ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲೂರಿನ ಚನ್ನಬಸವೇಶ್ವರ ರಥೋತ್ಸವ

ಮುಗಿಲು ಮುಟ್ಟಿದ ಭಕ್ತರ ಹರ, ಹರ ಮಹಾದೇವ ಘೋಷ
Published 25 ಫೆಬ್ರುವರಿ 2024, 15:46 IST
Last Updated 25 ಫೆಬ್ರುವರಿ 2024, 15:46 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಉಳವಿಗೆ ಹೊರಟಾಗ ಚನ್ನಬಸವೇಶ್ವರ ಶರಣರು ಶತಮಾನಗಳ ಹಿಂದೆ ತಂಗಿ ಹೋದ ಪವಿತ್ರ ನೆಲವಾದ ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ಶರಣ ಚನ್ನಬಸವೇಶ್ವರ ರಥೋತ್ಸವವು ಸಕಲ ವೈಭವದೊಂದಿಗೆ ಭಾನುವಾರ ಸಂಜೆ ನೆರವೇರಿತು.

ಚಿನ್ನ ಲೇಪಿತ ಮತ್ತು ಬೆಳ್ಳಿಯ ಚನ್ನಬಸವೇಶ್ವರರ ಮೂರ್ತಿ, ನಂದಿಮೂರ್ತಿ ಹಾಗೂ ವಚನ ಸಂಪುಟವನ್ನು ರಥದಲ್ಲಿಟ್ಟು ಎಳೆಯಲಾಯಿತು. ಈ ಬಾರಿ ವಿಶೇಷ ವಾಹನದಲ್ಲಿ ಚನ್ನಬಸವೇಶ್ವರ ಮೂರ್ತಿಯ ಮೆರವಣಿಗೆಯನ್ನೂ ಆಯೋಜಿಸಲಾಗಿತ್ತು. ಭಾಗವಹಿಸಿದ್ದ ಸಾವಿರಾರು ಭಕ್ತರು ಹರ– ಹರ ಮಹಾದೇವ, ಚನ್ನಬಸಣ್ಣನವರಿಗೆ ಜಯವಾಗಲಿ ಎಂಬ ಜಯಘೋಷದೊಂದಿಗೆ ರಥವನ್ನು ಮುನ್ನಡೆಸಿದರು.

ಚಿಕ್ಕಮಗಳೂರಿನ ವೀರಗಾಸೆ, ಗುಂಡೇನಟ್ಟಿಯ ಜಗ್ಗಲಿಗೆ ಮೇಳ, ನಂದಿಕೋಲು, ವೀರಭದ್ರ ಕುಣಿತ, ಕರಡಿ ಮಜಲು, ಭಜನಾ ಮಂಡಳಿ ತಂಡದವರ ಪದಗಳು, ಹಿಡಕಲ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಲೇಜಿಮ್ ಕುಣಿತ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದವು. ದಾರಿಯುದ್ದಕ್ಕೂ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ, ಕೈ ಮುಗಿದು ಭಕ್ತಿ, ಗೌರವ ಸಮರ್ಪಿಸಿದರು, ಜಾತ್ರಾ ಮಹೋತ್ಸವದ ಪ್ರಯುಕ್ತ ಚನ್ನಬಸವಣ್ಣನವರ ಪಲ್ಲಕ್ಕಿ ಉತ್ಸವವೂ ನಡೆಯಿತು.

ಪ್ರಸಕ್ತ ಸಾಲಿನಲ್ಲೂ ಶನಿವಾರ ಮತ್ತು ಭಾನುವಾರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗಿದವು. ನಾಡಿನ ಪ್ರಸಿದ್ಧ ಮಠಾಧೀಶರು ಶನಿವಾರ ಆಗಮಿಸಿ ವಿಶೇಷ ಪ್ರವಚನ, ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ, ಕ್ರಾಂತಿಯೋಗಿ ಬಸವಣ್ಣನವರ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ನಿಜಗುಣಾನಂದ ಸ್ವಾಮೀಜಿ ಅವರ 60ನೇ ವರ್ಧಂತಿ ಉತ್ಸವವನ್ನು ಸಾಂಕೇತಿಕವಾಗಿ ಭಕ್ತರು ಆಚರಿಸಿ, ಗೌರವ ವಂದನೆ ಸಲ್ಲಿಸಿದರು.

ನಿಜಗುಣಾನಂದ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಚನ್ನಬಸವ ಪಟ್ಟದ್ದೇವರು, ಬಸವ ಕಲ್ಯಾಣದ ಗೋಣಿ ರುದ್ರದೇವರು, ಮಾತೆ ಬಸವೇಶ್ವರಿ, ಗಂದಿಗವಾಡದ ಮೃತ್ಯುಂಜಯ ಸ್ವಾಮೀಜಿ ಹಿರೇಮಠ, ಶಾಸಕ ಬಾಬಾಸಾಹೇಬ ಪಾಟೀಲ, ಬೈಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ವೈಚಾರಿಕ ಜಾತ್ರೆ

ಬೈಲೂರಿನ ಚನ್ನಬಸವೇಶ್ವರ ಜಾತ್ರೆಯು ಈ ಭಾಗದಲ್ಲಿ ವೈಚಾರಿಕ ಜಾತ್ರೆ ಎಂದೇ ದಶಕದಿಂದ ಪ್ರಸಿದ್ಧಿ ಪಡೆದಿದೆ. ರಥಬೀದಿಯಲ್ಲಿ ನಿಂತ ಭಕ್ತರು ಕೈ ಮುಗಿದು ಹರಕೆ ತೀರಿಸಿಕೊಳ್ಳುತ್ತಾರೆ. ರಥಕ್ಕೆ ಉತ್ತತ್ತಿ ಬಾಳೇಹಣ್ಣು ಸೇರಿ ಯಾವುದೇ ತಿನ್ನುವ ಪದಾರ್ಥವನ್ನು ಎಸೆಯಲಾಗುವುದಿಲ್ಲ. ‘ತೇರಿಗೆ ತಿನ್ನುವ ಪದಾರ್ಥ ಎಸೆದು ಅದು ಕಾಲ ಕೆಳಗೆ ಬಿದ್ದು ವ್ಯರ್ಥವಾಗುವುದು ಬೇಡ ಎಂಬುದು ನಿಜಗುಣಾನಂದ ಸ್ವಾಮೀಜಿ ಅವರ ಮನದಿಂಗಿತ. ಅವರ ಸೂಚನೆಯಂತೆ ಇಲ್ಲಿ ಯಾವುದೇ ತಿನ್ನುವ ಪದಾರ್ಥ ಅಥವಾ ಹಣವನ್ನು ಎಸೆಯಲಾಗುವುದಿಲ್ಲ. ಈ ಪದ್ಧತಿ ದಶಕಗಳಿಂದ ನಡೆದುಕೊಂಡು ಬಂದಿದೆ’ ಎಂದು ಇಲ್ಲಿಯ ಭಕ್ತರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT