ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ತವರು ಕಾಕತಿ ಪ್ರವಾಸಿ ತಾಣವಾಗಲಿ: ಸಂಸದ ಅಣ್ಣಾಸಾಹೇಬ ಜೊಲ್ಲೆ

Last Updated 23 ಅಕ್ಟೋಬರ್ 2021, 8:38 IST
ಅಕ್ಷರ ಗಾತ್ರ

ಬೆಳಗಾವಿ: ‘ಕಿತ್ತೂರು ರಾಣಿ ಚನ್ನಮ್ಮನ ತವರಾದ ಕಾಕತಿ ಗ್ರಾಮವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು. ಈ ಮೂಲಕ ವೀರ ರಾಣಿಗೆ ಗೌರವ ಸಲ್ಲಿಸಬೇಕು’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಉತ್ಸವ-2021 ಅಂಗವಾಗಿ ತಾಲ್ಲೂಕಿನ ಕಾಕತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚನ್ನಮ್ಮನ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿ, ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸ್ವಾತಂತ್ರ ಹೋರಾಟಕ್ಕೆ ಚನ್ನಮ್ಮನ ಕೊಡುಗೆ ಅಪಾರ’ ಎಂದು ಸ್ಮರಿಸಿದರು.

‘ಚನ್ನಮ್ಮನ ದೇಶಪ್ರೇಮ ಹಾಗೂ ಶೌರ್ಯ ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು. ಆಕೆಯನ್ನು ಉತ್ಸವದ ಸಂದರ್ಭದಲ್ಲಿ ಮಾತ್ರವೇ ನೆನೆಯದೆ ಸದಾ ಸ್ಮರಿಸಬೇಕು’ ಎಂದರು.

ಹೆಮ್ಮೆಯ ವಿಷಯ:‘ಕಿತ್ತೂರಿನಲ್ಲಿ ಅಭಿವೃದ್ಧಿ ಕೆಲಸ ಆರಂಭವಾಗಿದೆ. ಕಾಕತಿಯಲ್ಲೂ ಅತಿ ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಕಿತ್ತೂರು ಚನ್ನಮ್ಮನ ದೇಶಪ್ರೇಮದ ಬಗ್ಗೆ ಶಾಲೆಯ ಪಠ್ಯದಲ್ಲಿ ಕೇಳಿ ನಾವು ದೇಶಾಭಿಮಾನ ಬೆಳೆಸಿಕೊಂಡೆವು. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಆಕೆಯ ನಾಡಿನಲ್ಲಿ ಹುಟ್ಟಿದ್ದು ಹೆಮ್ಮೆಯ ವಿಷಯ’ ಎಂದರು.

ಮುನ್ನೆಚ್ಚರಿಕೆ ಅಗತ್ಯ:‘ಕೊರೊನಾ ಕಾರಣದಿಂದ ಕಳೆದ ವರ್ಷ ಕಿತ್ತೂರು ಚನ್ನಮ್ಮನ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಮಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಕೋವಿಡ್ ಪ್ರಕರಣಗಳೂ ಇಳಿಕೆಯಾಗಿವೆ. ಆದರೂ ಕೆಲವು ದಿನ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಶೇ 80ರಷ್ಟು ಮಂದಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಉಳಿದವರೂ ಲಸಿಕೆ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚನ್ನಮ್ಮನ ಹುಟ್ಟೂರು’ ಎಂಬ ಸ್ವಾಗತ ಕಮಾನನ್ನು ಕಾಕತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಬೇಕು’ ಎಂದು ಮುಖಂಡ ಸಿದ್ದು ಸುಣಗಾರ ಕೋರಿದರು.

ನೆನೆಯಬೇಕು:‘ಇಲ್ಲಿ ಉತ್ಸವಕ್ಕಾಗಿ 30 ವರ್ಷದಿಂದ ಗ್ರಾಮ ಪಂಚಾಯ್ತಿಯಲ್ಲಿ ₹ 1 ಲಕ್ಷ ಮಾತ್ರ ಮೀಸಲಿಡಲಾಗುತ್ತಿದೆ. ₹ 20 ಲಕ್ಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಕತಿಯ ಶಿವಪೂಜಾ ಮಠದ ರಾಚಯ್ಯ ಸ್ವಾಮೀಜಿ, ‘ಮಹಾತ್ಮರು, ವೀರಪುರುಷರು, ವೀರ ಮಾತೆಯರ ಜಯಂತಿ ಆಚರಣೆಯೊಂದಿಗೆ ಅವರ ತ್ಯಾಗ–ಬಲಿದಾನವನ್ನು ನೆನೆಯಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಚ್.ವಿ. ದರ್ಶನ್, ನಗರ ಪೋಲಿಸ್ ಆಯುಕ್ತ ಕೆ. ತ್ಯಾಗರಾಜನ್, ಕಾಕತಿಯ ಉದಯ ಸ್ವಾಮೀಜಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ.ಎಸ್.ಎಂ. ಗಂಗಾಧರಯ್ಯ, ಕಾಕತಿಯ ವೀರ ರಾಣಿ ಕಿತ್ತೂರು ಚನ್ನಮ್ಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಡಿ. ಪಾಟೀಲ, ಕಾಕತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುನೀಲ ಸುಣಗಾರ, ಬಿಜೆಪಿ ಮುಖಂಡ ಶಶಿಕಾಂತ ನಾಯಿಕ ಇದ್ದರು.

ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಸ್ವಾಗತಿಸಿದರು. ರಮೇಶ ವಿ. ಗೋಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT