ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಪಾಲಿಕೆ ಚುನಾವಣೆಗೆ ಬಿಜೆಪಿ ತಯಾರಿ: ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಸಭೆ

Last Updated 16 ಮಾರ್ಚ್ 2020, 12:36 IST
ಅಕ್ಷರ ಗಾತ್ರ

ಬೆಳಗಾವಿ: ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ.

ಶಾಸಕ ಅಭಯ ‍ಪಾಟೀಲ ನೇತೃತ್ವದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್‌ಗಳ ಕಾರ್ಯಗಳ ಬಗ್ಗೆ ತಿಳಿಸಿದರು. ಚುನಾವಣಾ ರೂಪರೇಷೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಪ್ರಥಮ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಸುವುದರಿಂದ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಟಿಕೆಟ್‌ ಕೊಡಬೇಕು. ಯಾವುದೇ ಲಾಬಿಗೆ ಮಣಿಯದೆ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ಕೊಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಂತರ ಮಾತನಾಡಿದ ಅಭಯ, ‘ದಕ್ಷಿಣ ಮತಕ್ಷೇತ್ರದಲ್ಲಿ ₹ 800 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ಪ್ರಾರಂಭವಾಗಿವೆ. ಮೇ 15ರವರೆಗೆ ಶೇ 80ರಷ್ಟು ಕಾಮಗಾರಿಗಳು ಮುಕ್ತಾಯವಾಗಲಿವೆ. ರಸ್ತೆ, ಚರಂಡಿ, ಒಳಚರಂಡಿ, ವಿದ್ಯುತ್‌ದೀಪಗಳ ಅಳವಡಿಕೆ, ಯುಜಿ ಕೇಬಲ್ ಅಳವಡಿಕೆ, 24x7 ಕುಡಿಯುವ ನೀರು, ₹1.50 ಲಕ್ಷ ಅನುದಾನದಲ್ಲಿ ಬಡವರಿಗೆ ಮನೆ ನಿರ್ಮಾಣ, 60ಸಾವಿರ ಫಲಾನುಭವಿಗಳಿಗೆ ಆಯುಷ್ಮಾನ್‌-ಆರೊಗ್ಯ ಕರ್ನಾಟಕ ಕಾರ್ಡ್‌ ವಿತರಣೆ, ಉದ್ಯಾನಗಳ ಅಭಿವೃದ್ಧಿ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇನ್ನೆರಡು ವರ್ಷಗಳಲ್ಲಿ ನಗರವು ಸ್ಮಾರ್ಟ್ ಆಗಲಿದೆ’ ಎಂದರು.

‘ಸ್ವಚ್ಛತಾ ಅಭಿಯಾನದಲ್ಲಿ ‘ಸ್ವಚ್ಛ ಸುಂದರ ವಾರ್ಡ್ ಸ್ಪರ್ಧೆ’ ಆರಂಭಿಸಲಾಗುವುದು. ಈ ಮೂಲಕ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು. ಯುವಕ, ಯುವತಿಯರಿಗೆ ಉದ್ಯೋಗ ಒದಗಿಸಲು ಉದ್ಯಮಗಳ ಆರಂಭಕ್ಕೆ ಯೋಜಿಸಲಾಗಿದೆ. ಐಟಿ ಪಾರ್ಕ್ ನಿರ್ಮಾಣದ ಸಂಕಲ್ಪ ಮಾಡಲಾಗಿದೆ’ ಎಂದರು.

‘ಹೊಸ ಮತದಾರರ ನೋಂದಣಿಗೆ ಮತದಾರರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT