ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಶಿಕ್ಷಕರಿಂದಲೂ ಮಕ್ಕಳ ಮೇಲೆ ದೌರ್ಜನ್ಯ: ಕೆ‌.ನಾಗಣ್ಣಗೌಡ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ‌.ನಾಗಣ್ಣಗೌಡ ಕಳವಳ
Last Updated 18 ಜನವರಿ 2023, 12:45 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆಲ ಹಿರಿಯರು ಮತ್ತು ಶಿಕ್ಷಕರಿಂದಲೂ ಮಕ್ಕಳ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ. ಇಂತಹ ಘಟನೆಗಳು ಮರುಕಳಿಸದಂತೆ ಆಯೋಗ ಕ್ರಮ ಕೈಗೊಳ್ಳಲಿದೆ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ‌.ನಾಗಣ್ಣಗೌಡ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಬಾಲನ್ಯಾಯಾಲಯ ಕಾಯ್ದೆ, ಆರ್.ಟಿ.ಇ. ಕಾಯ್ದೆ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಅನುಷ್ಠಾನ ಕುರಿತು ಜಿಲ್ಲೆಯ ಎಲ್ಲ ಭಾಗೀದಾರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಲವು ಶಾಲೆಗಳಲ್ಲಿ ಶಿಕ್ಷಕರಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳ ವರದಿಯಾಗುತ್ತಿವೆ. ತಂದೆಯ ವಯಸ್ಸಿನ ವ್ಯಕ್ತಿಯಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಖೇದಕರ. ಇಂತಹ ಸನ್ನಿವೇಶದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.

ಲಿಖಿತ ಮಾಹಿತಿ ನೀಡಿ: ‘ಬಾಲ್ಯವಿವಾಹ ಹಾಗೂ ಅಪ್ರಾಪ್ತ ಗರ್ಭಿಣಿಯರು ಕಂಡುಬಂದಾಗ ವಯಸ್ಸಿನ ದೃಢೀಕರಿಸುವಾಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ದಾಖಲೆ ಪರಿಶೀಲಿಸಿ, ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

‘ಇಂತಹ ಪ್ರಕರಣಗಳು ವರದಿಯಾದ ಕೂಡಲೇ ಲಿಖಿತವಾಗಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು. ಬೆಳಗಾವಿ ಹಾಗೂ ಖಾನಾಪುರದ ಬಾಲಕರ ಅನುಪಾಲನಾ ಗೃಹ ಹಾಗೂ ಸವದತ್ತಿಯಲ್ಲಿರುವ ಬಾಲಕಿಯರ ಅನುಪಾಲನಾ ಗೃಹದಲ್ಲಿ ಸಾಕಷ್ಟು ಅವಕಾಶವಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಅರಿತುಕೊಳ್ಳಬೇಕು’ ಎಂದರು.

ಬಾಲ್ಯವಿವಾಹ ತಡೆ: ‘ಬಾಲ್ಯ ವಿವಾಹ ತಡೆಗೆ ರಚಿಸಲಾಗಿರುವ ಸಮಿತಿಯ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಪರಿಣಾಮಕಾರಿ ಕಾರ್ಯನಿರ್ವಹಿಸಬೇಕು. ಇದರಲ್ಲಿ ವಿಫಲವಾಗುವ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು’ ಎಂದರು.

‘ಮಕ್ಕಳ ಕಳ್ಳ ಸಾಗಣೆ, ಕಾಣೆಯಾದ ಪ್ರಕರಣಗಳು, ಪೋಕ್ಸೊ ಮತ್ತಿತರ ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು. ಅಪರಾಧಗಳ ನಿಯಂತ್ರಣಕ್ಕೆ ಸಮಯದಾಯದ ಸಹಭಾಗಿತ್ವ ಪಡೆಯಬೇಕು’ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ, ಎಸ್ಪಿ ಡಾ.ಸಂಜೀವ ಪಾಟೀಲ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರುಳಿ ಮನೋಹರ ರೆಡ್ಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಬಸವರಾಜ ನಾಲತವಾಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಗ್ರಾಮ ಮಟ್ಟದಲ್ಲಿ ಸಮಿತಿ

‘ಪೋಕ್ಸೊ, ಜೆಜೆ ಆ್ಯಕ್ಟ್‌ ಮತ್ತಿತರ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಗ್ರಾಮ ಮಟ್ಟದಲ್ಲಿ ಸಮಿತಿ ಮೂಲಕ ಮುಂದಾಗಬೇಕಿದೆ. ಒಂದೂವರೆ ತಿಂಗಳಿನಲ್ಲಿ 26 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಧ್ಯಯನ ಮಾಡಲಾಗುತ್ತಿದೆ’ ಎಂದು ಕೆ.ನಾಗಣ್ಣಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ನಗರದಲ್ಲಿ ವಾರ್ಡ್ ಮಟ್ಟದ ಸಮಿತಿ ರಚನೆ ಮಾಡಲಾಗುವುದು. ಬಾಲ್ಯವಿವಾಹ ತಡೆಗೂ ಆಯೋಗ ಕ್ರಮ ಕೈಗೊಳ್ಳಲಿದೆ. ಸ್ವಯಂಪ್ರೇರಿತ (ಸುಮೊಟೊ) ಪ್ರಕರಣಗಳನ್ನು ಈ ಸಮಿತಿಗಳ ಮೂಲಕ ದಾಖಲಿಸಿಕೊಳ್ಳಲಾಗುವುದು’ ಎಂದರು.

‘ಮಕ್ಕಳ ಹಕ್ಕುಗಳ ರಕ್ಷಣೆ ಜತೆಗೆ ಮಕ್ಕಳ ಜವಾಬ್ದಾರಿಗಳ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ಮುಂಚೆಯೂ ಕೆಲ ಸಮಿತಿಗಳು ಇದ್ದವು. ಅವುಗಳನ್ನು ಚುರುಕುಗೊಳಿಸಲಾಗುವುದು’ ಎಂದರು.

1098 ಅಥವಾ 112 ಸಹಾಯವಾಣಿ

‘ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಸೇರಿದಂತೆ ಜಿಲ್ಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾದಾಗ 1098 ಅಥವಾ 112 ಗೆ ತಕ್ಷಣ ತಿಳಿಸಬೇಕು’ ಎಂದು ಕೆ.ನಾಗಣ್ಣಗೌಡ ಹೇಳಿದರು.

‘ಬಾಲಕಿಯರ ವಸತಿಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಪುರುಷ ವಾರ್ಡನ್ ಇರಕೂಡದು. ಒಂದು ವೇಳೆ ಇದ್ದರೆ ಬದಲಾಯಿಸಬೇಕು. ವಸತಿನಿಲಯದ ಮಕ್ಕಳಿಗೆ ಗುಣಮಟ್ಟದ ಆಹಾರ ಒದಗಿಸುವುದರ ಜತೆಗೆ ಓದಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಒದಗಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT