ಶನಿವಾರ, ಜನವರಿ 18, 2020
26 °C

ಚಿಕ್ಕೋಡಿ: ಭರವಸೆಯ ಕ್ರೀಡಾ ಪ್ರತಿಭೆ ತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿಕ್ಕೋಡಿ: ಈಕೆಗೆ ಬಾಲ್ಯದಿಂದಲೂ ಆಟೋಟದಲ್ಲಿ ವಿಶೇಷ ಆಸಕ್ತಿ, ಜೊತೆಗೆ ಕಠಿಣ ಪರಿಶ್ರಮವನ್ನೂ ಹಾಕುತ್ತಿದ್ದಾರೆ. ಅಂತೆಯೇ ರಾಜ್ಯಮಟ್ಟದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಸ್ವರ್ಣ ಪದಕ ಗಳಿಸಿ ಭರವಸೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದ ತೃಪ್ತಿ ಅಪ್ಪಾಸಾಹೇಬ ಬಲವಾನ ಎಂಬ ವಿದ್ಯಾರ್ಥಿನಿಯೇ ಆ ಸಾಧಕಿ.

ದೈಹಿಕ ಶಿಕ್ಷಣ ಶಿಕ್ಷಕರಾದ ಅಪ್ಪಾಸಾಹೇಬ ಮತ್ತು ವಿದ್ಯಾ ದಂಪತಿಯ ಪುತ್ರಿ ತೃಪ್ತಿ ಮಾನಕಾಪುರದ ಜಿಎಚ್ಪಿಎಸ್ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಸಮೂಹ ಸಂಪನ್ಮೂಲ ಮಟ್ಟ, ವಲಯ ಮಟ್ಟ, ಜಿಲ್ಲಾ ಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ತೃಪ್ತಿ, ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿಯಲ್ಲಿ ನಡೆದ 14 ವರ್ಷದೊಳಗಿನವರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲಿ, 4.68 ಮೀಟರ್ ಜಿಗಿದು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ರಾಜ್ಯಮಟ್ಟದಲ್ಲಿ ನಡೆದ ಉದ್ದ ಜಿಗಿತ ಸ್ಪರ್ಧೆಯಲ್ಲಿ 4.64 ಮೀಟರ್ ಉದ್ದ ಜಿಗಿತದ ದಾಖಲೆಯನ್ನೂ ತೃಪ್ತಿ ಮೀರಿಸಿದ್ದಾರೆ. ಪಂಜಾಬ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ಒಡ್ಡಿ ಭೇಷ್ ಎನಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಗುರಿ ಹೊಂದಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ 200 ಮೀಟರ್ ಮತ್ತು 400 ಮೀಟರ್ ಓಟದ ಸ್ಪರ್ಧೆಗಳಲ್ಲೂ ಪ್ರಥಮ ಸ್ಥಾನ ಗಳಿಸಿದ್ದಾರೆ. ತಮಿಳುನಾಡಿನಲ್ಲಿ ಅಥ್ಲೆಟಿಕ್ಸ್‌ ರಘು, ಮಹಾರಾಷ್ಟ್ರದ ವಾರಣಾದಲ್ಲಿ ದೈಹಿಕ ಶಿಕ್ಷಣ ತರಬೇತುದಾರ ತಿರು ಮತ್ತು ಕುಂಬಾರ ಅವರಲ್ಲೂ ತರಬೇತಿ ಪಡೆದಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಇರಾದೆಯೊಂದಿಗೆ ತಂದೆ ಅಪ್ಪಾಸಾಹೇಬ್ ಬಲವಾನ್ ಮತ್ತು ಶಿಕ್ಷಕ ಎಸ್.ಎಸ್. ಬುಡಕೆ ಮಾರ್ಗದರ್ಶನದಲ್ಲಿ ನಿತ್ಯವೂ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

‘ಚಿಕ್ಕ ವಯಸ್ಸಿನಿಂದಲೂ ಆಟದ ಬಗ್ಗೆ ಆಸಕ್ತಿ ಇದೆ. ಅದರಲ್ಲಿ ಸಾಧನೆ ಮಾಡಿ ಹೆಸರು ಮಡಬೇಕೆಂಬ ಬಯಕೆ ಇದೆ. ಮನೆಯವರು ಮತ್ತು ಶಾಲೆಯವರಿಂದ ಉತ್ತಮ ಸಹಕಾರ ಸಿಗುತ್ತಿದೆ’ ಎಂದು ತೃಪ್ತಿ ಹೇಳುತ್ತಾರೆ.

‘ಪುತ್ರಿ ತೃಪ್ತಿ ಸಾಧನೆ ತೃಪ್ತಿ ತರಿಸಿದೆ. ಮುಂಬರುವ ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಅವಳನ್ನು ಕಾಣುವ ಕನಸಿದೆ. ಅದಕ್ಕಾಗಿ ಪೂರಕ ಸಿದ್ಧತೆಯನ್ನೂ ನಡೆಸುತ್ತಿದ್ದಾಳೆ’ ಎಂದು ಅಪ್ಪಾಸಾಹೇಬ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು