ಮಂಗಳವಾರ, ಮೇ 18, 2021
23 °C
ರಮೇಶ ಜಾರಕಿಹೊಳಿ ಪ್ರಚಾರಕ್ಕಿಳಿಯುವರೇ?

ಬೆಳಗಾವಿ: 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕಡೆ ಬಿಜೆಪಿ ಪ್ರಾಬಲ್ಯ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಎರಡು ಕಡೆ ಮಾತ್ರ ಕಾಂಗ್ರೆಸ್‌ ಪ್ರತಿನಿಧಿಗಳಿದ್ದಾರೆ. ಜೊತೆಗೆ ಜಿಲ್ಲಾ, ತಾಲ್ಲೂಕು ಪಂಚಾಯ್ತಿಯಲ್ಲೂ ಬಿಜೆಪಿಯವರ ಬಲವೇ ಹೆಚ್ಚಿದೆ. ಅಲ್ಲದೇ, ಈಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಕಮಲ ಪಕ್ಷದ ಬೆಂಬಲಿತರು ಜಾಸ್ತಿ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಇವೆಲ್ಲ ಅಂಶಗಳೂ ಉಪ ಚುನಾವಣೆಯಲ್ಲಿ ಪರಿಣಾಮ ಬೀರಲಿವೆ.

ಬೆಳಗಾವಿ ಉತ್ತರ (ಅನಿಲ ಬೆನಕೆ), ಬೆಳಗಾವಿ ದಕ್ಷಿಣ (ಅಭಯ ಪಾಟೀಲ), ಗೋಕಾಕ (ರಮೇಶ ಜಾರಕಿಹೊಳಿ), ಅರಭಾವಿ (ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ), ರಾಮದುರ್ಗ (ಮಹಾದೇವಪ್ಪ ಯಾದವಾಡ), ಸವದತ್ತಿ ಯಲ್ಲಮ್ಮ (ವಿಧಾನಸಭೆ ಉಪಸಭಾಧ್ಯಕ್ಷರೂ ಆಗಿರುವ ಆನಂದ ಮಾಮನಿ) ಬಿಜೆಯವರು. ಹಲವು ನಿಗಮ–ಮಂಡಳಿಗಳಲ್ಲಿ ಸ್ಥಾನ ಪಡೆದಿರುವುದು ಕ್ಷೇತ್ರ ವ್ಯಾಪ್ತಿಯವರೇ ಆಗಿದ್ದಾರೆ.

ಮನವೊಲಿಸುವ ಹೊಣೆ:

‘ಅವರಿಗೆ ಪಕ್ಷದ ಗೆಲುವಿಗೆ ಶ್ರಮಿಸುವ ಜವಾಬ್ದಾರಿ ನೀಡಲಾಗಿದೆ. ಸರಣಿ ಸಭೆಗಳನ್ನು ನಡೆಸಿ, ವಿವಿಧ ಮೋರ್ಚಾಗಳಿಗೆ ಆಯಾ ಸಮಾಜದ ಮತದಾರರ ಮನವೊಲಿಸುವ ಹೊಣೆ ವಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಗ್ರಾಮೀಣ (ಕೆಪಿಸಿಸಿ ವಕ್ತಾರೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ) ಹಾಗೂ ಬೈಲಹೊಂಗಲ (ಮಹಾಂತೇಶ ಕೌಜಲಗಿ)ದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಜಿಲ್ಲೆಯ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಸತೀಶ ಜಾರಕಿಹೊಳಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಚುನಾವಣೆ ಘೋಷಣೆಯಾದ ಬಳಿಕ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ನಿರ್ಧಾರ ತಿಳಿಸಿಲ್ಲ:

ಕ್ಷೇತ್ರದಲ್ಲಿರುವ ಲಿಂಗಾಯತ ಸಮಾಜದ ಪ್ರಮುಖರನ್ನು ಸೆಳೆಯಲು ಸತೀಶ ‘ಗಾಳ’ ಹಾಕಿದ್ದಾರೆ. ಗೋಕಾಕ ಕ್ಷೇತ್ರದಲ್ಲಿನ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ (ಸದ್ಯ ಜೆಡಿಎಸ್‌ ನಾಯಕ), ಕೆಎಲ್‌ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ, ಮಹಾಂತೇಶ ತಾಂವಶಿ ಮೊದಲಾದವರನ್ನು ಹೋದ ತಿಂಗಳು ಭೇಟಿಯಾಗಿ ಪಕ್ಷಕ್ಕೆ ಆಹ್ವಾನಿದ್ದರು. ಆದರೆ, ಆ ಮುಖಂಡರು ಇನ್ನೂ ನಿರ್ಧಾರ ತಿಳಿಸಿಲ್ಲ.

2019ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆ ಕಾಲಕ್ಕೆ ಗೋಕಾಕದ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿದ್ದರು. ಈ ಬಾರಿ ಅವರು ಬಿಜೆಪಿಯಲ್ಲಿದ್ದಾರೆ. ಇದರೊಂದಿಗೆ ಆ ಪಕ್ಷದ ಬಲ ವೃದ್ಧಿಸಿದಂತಾಗಿದೆ. ಅವರು ತಮ್ಮ ಗೋಕಾಕ ಕ್ಷೇತ್ರದೊಂದಿಗೆ ಗ್ರಾಮೀಣ ಕ್ಷೇತ್ರದಲ್ಲೂ ಹೆಚ್ಚಿನ ಬೆಂಬಲಿಗರನ್ನು ಹೊಂದಿದ್ದಾರೆ. ಈಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ವಿಜೇತರಾಗಿರುವ ಹಲವರು ರಮೇಶ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಬೆಂಬಲಿತರು, ಕ್ರಮೇಣ ತಮ್ಮ ನಿಷ್ಠೆಯನ್ನು ಯಾರಿಗೆ ತೋರುತ್ತಾರೆ ಎನ್ನುವುದರ ಮೇಲೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಪ್ರತಿಕ್ರಿಯೆ ನೀಡಿಲ್ಲ:

ತಮ್ಮ ವಿರುದ್ಧದ ಸಿ.ಡಿ. ಪ್ರಕರಣದಿಂದಾಗಿ ಮುಜುಗರಕ್ಕೆ ಒಳಗಾಗಿರುವ ರಮೇಶ ಜಾರಕಿಹೊಳಿ ಈಗ ಸಚಿವ ಸ್ಥಾನದೊಂದಿಗೆ ಜಿಲ್ಲಾ ಉಸ್ತುವಾರಿಯನ್ನೂ ಕಳೆದುಕೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬಂದಂದಿನಿಂದ ಜಿಲ್ಲೆ ಹಾಗೂ ಕ್ಷೇತ್ರದತ್ತ ಸುಳಿದಿಲ್ಲ. ಚುನಾವಣೆ ಘೋಷಣೆ ಬಳಿಕವೂ ಆ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಅವರು ಸಕ್ರಿಯವಾಗಿ ಪ್ರಚಾರ ಮಾಡುವರೇ? ಪಕ್ಷದಿಂದ ನೇಮಿಸಿದ್ದ ಚುನಾವಣಾ ಉಸ್ತುವಾರಿಗಳ ಪಟ್ಟಿಯಲ್ಲೂ ಮುಂದುವರಿಯುವರೇ ಎನ್ನುವ ವಿಷಯ ಸದ್ಯ ಚರ್ಚೆಗೆ ಒಳಗಾಗಿದೆ.

‘ಅಭ್ಯರ್ಥಿಗಳು ಯಾರಾಗುತ್ತಾರೆ ಎನ್ನುವುದರ ಮೇಲೆ ಜಾರಕಿಹೊಳ ಸಹೋದರರ ನಡೆ ಅವಲಂಬಿತವಾಗಿದೆ. ಕಾಂಗ್ರೆಸ್‌ನಿಂದ ಸತೀಶ ಜಾರಕಿಹೊಳಿ ಕಣಕ್ಕಿಳಿದರೆ ಚಿತ್ರಣ ಬದಲಾಗಬಹುದು’ ಎಂದು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು