ಶನಿವಾರ, ಜೂಲೈ 11, 2020
29 °C

ವಲಸೆ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವುದೇ ಸವಾಲು !

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್‌ಡೌನ್‌ದಿಂದಾಗಿ ಬೇಸತ್ತ ಸಾವಿರಾರು ವಲಸೆ ಕಾರ್ಮಿಕರು ಜಿಲ್ಲೆಯಿಂದ ತಮ್ಮ ತಮ್ಮ ರಾಜ್ಯಗಳತ್ತ ವಾಪಸ್‌ ಹೋಗುತ್ತಿದ್ದಾರೆ. ಹೀಗೆ ಅವರು ಹೊರಟುಹೋದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ತಲೆದೋರಲಿದೆ ಎಂದು ಕಾರ್ಮಿಕ ಮುಖಂಡರು ಆತಂಕಕ್ಕೆ ಒಳಗಾಗಿದ್ದಾರೆ. ವಲಸೆ ಹೋಗದಂತೆ ಇವರನ್ನು ಹಿಡಿದಿಟ್ಟುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಮಾರ್ಚ್‌ 20ರಿಂದ ಲಾಕ್‌ಡೌನ್‌ ಘೋಷಿಸಲಾಗಿತ್ತು. ಸುಮಾರು 2 ತಿಂಗಳವರೆಗೆ ಇದು ಮುಂದುವರಿಯಿತು. ಇತ್ತೀಚೆಗಷ್ಟೇ ಹಂತಹಂತವಾಗಿ ಲಾಕ್‌ಡೌನ್‌ ಸಡಿಲುಗೊಳಿಸಲಾಗುತ್ತಿದೆ. ಬಹುತೇಕ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಮಳೆಗಾಲ ಮುಗಿಯುವವರೆಗೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಕೆಲಸವಿಲ್ಲದ್ದರಿಂದ ವಲಸೆ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ಊಟ ಹಾಗೂ ವಸತಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಜೀವ ಉಳಿದರೆ ಸಾಕೆಂದು ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಟ್ಟಡ ನಿರ್ಮಾಣ, ಕಬ್ಬಿಣದ ಕೆಲಸ, ಕೈಗಾರಿಕೆಗಳಲ್ಲಿ ಕೆಲಸ, ವೆಲ್ಡಿಂಗ್‌ ಮೆಷಿನ್‌, ಪೇಯಿಂಟಿಂಗ್‌, ಮರಗೆಲಸ ಸೇರಿದಂತೆ ದೈಹಿಕ ಶ್ರಮ ಬೇಡುವ ಹಲವು ರೀತಿಯ ಕೆಲಸಗಳನ್ನು ಇವರು ಮಾಡುತ್ತಿದ್ದರು. ಅವರು ಈಗ ತಮ್ಮ ತಮ್ಮ ಗ್ರಾಮಗಳತ್ತ ಹೋದರೆ, ಮುಂದಿನ ದಿನಗಳಲ್ಲಿ ಈ ಕೆಲಸಗಳನ್ನುಯಾರು ಮಾಡುವರು? ಈಗ ಹೋಗುವರು ಮತ್ತೆ ಬೆಳಗಾವಿಗೆ ವಾಪಸ್ಸಾಗುತ್ತಾರೆ ಎನ್ನುವ ಖಾತರಿ ಯಾರಿಗೂ ಇಲ್ಲ. ಇವರನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಸರ್ಕಾರ ಅಥವಾ ಜಿಲ್ಲಾಡಳಿತ ಮಾಡಬೇಕೆಂದು ಕಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಅನ್ಯ ರಾಜ್ಯಗಳ ಕಾರ್ಮಿಕರಿದ್ದಾರೆ. ಇವರಲ್ಲಿ 2,200 ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಿದ್ದಾರೆ. ಸೋಮವಾರ 700 ಜನರು ಬಿಹಾರಕ್ಕೆ ತೆರಳಿದರು. ಸುಮಾರು 850 ಜನರು ಉತ್ತರ ಪ್ರದೇಶಕ್ಕೆ, 250 ಜನರು ಪಶ್ಚಿಮ ಬಂಗಾಳಕ್ಕೆ ಹಾಗೂ 60 ಜನ ಉತ್ತರಾಖಂಡಕ್ಕೆ ಸುಮಾರು 50 ಜನ ಛತ್ತೀಸಗಢಕ್ಕೆ ತೆರಳಲು ಹೆಸರು ನೋಂದಾಯಿಸಿದ್ದಾರೆ.

‘ಸದ್ಯಕ್ಕೆ ಊರು ಸೇರೋಣ, ಮುಂದೆ ಏನು ಮಾಡಬೇಕು ಎನ್ನುವುದನ್ನು ಯೋಚಿಸಿದರಾಯಿತು’ ಎಂದು ಜಾರ್ಖಂಡ್‌ ಕಾರ್ಮಿಕ ಮುನ್ನಾಭಾಯಿ ಹೇಳಿದ.

ಉಳಿಸಿಕೊಳ್ಳಲು ಒತ್ತಾಯ:

‘ದೈಹಿಕ ಶ್ರಮ ಬೇಡುವ ಹಾಗೂ ಕಠಿಣ ಕೆಲಸಗಳನ್ನು ಸಾಮಾನ್ಯವಾಗಿ ಉತ್ತರ ಪ್ರದೇಶ, ಬಿಹಾರದವರು ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಅವರೀಗ ವಾಪಸ್‌ ಹೊರಟು ಹೋದರೆ, ಇಂಹತ ಕೆಲಸಗಳನ್ನು ಮಾಡಲು ಅನುಭವಸ್ಥ ಕಾರ್ಮಿಕರ ಕೊರತೆ ಉಂಟಾಗಲಿದೆ. ಹೇಗಾದರೂ ಸರಿ, ಅನ್ಯ ರಾಜ್ಯಗಳ ಕಾರ್ಮಿಕರನ್ನು ಇಲ್ಲಿ ಉಳಿಸಿಕೊಳ್ಳಲು ಜಿಲ್ಲಾಡಳಿತ ಪ್ರಯತ್ನ ಮಾಡಬೇಕು’ ಎಂದು ಕಾರ್ಮಿಕ ಮುಖಂಡ, ವಕೀಲ ಎನ್‌.ಆರ್‌. ಲಾತೂರ ಹೇಳಿದರು.

‘ಮುಖ್ಯವಾಗಿ ಅವರಿಗೆ ಜೀವನಾವಶ್ಯಕ ವಸ್ತುಗಳನ್ನು ನೀಡಬೇಕು, ಏಪ್ರಿಲ್‌ ಹಾಗೂ ಮೇ ತಿಂಗಳ ಮನೆ ಬಾಡಿಗೆ ಮನ್ನಾ ಮಾಡಬೇಕು, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು, ಪಡಿತರ ಅಂಗಡಿಗಳ ಮೂಲಕ ಎರಡು ತಿಂಗಳ ದಿನಸಿ ಪೂರೈಸಬೇಕು, ಎರಡು ತಿಂಗಳ ವಿದ್ಯುತ್‌ ಬಿಲ್‌ ಮನ್ನಾ ಮಾಡುವುದು ಸೇರಿದಂತೆ ಹಲವು ರೀತಿಯ ಸಹಾಯವನ್ನು ಸರ್ಕಾರ ಈ ಕೂಡಲೇ ಘೋಷಿಸಬೇಕು. ಇಲ್ಲದಿದ್ದರೆ ಇವರೆಲ್ಲರೂ ಹೋದ ನಂತರ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿ ಕಾಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು