ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ | ಆಕರ್ಷಣೆಯ ಕೇಂದ್ರವಾದ ಮಹಾದ್ವಾರ: ₹1.20 ಕೋಟಿ ವೆಚ್ಚದಲ್ಲಿ ನಿರ್ಮಾಣ

Published 15 ಫೆಬ್ರುವರಿ 2024, 7:17 IST
Last Updated 15 ಫೆಬ್ರುವರಿ 2024, 7:17 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಖಾನಟ್ಟಿಯ ಶಿವಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಈಗ ಆಕರ್ಷಣೆಯ ಕೇಂದ್ರವಾಗಿದೆ. ಭಕ್ತರೆಲ್ಲ ಸೇರಿ ಸುಮಾರು ₹1.20 ಕೋಟಿ ವೆಚ್ಚದಲ್ಲಿ ಈ ಸುಂದರ ಮಹಾದ್ವಾರ ನಿರ್ಮಿಸಿದ್ದು ವಿಶೇಷ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಖಾನಟ್ಟಿ ಮಠದ ಭಕ್ತರ ಒಗ್ಗಟ್ಟಿನ ದ್ಯೋತಕವಾಗಿ ಈ ಮಹಾದ್ವಾರ ತಲೆ ಎತ್ತಿದೆ.

ಅರಬಾವಿಯ ನಸುಗೆಂಪು ಬಣ್ಣದ ಕಲ್ಲಿನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಗ್ರಾಮ ಪಂಚಾಯ್ತಿಯಿಂದ ₹30 ಲಕ್ಷ ವೆಚ್ಚದಲ್ಲಿ ಆವರಣಕ್ಕೆ ಫೇವರ್ಸ್ ಮಾಡಿಸಿದ್ದು, ಶಿವಲಿಂಗೇಶ್ವರರ ದೇವಸ್ಥಾನವು ಭಕ್ತರ ಕಣ್ಮನ ಸೆಳೆಯುತ್ತಲಿದೆ.

ಹಿನ್ನೆಲೆ: ದೈವಾಂಶ ಪುರುಷರು ಆಗಿರುವ ಶಿವಲಿಂಗೇಶ್ವರರು ಕಲಬುರಗಿ ಜಿಲ್ಲೆಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಕ್ರಿ.ಶ. 1645ರಲ್ಲಿ ಜನಿಸಿದರು. ಸಾಕ್ಷಾತ್ಕಾರದ ಮೂಲಕ ಲೋಕ ಕಲ್ಯಾಣ ಮಾಡುತ್ತ ಗೋಕಾಕ ತಾಲ್ಲೂಕಿನ ಸಾವಳಗಿಗೆ ಬಂದು ನೆಲೆಸಿದರು. ಇವರ ತಪಸ್ಸಿನ ಪ್ರಭಾವವು ಕಲಬುರಗಿಯ ಗುರು ಖಾಜಾ ಬಂದಾ ನವಾಜ ವಲಿ ಅವರ ಮೇಲಾಯಿತು. ಮುಸಲ್ಮಾನ ಗುರು ಖಾಜಾ ಬಂದಾ ನವಾಜರು ವೀರಶೈವ ಗುರು ಶಿವಲಿಂಗೇಶ್ವರರ ಸಖ್ಯವನ್ನು ಬೆಳೆಸುವ ಇಚ್ಛೆ ಹೊಂದಿ, ಅವರನ್ನು ಭೇಟಿಯಾಗಿರುವ ಪ್ರತೀಕವಾಗಿ ಶಿವಲಿಂಗೇಶ್ವರರು ನೆಲೆಸಿರುವ ಸ್ಥಳಗಳೆಲ್ಲವೂ ಭಾವೈಕ್ಯದ ನೆಲೆಗಳಾಗಿವೆ.

ಮುಸ್ಲಿಂ ಗುರುಗಳು ನೀಡಿದ ಹಸಿರು ಬಣ್ಣದ ಪೇಟಾ, ಶೈಲಿ, ಸಮನ ರಾಜ ಪೋಷಾಕುಗಳನ್ನು ಸಾವಳಗಿಯ ಮೂಲ ಪೀಠದ ಎಲ್ಲ ಕಾರ್ಯಕ್ರಮಗಳಲ್ಲಿ ಧರಿಸುವುದು ವಿಶೇಷ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಕಾಶ್ಮೀರ ಸೇರಿ ಒಟ್ಟು 360 ಮಠಗಳಿದ್ದು, ಅಂಥ ಮಠಗಳಲ್ಲಿ ಖಾನಟ್ಟಿಯ ಮಠವೂ ಒಂದಾಗಿದೆ.

ಉದ್ಘಾಟನೆ: ಫೆ. 15ರಂದು ಜರುಗುವ ಸಮಾರಂಭದ ಮುಖ್ಯ ಸಾನ್ನಿಧ್ಯವನ್ನು ಸಾವಳಗಿಯ ಸಿದ್ಧ ಸಂಸ್ಥಾನಮಠದ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ವಹಿಸುವರು. ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರ ಸ್ವಾಮೀಜಿ, ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಜೋಡಕುರಳಿಯ ಚಿದಾನಾನಂದ ಭಾರತಿ ಸ್ವಾಮೀಜಿ, ದೂಪದಾಳದ ಸಿದ್ಧಾರೂಢ ಮಠದ ಭೀಮಾನಂದ ಸ್ವಾಮೀಜಿ, ಶಿವಾಪುರ ಅಡವಿಸಿದ್ಧೇಶ್ವರ ಮಠದ ಅಡವಿಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾದೇವಿ ಮಹಾದೇವ ತುಪ್ಪದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದೆ ಮಂಗಲಾ ಅಂಗಡಿ ಭಾಗವಹಿಸುವರು.

ಫೆ. 16ರಂದು ಬೆಳಿಗ್ಗೆ 10ಕ್ಕೆ ಜರುಗುವ ಸಮಾರಂಭವ ಸಾನ್ನಿಧ್ಯವನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು, ಮುಮೈಟಗುಡ್ಡದ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಮಹಾಲಿಂಗಪೂರದ ಸಹಜಾನಂದ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಶಿವನಪ್ಪ ತುಪ್ಪದ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಚೇತನ ರಡ್ಢೇರಟ್ಟಿ ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT