ಎಲ್ಲರಿಗೂ ಶುದ್ಧ ನೀರು; ಕೇಂದ್ರದ ಧ್ಯೇಯ: ಮಹಾಂತೇಶ ಕವಟಗಿಮಠ

ಬೆಳಗಾವಿ: ‘ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಧ್ಯೇಯವಾಗಿದೆ. ಇದಕ್ಕಾಗಿ ಮನೆ ಮನೆಗೆ ನೀರು ಪೂರೈಸಲು ‘ಜಲಜೀವನ ಅಭಿಯಾನ’ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದರು.
ಜಿಲ್ಲಾ ಪಂಚಾಯ್ತಿಯ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಿಂದ ತಾಲ್ಲೂಕಿನ ಹೊನ್ನಿಹಾಳ ಗ್ರಾಮದಲಲಿ ‘ಜಲಜೀವನ ಅಭಿಯಾನ’ದಲ್ಲಿ ಕೈಗೊಂಡಿರುವ ನೀರು ಪೂರೈಕೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ ಶೇ 37.5, ಗ್ರಾಮ ಪಂಚಾಯ್ತಿಯಿಂದ ಶೇ 15 ಹಾಗೂ ಜನರ ಶೇ 10ರಷ್ಟು ಅನುದಾನದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇ.90ರಷ್ಟು ಹಳ್ಳಿಗಳಲ್ಲಿ ಅನುಷ್ಠಾನಗೊಳ್ಳಲಿದೆ’ ಎಂದು ತಿಳಿಸಿದರು.
ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಧನಂಜಯ ಜಾಧವ, ‘ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಜಲಜೀವನ ಯೋಜನೆಯ ಶ್ರೇಯಸ್ಸನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಗುತ್ತಿಗೆದಾರರು ಕಡ್ಡಾಯವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಭಾಗದ ಸಂಸದರು, ಶಾಸಕರು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಭಾವಚಿತ್ರವನ್ನು ಕಾಮಗಾರಿಯ ಫಲಕದಲ್ಲಿ ಅಳವಡಿಸಬೇಕು’ ಎಂದು ಒತ್ತಾಯಿಸದರು.
ಸಂಸದೆ ಮಂಗಲಾ ಅಂಗಡಿ ಚಾಲನೆ ನೀಡಿದರು. ಮುಖಂಡರಾದ ರಾಜು ದೇಸಾಯಿ, ಮಲ್ಲಪ್ಪ ಕಾಂಬಳೆ, ಸಿ. ಮಠದ, ಬಸವಂತ ಕೆಂಗೇರಿ, ಗುತ್ತಿಗೆದಾರ ಶಿವಾಜಿ ಚಾಲವೆಟಕರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.