣೆ ಪ್ರಕರಣದಲ್ಲಿ ಶಾಸಕ ಅಭಯ ಪಾಟೀಲ ಹಾಗೂ ಮೇಯರ್ ಶೋಭಾ ಅವರ ಕೈವಾಡವಿದೆ. ಆದರೆ, ಅದನ್ನು ಪಾಲಿಕೆ ಆಯುಕ್ತರ ಮೇಲೆ ಹಾಕಿದ್ದಾರೆ. ಇದನ್ನು ತನಿಖೆ ಮಾಡುವಂತೆ ಕೇಂದ್ರ ಲೋಕಸೇವಾ ಆಯೋಗ ಸೇರಿ ಕೇಂದ್ರದ ವಿವಿಧ ಏಜೆನ್ಸಿಗಳಿಗೆ ಮನವಿ ಬರೆದಿದ್ದಾರೆ. ಇದು ಅಕ್ಷಮ್ಯ’ ಎಂದು ಮುಖಂಡ ಮಲ್ಲೇಶ ಚೌಗಲೆ ದೂರಿದರು.
‘ದೊಡ್ಡಮಟ್ಟದ ಭ್ರಷ್ಟಾಚಾರ, ಹಗರಣ ನಡೆದಿದ್ದರೆ ತನಿಖೆಗೆ ಕೇಂದ್ರ ಸರ್ಕಾರಕ್ಕೆ ಕೋರಬಹುದು. ಆದರೆ, ಕಡತದ ವಿಚಾರ ಚಿಕ್ಕದು. ಇದರ ತನಿಖೆಯನ್ನು ಪೌರಾಡಳಿತ ಇಲಾಖೆ ಅಥವಾ ಸಿಐಡಿ– ಸಿಒಡಿ ಮೂಲಕ ಮಾಡಿಸಬೇಕು. ಆಯುಕ್ತರಿಗೆ ಕಿರುಕುಳ ನೀಡಲು, ಅವರ ಬಡ್ತಿ ತಡೆಯುವ ಹುನ್ನಾರದಿಂದ ಶಾಸಕ ಹಾಗೂ ಬಿಜೆಪಿ ಪಾಳೆಯದ ಸದಸ್ಯರು ಈ ಅಡ್ಡ ದಾರಿ ಹಿಡಿದಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕಿಡಿ ಕಾರಿದರು.
‘ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ಬಂದು ಆರೇ ತಿಂಗಳಾಗಿದೆ. ಸೂಪರ್‌ಸೀಡ್ ಮಾಡಬೇಕು ಎಂಬ ಉದ್ದೇಶ ನಮಗೇನೂ ಇಲ್ಲ. ಆದರೆ, ಸಣ್ಣ ವಿಚಾರ ಹಿಡಿದು ಅಭಯ ಪಾಟೀಲ ರಾಜಕೀಯ ತಂಟೆ ಶುರು ಮಾಡಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.