ಶನಿವಾರ, ಜುಲೈ 24, 2021
20 °C
ವ್ಯರ್ಥವಾಗಿ ಹರಿದು ಹೋಗುತ್ತಿರುವ ಜೀವಜಲ

ನೆಮ್ಮದಿಯ ನಾಳೆಗೆ ಮಳೆ ನೀರಿಳಿಯಲಿ ಭೂಮಿಗೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮಳೆಗಾಲ ಆರಂಭವಾಗಿದೆ. ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ‘ಹಿಡಿ’ದಿಟ್ಟುಕೊಂಡು ನೆಮ್ಮದಿಯ ನಾಳೆಗಳಿಗೆ ಸದ್ಬಳಕೆ ಮಾಡಿಕೊಳ್ಳುವ ಕಾಳಜಿಯು ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಕೆಲವೆಡೆ ಮಾತ್ರವೇ ಕಂಡುಬರುತ್ತಿದೆ.

ಮನೆಗಳ ಬಳಿ ಮಳೆ ನೀರು ಸಂಗ್ರಹಿಸಿ ಬಳಸುವುದಕ್ಕೆ ಬಹಳಷ್ಟು ಅವಕಾಶಗಳಿದ್ದರೂ ಬಹುತೇಕರು ಅದನ್ನು ಬಳಸಿಕೊಳ್ಳುತ್ತಿಲ್ಲ. ಬಹುತೇಕ ಸರ್ಕಾರಿ ಕಚೇರಿಗಳಲ್ಲೂ ಇಂಥದೊಂದು ಪರಿಸರ ಸ್ನೇಹಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಉಪಕ್ರಮವನ್ನು ಅನುಸರಿಸುವುದು ಕೂಡ ಕಂಡುಬರುತ್ತಿಲ್ಲ.

ನಗರದ ಅಲ್ಲಲ್ಲಿ ಕೆಲವರು ವೈಯಕ್ತಿಕವಾಗಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನೀರು ಸಂಗ್ರಹಿಸಿ ಇಂಗುವಂತೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸುವುದಕ್ಕೆ ಅವಕಾಶವಿದೆ. ಮನೆಗಳನ್ನು ನಿರ್ಮಿಸುವಾಗಲೇ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸ್ಥಳೀಯ ಸಂಸ್ಥೆಗಳು ಹೇಳುವುದು ಕೇವಲ ಸೂಚನೆಯಾಗಿಯೇ ಉಳಿದಿದೆ. ಜನರು ಈ ವಿಷಯದಲ್ಲಿ ನಿರಾಸಕ್ತಿ ವಹಿಸಿರುವುದು ಕಂಡುಬಂದಿದೆ.

ಮಾಹಿತಿಯೇ ಇಲ್ಲ

ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆ ಆಗುತ್ತಿದೆ. ಈ ನೀರನ್ನು ಹಿಡಿದಿಡುವ ನಿಟ್ಟಿನಲ್ಲಿ ಎಷ್ಟು ಮನೆಗಳಲ್ಲಿ ಪ್ರಯತ್ನ ನಡೆದಿದೆ ಎನ್ನುವ ಮಾಹಿತಿಯು ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಇಲ್ಲ! ನಗರ ಮತ್ತು ಪಟ್ಟಣಗಳಲ್ಲಿ ಮನೆ ಕಟ್ಟುವಾಗ ಮಳೆ ನೀರು ಸಂಗ್ರಹಕ್ಕೆ ಜಾಗ ಬಿಡುವುದು ಕಡ್ಡಾಯ ಎನ್ನುವ ನಿಯಮ ಇದೆ. ಇದು ಪಾಲನೆ ಆಗುತ್ತಿಲ್ಲ. ವ್ಯವಸ್ಥಿತವಾದ ಬಡಾವಣೆಗಳಲ್ಲಿ ಬಂಗಲೆಗಳನ್ನು ಉಳ್ಳವರು ಮತ್ತು ಸುತ್ತಲೂ ಬಹಳಷ್ಟು ಜಾಗ ಹಾಗೂ ಉದ್ಯಾನ ಹೊಂದಿದವರು ಅನುಷ್ಠಾನಕ್ಕೆ ಕ್ರಮ ವಹಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿಗಳಿಂದ ಅಲ್ಲಲ್ಲಿ ಮಳೆ ನೀರು ಸಂಗ್ರಹಕ್ಕೆ ವಿವಿಧ ಪ್ರಯತ್ನಗಳು ನಡೆದಿವೆ. ಈ ಬಾರಿ ‘ಕ್ಯಾಚ್ ದಿ ರೇನ್’ ಎನ್ನುವ ಯೋಜನೆಯನ್ನೂ ಕೇಂದ್ರ ಸರ್ಕಾರದಿಂದ ಜಾರಿಗೊಳಿಸಲಾಗಿದೆ.

ಕೆಲವು ಕ್ರಮ

‘ಮಳೆ ನೀರು ತಡೆದು ಸದ್ಬಳಕೆ ಮಾಡಿಕೊಳ್ಳಲು, ರೈತರಿಗೆ ಅನುಕೂಲ ಕಲ್ಪಿಸಲು ಹೊಸದಾಗಿ 247 ಕೆರೆಗಳ ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ. ಇದರಲ್ಲಿ 54 ಕೆರೆಗಳ ಕಾಮಗಾರಿ ಪೂರ್ಣಗೊಂಡಿದೆ. 151 ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ‍‍‍ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌ ಹೇಳುತ್ತಾರೆ.

‘ಕಲ್ಯಾಣಿಗಳ ಪುನಶ್ಚೇತನಕ್ಕೂ ಕ್ರಮ ವಹಿಸಲಾಗಿದೆ. ರೈತರ ಜಮೀನುಗಳಲ್ಲಿ 2ಸಾವಿರ ಬದು ನಿರ್ಮಾಣ ಕಾರ್ಯವೂ ನಡೆದಿದೆ. 1,538 ಕೃಷಿ ಹೊಂಡ ನಿರ್ಮಿಸಲಾಗಿದೆ. 1,012 ತೆರೆದ ಬಾವಿಗಳ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ. ಬಚ್ಚಲು ನೀರು ಇಂಗುಗುಂಡಿಗಳಿಗೂ ಆದ್ಯತೆ ಕೊಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಈ ವಿಷಯದಲ್ಲಿ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ‌’ ಎಂದು ತಿಳಿಸಿದರು.

ಸಾಲ ಸೌಲಭ್ಯವೂ ಸಿಗುತ್ತದೆ

ಮನೆಗಳ ತಾರಸಿಗಳಲ್ಲಿ ಕೈತೋಟ ನಿರ್ಮಿಸಲು ಹಾಗೂ ಮಳೆ ನೀರು ಸಂಗ್ರಹಿಸುವ ಘಟಕ ಸ್ಥಾಪನೆಗೆ ಸಾಲ ನೀಡುವ ಯೋಜನೆಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಜಾರಿಗೊಳಿಸಿದೆ.

‘ನೀರಿನ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಹೀಗಾಗಿ, ಮಳೆ ನೀರು ಸಂಗ್ರಹ ಮತ್ತು ತಾರಸಿ ತೋಟದ ಸಂಸ್ಕೃತಿಯನ್ನು ನಗರವಾಸಿಗಳಲ್ಲಿ ಬೆಳೆಸಲು ಈ ಯೋಜನೆ ರೂಪಿಸಲಾಗಿದೆ. ಆರ್‌ಸಿಸಿ ಮನೆ ಹೊಂದಿರುವವರು ಕನಿಷ್ಠ ₹ 50ಸಾವಿರದಿಂದ ₹ 1 ಲಕ್ಷದವರೆಗೆ ಸಾಲ ಪಡೆಯಬಹುದು. ದೊಡ್ಡ ಪ್ರಮಾಣದಲ್ಲಿ ಮಾಡಿದರೆ ₹ 10 ಲಕ್ಷದವರೆಗೂ ಸಾಲ ದೊರೆಯಲಿದೆ. ಕೈತೋಟದೊಂದಿಗೆ ಮಳೆ ನೀರು ಸಂಗ್ರಹ ಮಾಡಿದರಷ್ಟೇ ಸಾಲ ಸೌಲಭ್ಯ ಸಿಗುತ್ತದೆ’ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

ಮಲಪ್ರಭೆ ಸೇರುತ್ತದೆ

ಸವದತ್ತಿ: ಮಳೆ ನೀರಿನ ಭಾಗಶಃ ಸಂಗ್ರಹ ಇಲ್ಲಿ ನಡೆಯುತ್ತಿಲ್ಲ. ನೀರು ಚರಂಡಿಗಳ ಮೂಲಕ ಹಳ್ಳಕ್ಕೆ ಹರಿದು ಮುಂದೆ ಮಲಪ್ರಭಾ ನದಿಗೆ ಸೇರುತ್ತಿದೆ. ಸ್ಥಳಾವಕಾಶದ ಕೊರತೆ ಮೊದಲಾದ ಕಾರಣಗಳಿಂದ ಜನರು ಸಂಗ್ರಹಕ್ಕೆ ಮುಂದಾಗಿಲ್ಲ. ಹೊಸ ಬಡಾವಣೆಗಳಲ್ಲೂ ಮಾದರಿ ಕೆಲಸಗಳು ಆಗುತ್ತಿಲ್ಲ.

ಕಾಲೇಜಿನಲ್ಲಿ ಮಾದರಿ

ಚಿಕ್ಕೋಡಿ: ಇಲ್ಲಿನ ಕೆಎಲ್ಇ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‍ನಲ್ಲಿ ಮಳೆ ನೀರು ಸಂಗ್ರಹ ಕಾರ್ಯ ಮಾದರಿಯಾಗಿದೆ. ಬೆಟ್ಟದ ಇಳಿಜಾರಿನ ಪ್ರದೇಶದಲ್ಲಿರುವ ಕಾಲೇಜಿನ ಕಟ್ಟಡಗಳಿಂದ ಮತ್ತು ಆವರಣದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಿ, ಅದನ್ನು ಶುದ್ಧಿಕರಿಸಿ ಉದ್ಯಾನಕ್ಕೆ ಬಳಸುವ ವ್ಯವಸ್ಥೆ ಮಾಡಲಾಗಿದೆ.

ನದಿಗೆ ಹರಿಯುತ್ತಿದೆ

ಖಾನಾಪುರ: ಪಟ್ಟಣ ಎತ್ತರ ಪ್ರದೇಶದಲ್ಲಿದ್ದು ದಕ್ಷಿಣಕ್ಕೆ ಮಲಪ್ರಭಾ ನದಿ ಹರಿಯುತ್ತಿದೆ. ಇಲ್ಲಿ ಮಳೆಗಾಲದಲ್ಲಿ ವಿಪರೀತ ಮಳೆ ಸುರಿಯುವ ಪಟ್ಟಣ ಪಂಚಾಯ್ತಿಯು ನೀರು ನೇರವಾಗಿ ನದಿಗೆ ಹೋಗಿ ಸೇರುವಂತೆ ಕ್ರಮ ವಹಿಸಿದೆ. ಪ.ಪಂ. ವ್ಯಾಪ್ತಿಯಲ್ಲಿ 48 ಸರ್ಕಾರಿ ಹಾಗೂ 80 ಖಾಸಗಿ ಕೊಳವೆಬಾವಿಗಳಿವೆ. ಸರ್ಕಾರಿ ಕೊಳವೆಬಾವಿಗಳ ಬಳಿ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿರುವ ಕೊಳವೆಬಾವಿಗಳ ಮಾಲೀಕರ ಪೈಕಿ ಕೆಲವರು ಇಂಗುಗುಂಡಿಗಳನ್ನು ಮಾಡಿದ್ದಾರೆ.

ಮೂಡಲಗಿ: ನೂರಕ್ಕೆ ನೂರು ಇಲ್ಲ

ಮೂಡಲಗಿ: ಪಟ್ಟಣದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಇಂಗಿಸುವ ಕಾರ್ಯವು ನೂರಕ್ಕೆ ನೂರರಷ್ಟು ಆಗುತ್ತಿಲ್ಲ.

ಮನೆ ನಿರ್ಮಾಣಕ್ಕೆ ಪುರಸಭೆಯಿಂದ ಅನುಮತಿ ಕೊಡುವ ವೇಳೆ, ಮಳೆ ನೀರು ಸಂಗ್ರಹಿಸಿ ಇಂಗಿಸುವ ಬಗ್ಗೆ ಷರತ್ತು ಹಾಕಿರುತ್ತಾರೆ. ಆದರೆ, ಬಹಳಷ್ಟು ಜನರು ಮನೆ ಸುತ್ತಲೂ ಸ್ಥಳದ ಅಭಾವದಿಂದ ಈ ಕಾರ್ಯ ಮಾಡುತ್ತಿಲ್ಲ. ಕೆಲವರು ಮಾಡಿದ್ದಾರೆ. ‘ತಾಲ್ಲೂಕಿನಲ್ಲಿರುವ ಕೆರೆ, ಬಾವಿ, ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ನೀರು ಸಂಗ್ರಹಿಸುವಂತಾಗಬೇಕು’ ಎನ್ನುವುದು ಜನರ ಒತ್ತಾಯವಾಗಿದೆ.

ಬಳಕೆಯಾಗುತ್ತಿಲ್ಲ

ರಾಮದುರ್ಗ: ಪಟ್ಟಣದಲ್ಲೂ ಮಳೆ ನೀರು ನಿರುಪಯುಕ್ತವಾಗಿ ಚರಂಡಿ ಸೇರುತ್ತಿದೆ. ಪಟ್ಟಣ ಪ್ರದೇಶದಲ್ಲಿ ಮಳೆ ನೀರು ಸಂಗ್ರಹ ಕಾರ್ಯ ಸರಿಯಾಗಿ ಅನುಷ್ಠಾನಗೊಂಡಿಲ್ಲ. ನಿಯಮವಿದ್ದರೂ ಜಾರಿಯಾಗಿಲ್ಲ. ಕೆಲವರು ಮಾಡಿಕೊಂಡಿದ್ದರೂ ನಿರ್ವಹಣೆ ಇಲ್ಲದಾಗಿದೆ.

‘ವಾಣಿಜ್ಯ ಸಂಕೀರ್ಣ ಮತ್ತು ಕಲ್ಯಾಣಮಂಟಪಗಳನ್ನು ನಿರ್ಮಿಸುವಾಗಲೂ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಆದರೆ, ಸರಿಯಾಗಿ  ಅನುಷ್ಠಾನಗೊಂಡಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್‌.ಜಿ. ಅಂಬಿಗೇರ ತಿಳಿಸಿದರು.

ಕೆಡಿಸಿದರು ಶುದ್ಧ ಕೆರೆಯ ನೀರು

ಚನ್ನಮ್ಮನ ಕಿತ್ತೂರು: ಇಲ್ಲಿ ಮಳೆ ನೀರು ಸಂಗ್ರಹಿಸುವುದು ಒತ್ತಟ್ಟಗಿರಿಲಿ, ಪಟ್ಟಣದ ಸುತ್ತಲೂ ಇರುವ ನಾಲ್ಕೈದು ಶುದ್ಧ ಕೆರೆ ನೀರನ್ನು ಕೆಡಿಸಿದ ದೂರುಗಳು ಕೇಳಿಬರುತ್ತವೆ.

ಚರಂಡಿ ನಿರ್ಮಿಸಿದ ನಂತರ ಅದರ ನೀರು ಸಕ್ಕರೆಗೆರೆ, ಅರಿಸಿನಗೆರೆ, ರಣಗಟ್ಟಿಕೆರೆ ಸೇರಿ ಕೆಲ ಕೆರೆಗಳಿಗೆ ಹೋಗುವಂತೆ ಸಂಪರ್ಕ ಕಲ್ಪಿಸಲಾಯಿತು. ಮನೆಯವರು ಚರಂಡಿಗೆ ಶೌಚದ ಸಂಪರ್ಕ ಕೊಟ್ಟರು. ಕುಡಿಯಲು, ಅಡುಗೆಗೆ ಬಳಸುತ್ತಿದ್ದ ಕೆರೆಯಂಗಳದ ನೀರು ಕೆಟ್ಟು ದುರ್ವಸನೆ ಬರಲು ಆರಂಭಿಸಿತು. ಚರಂಡಿ ನೀರು ಕೆರೆ ಅಂಗಳಕ್ಕೆ ಹರಿದು ಹೋಗುವುದನ್ನು ತಡೆಯಬೇಕು ಎನ್ನುತ್ತಾರೆ ಸಾರ್ವಜನಿಕರು.

ತಾಲ್ಲೂಕಿನಲ್ಲಿ ಅನೇಕ ರೈತರು ಮಾತ್ರ ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿ ಮಳೆ ನೀರು ಸಂಗ್ರಹಿಸಲು ಮುಂದಾಗಿದ್ದಾರೆ.

ಪರಿಶೀಲಿಸುವುದಿಲ್ಲ

ಗೋಕಾಕ: ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಸಾವಿರ ಚದರ ಅಡಿಗೂ ಹೆಚ್ಚಿನ ಅಳತೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮತಿ ಕೊಡುವಾಗ ಮಳೆ ನೀರು ಭೂಮಿಯಲ್ಲಿ ಇಂಗುವಂತೆ ಇಂಗು-ಗುಂಡಿ ನಿರ್ಮಿಸಬೇಕೆಂಬ ಷರತ್ತು ವಿಧಿಸಲಾಗುತ್ತಿದೆ. ಪ್ರತಿ ವರ್ಷ ನೂರಾರು ಕಟ್ಟಡ ಕಾಮಗಾರಿಗಳಿಗೆ ಈ ರೀತಿ ಅನುಮತಿ ನೀಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇದೆಯೇ ಅಥವಾ ಬಳಕೆಯಲ್ಲಿದೆಯೇ ಎನ್ನುವುದನ್ನು ನಗರಸಭೆಯವರು ಪರಿಶೀಲಿಸುತ್ತಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು