ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಕರಾಳ ದಿನ ಆಚರಣೆ: ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

ಡಿ.ಸಿ.ಗೆ ಮನವಿ ಸಲ್ಲಿಕೆ
Last Updated 26 ಮೇ 2021, 10:38 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಮತ್ತು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಗಡಿ ಭಾಗದಲ್ಲಿ ಐತಿಹಾಸಿಕ ರೈತ ಚಳವಳಿ ಪ್ರಾರಂಭವಾಗಿ 6 ತಿಂಗಳು ಪೂರೈಸಿದ ಅಂಗವಾಗಿ ರೈತ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಕರಾಳ ದಿನ ಆಚರಿಸಿದರು.

ತೋಳಿಗೆ ಕಪ್ಪುಪಟ್ಟಿ ಧರಿಸಿ, ಕಪ್ಪು ಬಾವುಟ ಹಿಡಿದು ಕುಳಿತಿದ್ದ ಅವರು ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಿದರು.

‘ದೆಹಲಿಯ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಕರೆ ಮೇರೆಗೆ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಇಲ್ಲಿ ಭಾಗವಹಿಸಲು ಅನುಕೂಲ ಆಗದವರು ತಮ್ಮ ಮನೆ, ಹೊಲ, ತೋಟಗಳು, ಬೀದಿಗಳಲ್ಲೇ ಕಪ್ಪು ಬಾವುಟ ಹಾರಿಸಿ ಪಾಲ್ಗೊಂಡಿದ್ದಾರೆ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆಯ ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

‘ಕೇಂದ್ರ ಸರ್ಕಾರವು ರೈತರ ಬಗ್ಗೆ ಕಿಂಚಿತ್ತು ಕಾಳಜಿಯನ್ನೂ ತೋರಿಸುತ್ತಿಲ್ಲ. ಆರು ತಿಂಗಳಿಂದ ಹೋರಾಟ ನಡೆಯುತ್ತಿದ್ದರೂ ಸ್ಪಂದಿಸುತ್ತಿಲ್ಲ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಹೋರಾಟ ಹಿಂಪಡೆಯುವುದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ದೆಹಲಿಯ ಗಡಿ ಸೇರಿದಂತೆ ಎಲ್ಲ ಕಡೆಯೂ ಹೋರಾಟ ಮುಂದುವರಿಯಲಿದೆ. ನಾವೂ ಇಲ್ಲಿ ಬೆಂಬಲ ನೀಡಲಿದ್ದೇವೆ. ಕೃಷಿಕರಿಗೆ ಮಾರಕವಾದ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಾದರೂ ನಮ್ಮ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಘಟಕದ ಸಂಚಾಲಕ ಚೂನಪ್ಪ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯಕ ಇದ್ದರು.

‘ಬಾಕಿ ಕೊಡಿಸದಿದ್ದರೆ ಸಚಿವರ ಕಾರಿಗೆ ಮುತ್ತಿಗೆ’
ಬೆಳಗಾವಿ:
‘ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಬರಬೇಕಾದ ಬಾಕಿ ಬಿಲ್‌ ಕೊಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಚಿವರ ಕಾರುಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ರೈತ ಸಂಘದ ರಾಜ್ಯ ಘಟಕದ ಸಂಚಾಲಕ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸುಮಾರು ಆರು ತಿಂಗಳಿನಿಂದಲೂ ಕಾರ್ಖಾನೆಗಳು ಬಾಕಿ ಬಿಲ್ ಪಾವತಿಸಿಲ್ಲ. ಇದು ಖಂಡನೀಯ. ಸರ್ಕಾರ ಈ ಕೂಡಲೇ ಇತ್ತ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ₹ 1,650 ಕೋಟಿ ಹಾಗೂ ಜಿಲ್ಲೆಯಲ್ಲಿ ₹ 650 ಕೋಟಿ ಬಿಲ್ ಬಾಕಿ ಇದೆ. ಕಬ್ಬು ಪೂರೈಸಿದ 15 ದಿನಗಳಲ್ಲಿ ಬಿಲ್‌ ಕೊಡಬೇಕು ಎಂಬ ನಿಯಮವಿದ್ದರೂ ಮುಖ್ಯಮಂತ್ರಿ, ಸಕ್ಕರೆ ಸಚಿವ, ಜಿಲ್ಲಾಡಳಿತ, ಸಕ್ಕರೆ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ರೈತರು ಆಸ್ಪತ್ರೆಗಳಿಗೆ ಹೋಗುವುದಕ್ಕೂ ಹಣವಿಲ್ಲದೆ ಮನೆಯಲ್ಲೇ ಮರಣ ಹೊಂದುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT