ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಆ.5) ಇಡೀ ದಿನ ಜಿಲ್ಲೆಯ ಪ್ರವಾಹ ಪೀಡಿತ ಹಾಗೂ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಅವರೊಂದಿಗೆ ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ದಂಡೇ ಬರಲಿದೆ.
ಬೆಳಿಗ್ಗೆ 10ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಸಿದ್ದರಾಮಯ್ಯ ಬೆಳಿಗ್ಗೆ 11.10ಕ್ಕೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣ ತಲುಪುವರು. ಇಲ್ಲಿಂದ ರಸ್ತೆಯ ಮೂಲಕ ಗೋಕಾಕ ನಗರಕ್ಕೆ ಭೇಟಿ ನೀಡಿ, ಘಟಪ್ರಭಾ ನದಿ ಪ್ರವಾಹ ಬಾಧಿತ ಸ್ಥಳ ಪರಿಶೀಲನೆ ಮಾಡುವರು.
ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಪ್ರವಾಹ ಪೀಡಿತ ಗೋಕಾಕ ತಾಲ್ಲೂಕಿನ ಪ್ರದೇಶಗಳಿಗೆ ಭೇಟಿ ನೀಡುವರು. ನಗರ ಹೊರವಲಯದ ಲೋಳಸೂರ ಸೇತುವೆ, ಚಿಕ್ಕೋಳಿ ಸೇತುವೆ, ಶಿಂಗಳಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಜನರ ಅಳಲು ಆಲಿಸುವರು.
ಮಧ್ಯಾಹ್ನ 3.15ಕ್ಕೆ ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮಕ್ಕೆ, 3.35ಕ್ಕೆ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮಕ್ಕೆ ಭೇಟಿ ನೀಡುವರು. ಅಲ್ಲಲ್ಲಿ ಮುಳುಗಡೆಯಾದ ಸೇತುವೆ, ಹೊಲ– ಗದ್ದೆಗಳನ್ನು ಪರಿಶೀಲನೆ ಮಾಡಿವರು. ಸಂಜೆ 5ಕ್ಕೆ ಬೆಳಗಾವಿಯ ನಿರೀಕ್ಷಣಾ ಮಂದಿರಕ್ಕೆ ಮರಳುವರು.
ಸಂಜೆ 6.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.