ಬುಧವಾರ, ನವೆಂಬರ್ 25, 2020
24 °C
ಪ್ರಗತಿ ಪರಿಶೀಲಿಸಿದ ಉಸ್ತುವಾರಿ ಕಾರ್ಯದರ್ಶಿ ಅತೀಕ್

ಪಾಠ: ಟಿವಿ ವ್ಯವಸ್ಥೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ದೂರದರ್ಶನ ಚಂದನ ವಾಹಿನಿ ಮೂಲಕ ಶಾಲಾ ಮಕ್ಕಳಿಗೆ ಪಾಠ ಬೋಧನೆ‌ ನಡೆಯುತ್ತಿದೆ. ಯಾವ ಮನೆಯಲ್ಲಿ ಟಿವಿ ಇಲ್ಲವೋ ಅಂತಹ‌ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಟಿವಿ ವ್ಯವವ್ಥೆ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿಗಳು ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅನುದಾನ ಲಭ್ಯವಿರುವಲ್ಲಿ ದೊಡ್ಡ ಪರದೆಯ ಟಿವಿಗಳನ್ನೇ ಖರೀದಿಸಬಹುದು’ ಎಂದು ತಿಳಿಸಿದರು.

ಸೌಲಭ್ಯ ಕಲ್ಪಿಸಿ: ‘ಪ್ರತಿ ಶಾಲೆಯಲ್ಲೂ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಒದಗಿಸಬೇಕು. ಪ್ರತಿ ಅಂಗನವಾಡಿ ಕೇಂದ್ರಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇದಕ್ಕಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು. ಪಂಚಾಯಿತಿಯಿಂದ ಅಗತ್ಯ ನೆರವನ್ನು ಪಿಡಿಒಗಳು ನೀಡಬೇಕು’ ಎಂದರು.

‘ಜಲಜೀವನ ಮಿಷನ್ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಬೇಕು. ಶುದ್ಧ ಕುಡಿಯುವ ನೀರು ಘಟಕಗಳು ಚಾಲ್ತಿಯಲ್ಲಿರುವಂತೆ ಕ್ರಮ ಕೈಗೊಳ್ಳಬೇಕು. ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ದೇವಸ್ಥಾನ, ಬಸ್ ನಿಲ್ದಾಣ ಸಮೀಪದ ಸಮುದಾಯ ಶೌಚಾಲಯ ನಿರ್ಮಿಸಬೇಕು’ ಎಂದು ಸೂಚಿಸಿದರು.

ಇಂಗು ಗುಂಡಿಗಳನ್ನು ನಿರ್ಮಿಸಿ: ‘ನೀರು ಇಂಗಿಸಲು ಅಥವಾ ಜಲ ಮರುಪೂರಣಕ್ಕೆ ಅನುಕೂಲವಾದ ಜಾಗಗಳನ್ನು ಗುರುತಿಸಿ‌ ಪವಿತ್ರವನ ನಿರ್ಮಿಸಬೇಕು. ಕುಡಿಯುವ ನೀರಿನ ಕೊಳವೆಬಾವಿಗಳ ಬಳಿ ಇಂಗು ಗುಂಡಿಗಳನ್ನು ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

‘ನರೇಗಾ ಯೋಜನೆಯಲ್ಲಿ ನಿಪ್ಪಾಣಿ, ಬೆಳಗಾವಿ, ಕಾಗವಾಡ ತಾಲ್ಲೂಕಿನಲ್ಲಿ ವೈಯಕ್ತಿಕ ಸೌಲಭ್ಯ ಒದಗಿಸಿ ಪ್ರಗತಿ‌ ಸಾಧಿಸಬೇಕು. ಕೂಲಿ ಪಾವತಿ ಶೇ 100ರಷ್ಟು ಇರುವಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಬೀಜ ವಿತರಣೆ: ಉದ್ಯೋಗಿನಿ, ದೇವದಾಸಿ‌ ಪುನರ್ವಸತಿ ‌ಯೋಜನೆಗಳ ಫಲಾನುಭವಿಗಳ ಆಯ್ಕೆ ವಿಳಂಬದ ಬಗ್ಗ ಅತೀಕ್ ಅಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 20ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಯಾಗಿದ್ದು, 15ಸಾವಿರ ಕ್ವಿಂಟಲ್ ವಿತರಿಸಲಾಗಿದೆ. 27ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದ್ದು, ಕೊರತೆ ಇಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

‘ಶಾಲೆಗಳ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆನ್‌ಲೈನ್‌ ಹಾಗೂ ಚಂದನ ವಾಹಿನಿ ಮೂಲಕ ಪಾಠ ಬೋಧಿಸಲಾಗುತ್ತಿದೆ. ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ’ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿಗಳಾದ ಯುಕೇಶ್ ಕುಮಾರ್ (ಚಿಕ್ಕೋಡಿ), ಶಿವಾನಂದ ಭಜಂತ್ರಿ (ಬೈಲಹೊಂಗಲ) ಮತ್ತು ಅಶೋಕ ತೇಲಿ (ಬೆಳಗಾವಿ) ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು