ಬುಧವಾರ, ಆಗಸ್ಟ್ 17, 2022
30 °C

ಜನವರಿ ಮೊದಲ ವಾರ ಸಂಪುಟ ವಿಸ್ತರಣೆ: ರಮೇಶ್ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಗ್ರಾಮ ಪಂಚಾಯಿತಿ ಚುನಾವಣೆ ಬಂದಿದ್ದರಿಂದಾಗಿ, ಸಂಪುಟ ವಿಸ್ತರಣೆಗೆ ತಾತ್ಕಾಲಿಕ ತಡೆಯಾಗಿದೆ. ಜನವರಿ ಮೊದಲ ವಾರದಲ್ಲಿ ಆ ಪ್ರಕ್ರಿಯೆ ನಡೆಯಬಹುದು’ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇಲ್ಲಿ ಗುರುವಾರ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಪ್ರತಾಪಚಂದ್ರ ಶೆಟ್ಟಿ ಬಹಳ ಒಳ್ಳೆಯ ಮನುಷ್ಯ. ಅವರು ಪಕ್ಷಕ್ಕೋಸ್ಕರ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬಾರದು. ರಾಜೀನಾಮೆ ನೀಡಿ ವ್ಯಕ್ತಿತ್ವ ಉಳಿಸಿಕೊಳ್ಳುವುದು ಒಳ್ಳೆಯದು’ ಎಂದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಬಗ್ಗೆ ಚರ್ಚೆಯಾಗಿಲ್ಲ. ಚುನಾವಣೆ ಘೋಷಣೆ ಬಳಿಕ ವರಿಷ್ಠರು ನಿರ್ಣಯ ಕೈಗೊಳ್ಳುತ್ತಾರೆ. ಯಾರಿಗೇ ಟಿಕೆಟ್‌ ಕೊಟ್ಟರೂ ಅವರ ಪರ ಕೆಲಸಕ್ಕೆ ತಯಾರಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

‘ಬೆಳಗಾವಿ ಜಿಲ್ಲೆ ವಿಭಜಿಸಿದರೆ ಗೋಕಾಕ ಹಾಗೂ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆ ಆಗಬೇಕು ಎಂಬ ಆಗ್ರಹ ನಮ್ಮದೂ ಆಗಿದೆ. ಅದಕ್ಕೂ ಮುನ್ನ ತಾಲ್ಲೂಕುಗಳ ವಿಗಂಡಣೆ ಆಗಬೇಕು ಎಂದು ಸಲಹೆ ಕೊಟ್ಟಿದ್ದೇನೆ. ಮೊನ್ನೆ ಯರಗಟ್ಟಿ ಘೋಷಣೆಯಾಗಿದ್ದು, ಅಧಿಕೃತವಾಗಿ ಅಸ್ತಿತ್ವಕ್ಕೆ ಬರಬೇಕಿದೆ. ಇನ್ನೂ ಕೆಲವು ಆಗಬೇಕು. ಕುಡಚಿ ಅಥವಾ ಹಾರೂಗೇರಿಯಲ್ಲಿ ಒಂದನ್ನು ತಾಲ್ಲೂಕು ಮಾಡಬೇಕು. ನಂತರ ಜಿಲ್ಲೆ ರಚನೆಯಾದರೆ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಈ ಚರ್ಚೆ ಆಗಿತ್ತು’ ಎಂದರು.

‘ಚುನಾವಣೆ ಬಂದಾಗ ಮಾತ್ರ ನಾವು ಪ್ರತಿಸ್ಪರ್ಧಿಗಳು. ಉಳಿದಂತೆ, ಲಖನ್ ಜಾರಕಿಹೊಳಿ ಎಂದಿಗೂ ನನ್ನ ಸಹೋದರ. ಕುಟುಂಬದ ವಿಚಾರ ಬಂದಾಗ ಸಹೋದರರೆಲ್ಲರೂ ಒಂದೇ. ಲಖನ್ ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ; ಚರ್ಚೆಯಾಗಿಲ್ಲ. ಕುಟುಂಬದ ಪೂಜೆ ಮತ್ತಿತರ ಕಾರ್ಯಕ್ರಮದಲ್ಲಿ ಸೇರುತ್ತಿರುತ್ತೇವೆ. ಪುತ್ರ ಅಮರನಾಥ್ ಜಾರಕಿಹೊಳಿ ಸದ್ಯಕ್ಕೆ ರಾಜಕಾರಣಕ್ಕೆ ಬರುವುದಿಲ್ಲ. ಈಗ ನಾವೇ ಇದ್ದೇವೆ. ಮುಂದಿನ ದಿನಗಳಲ್ಲಿ ನೋಡೋಣ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು