ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೊಳ್ಳಿ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ: ಸೈನಿಕ ಶಾಲೆ, ಶಿಲ್ಪವನ ಲೋಕಾರ್ಪಣೆ

Published 17 ಜನವರಿ 2024, 6:00 IST
Last Updated 17 ಜನವರಿ 2024, 6:00 IST
ಅಕ್ಷರ ಗಾತ್ರ

ಸಂಗೊಳ್ಳಿ (ಬೈಲಹೊಂಗಲ): ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಜೀವನ ಚರಿತ್ರೆ ಬಿಂಬಿಸುವ ಶಿಲ್ಪವನ ಮತ್ತು ಸೈನಿಕ ಶಾಲೆ ಸಿದ್ಧಗೊಂಡಿವೆ. ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವೆರಡನ್ನೂ ಉದ್ಘಾಟಿಸಲಿದ್ದಾರೆ. ನಾಡಿನ ಹಲವು ಕಲಾವಿದರು, ಜನಪ್ರತಿನಿಧಿಗಳು, ಮಠಾಧೀಶರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.

1997ರಲ್ಲಿ 50ನೇ ಸ್ವಾತಂತ್ರ್ಯೋತ್ಸವ ಸವಿನೆನಪಿಗಾಗಿ ನವದೆಹಲಿಯಲ್ಲಿ ನಡೆದ ಲೋಕಸಭಾ ವಿಶೇಷ ಅಧಿವೇಶನದಲ್ಲಿ ಅಂದಿನ ಸಂಸದ, ಮುಖ್ಯಸಚೇತಕರಾಗಿದ್ದ ಶಿವಾನಂದ ಕೌಜಲಗಿ ಅವರು ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣ ಮೂರ್ತಿ ಸ್ಥಾಪಿಸಿ ಅಭಿವೃದ್ಧಿಗೊಳಿಸಿ, ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದರು.

ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಶಾಸಕ ಮಹಾಂತೇಶ ಕೌಜಲಗಿ ಕೋರಿಕೆ ಮೇರೆಗೆ, ರಾಯಣ್ಣ ಪ್ರಾಧಿಕಾರ ರಚಿಸಿ ಸೈನಿಕ ಶಾಲೆಗೆ ₹250 ಕೋಟಿ ಮತ್ತು ಶಿಲ್ಪವನಕ್ಕೆ ₹12 ಕೋಟಿ ಮಂಜೂರು ಮಾಡಿದ್ದರು. ಈಗ ಮತ್ತೆ ಅವರೇ ಉದ್ಘಾಟನೆ ಮಾಡುತ್ತಿರುವುದು ವಿಶೇಷ.

ಶಿಲ್ಪವನದಲ್ಲಿ 10 ಎಕರೆ ಪ್ರದೇಶದಲ್ಲಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ಚನ್ನಮ್ಮನ ಜೀವನದ ಘಟನೆಗಳನ್ನು ಸಾರುವ 1,600ಕ್ಕೂ ಹೆಚ್ಚಿನ ಮೂರ್ತಿಗಳು ವಿನ್ಯಾಸಗೊಳಿಸಲಾಗಿದೆ. ಹೋರಾಟ, ಕಿತ್ತೂರು ಕೋಟೆ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಧಾರವಾಡ ಜೈಲುವಾಸ, ಕುಸ್ತಿ ಮೈದಾನ, ಸಂಪಗಾಂವಿ ಜೈಲಿನ ಮೇಲೆ ದಾಳಿ, ಡೋರಿ ಬೆಣಚಿ ಹಳ್ಳದಲ್ಲಿ ಮೋಸದಿಂದ ರಾಯಣ್ಣನ ಹಿಡಿದಿದ್ದು, ಆರು ಜನ ಸಹಚರರೊಂದಿಗೆ ಗಲ್ಲಿಗೇರಿದ ದೃಶ್ಯಗಳು ನೋಡುಗರ ಮೈಮನ ರೋಮಾಂಚನಗೊಳಿಸುವಂತಿವೆ.

100 ಎಕರೆಯಲ್ಲಿ ಸೈನಿಕ ಶಾಲೆ: 100 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ 6ರಿಂದ 12ನೇ ತರಗತಿಯರೆಗೆ ಇದೆ. ವಸತಿ ಸೌಲಭ್ಯ, ಭೋಜನಾಲಯ, ಗ್ರಂಥಾಲಯ, ಶಿಕ್ಷಕ ವಸತಿ ಗೃಹ, ಆಡಿಟೋರಿಯಂ, ಕೆಸಲಗಾರರ ಹೈಟೆಕ್ ವಸತಿ ಗೃಹ, ಮೈದಾನ, ಈಜುಕೊಳ, ಹಾರ್ಸ್ ರೈಡಿಂಗ್‌ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಸಂಬಂಧಿಸಿದ ಆಟದ ಮೈದಾನ ಸಿದ್ಧಪಡಿಸಲಾಗಿದೆ. ದೇಶದ ಮಾದರಿ ಶಾಲೆಗಳ ಸಾಲಿಗೆ ಇದೂ ಸೇರಿಕೊಂಡಿದೆ.

ಕ್ರಾಂತಿವೀರ ರಾಯಣ್ಣನ ಸ್ಮರಣೆಗಾಗಿ ಸಂಗೊಳ್ಳಿ ಗ್ರಾಮದಲ್ಲಿ ಬೃಹತ್ ಸೈನಿಕ ಶಾಲೆ ಶಿಲ್ಪವನ ಆರಂಭಿಸಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ
–ಮಹಾಂತೇಶ ಕೌಜಲಗಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT