ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಪರಿಹಾರ: ರಾಜ್ಯ ಸರ್ಕಾರ ವಿಫಲ

ಎಸ್.ಆರ್. ಪಾಟೀಲ ಆರೋಪ
Last Updated 12 ನವೆಂಬರ್ 2020, 12:42 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಪ್ರವಾಹ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ’ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್. ಪಾಟೀಲ ಆರೋಪಿಸಿದರು.

ಇಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಆಸ್ತಿ–ಪಾಸ್ತಿ, ಬೆಳೆ ಹಾನಿ ಸಂಭವಿಸಿದೆ. ಮನೆ ಕಳೆದುಕೊಂಡ ಬಹಳಷ್ಟು ಮಂದಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಶೇ. 20ರಷ್ಟು ರೈತರಿಗೆ ಮಾತ್ರ ಬೆಳೆ ಹಾನಿ ಪರಿಹಾರ ತಲುಪಿದೆ. ಹೋದ ವರ್ಷ ನಷ್ಟ ಅನುಭವಿಸಿದವರು ಹಾಗೂ ಸಂತ್ರಸ್ತರಿಗೆ ಇಂದಿಗೂ ಪರಿಹಾರ ದೊರೆತಿಲ್ಲ’ ಎಂದು ದೂರಿದರು.

‘ಸರ್ಕಾರದ ವೈಫಲ್ಯ ಮತ್ತು ಸಂತ್ರಸ್ತರಿಗೆ ಪರಿಹಾರ ಸಿಗದಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಸರ್ಕಾರದ ಗಮನಸೆಳೆದಿದ್ದೇನೆ. ಆದರೂ ಸ್ಪಂದನೆ ದೊರೆತಿಲ್ಲ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಕೇಂದ್ರದಿಂದ ಕನಿಷ್ಠ ₹ 25ಸಾವಿರ ಕೋಟಿ ಪರಿಹಾರ ತರುವುದಕ್ಕೂ ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಹಣ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಲುಕಿಸುವ ಉದ್ದೇಶದಿಂದ ಸಿಬಿಐ ಬಳಸಿ ಬಂಧಿಸಲಾಗಿದೆ. ಸಾಧ್ಯವಾದರೆ ಅವರನ್ನು ಜೈಲಿನಲ್ಲಿ ಭೇಟಿಯಾಗುವೆ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸಂವಿಧಾನಾತ್ಮಕವಾಗಿ ರಚನೆಯಾದ ಸಂಸ್ಥೆಗಳ ದುರುಪಯೋಗವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಮಾಡಲಾಗುತ್ತಿದೆ. ಐಟಿ, ಇಡಿ, ಚುನಾವಣಾ ಆಯೋಗ, ಸಿಬಿಐ ದುರುಪಯೋಗಪಡಿಸಿಕೊಂಡು, ನಮ್ಮನ್ನು ಹಣಿಯುವ ಕೆಲಸ ಆಗುತ್ತಿದೆ. ಅವುಗಳು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಹಾಗೆಂದು, ಕಾಂಗ್ರೆಸ್ ಪಕ್ಷದವರನ್ನು ಹೆದರಿಸಲು ಸಾಧ್ಯವಿಲ್ಲ. ಬ್ರಿಟಿಷರನ್ನೇ ಹೆದರಿಸಿದವರು ನಾವು. ಆರೂವರೆ ಲಕ್ಷ ಮಂದಿ ನಮ್ಮ ಪೂರ್ವಜರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಬ್ರಿಟಿಷರ ಲಾಟಿ ಏಟಿಗೆ, ಬೂಟಿನ ಒದೆಗೇ ನಾವು ಅಂಜಿಲ್ಲ. ಇನ್ನು ಬಿಜೆಪಿಯವರು ಹೆದರಿಸಲು ಸಾಧ್ಯವೇ? ಎಂದು ಕೇಳಿದರು.

‘ಸರ್ಕಾರವಿದೆ, ಅವರೇನಾದರೂ (ಬಿಜೆಪಿಯವರು) ಮಾಡಿಕೊಳ್ಳಲಿ. ಅವರ ದಿನಗಳು ಕಡಿಮೆ ಇವೆ’ ಎಂದರು.

‘ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದವರು ಹಣ, ಹೆಂಡದ ಹೊಳೆ ಹರಿಸಿದ್ದಾರೆ. ಅನೇಕರು ಇವಿಎಂ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟು ಹಣದ ಹೊಳೆ ಹರಿದಿರುವುದು ಇದೇ ಮೊದಲು’ ಎಂದು ದೂರಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT