ಶನಿವಾರ, ಏಪ್ರಿಲ್ 4, 2020
19 °C
ನಿರ್ದೇಶಕ ಎಚ್‌.ಕೆ. ಪಾಟೀಲ ಮಾಹಿತಿ

ಮಹಾಮಂಡಳದ ಕಟ್ಟಡ ಉದ್ಘಾಟನೆ 15ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ಆಟೊನಗರದಲ್ಲಿ ₹ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯ ಸಹಕಾರ ‍ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಾರ್ಚ್‌ 15ರಂದು ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದೆ’ ಎಂದು ಮಹಾಮಂಡಳದ ನಿರ್ದೇಶಕ, ಶಾಸಕ ಎಚ್‌.ಕೆ. ಪಾಟೀಲ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ವಿವರ ನೀಡಿದರು.

‘ರಾಜ್ಯಪಾಲ ವಜೂಭಾಯಿ ಆರ್‌. ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ದಿ.ಕೆ.ಎಚ್. ಪಾಟೀಲ ಸಭಾಭವನವನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಉದ್ಘಾಟಿಸುವರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸುವರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪತ್ರಿಕೆ ಬಿಡುಗಡೆ ಮಾಡುವರು. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ಸಹಕಾರ ಧ್ವಜಾರೋಹಣ ನೆರವೇರಿಸುವರು’ ಎಂದು ತಿಳಿಸಿದರು.

‘ನ್ಯಾಫ್‌ಕಬ್‌ (ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಾಗೂ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟ) ಅಧ್ಯಕ್ಷ ಜ್ಯೋತೀಂದ್ರ ಮೆಹ್ತಾ ‘ಅಂಬ್ರೆಲಾ ಆರ್ಗನೈಜೇಷನ್‌’ ‍ಪುಸ್ತಕ  ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಶತಮಾನ ಪೂರೈಸಿದ ಪಟ್ಟಣ ಬ್ಯಾಂಕ್‌ಗಳ ಫಲಕವನ್ನು ಅನಾವರಣಗೊಳಿಸುವರು. ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಎಸ್.ಆರ್. ಪಾಟೀಲ ವಿಶೇಷ ವಾರಪತ್ರಿಕೆ ಬಿಡುಗಡೆ ಮಾಡುವರು. ಶಾಸಕ ಆರ್‌.ವಿ. ದೇಶಪಾಂಡೆ ಹಾಗೂ ನ್ಯಾಫ್‌ಕಬ್‌ ನಿರ್ದೇಶಕ ಎ.ಎಂ. ಹಿಂಡಸಗೇರಿ ಸಂಸ್ಥಾಪಕರ ಭಾವಚಿತ್ರ ಅನಾವರಣಗೊಳಿಸುವರು. ಇಲ್ಲಿನ ಸಚಿವರು, ಶಾಸಕರು ಮುಖ್ಯಅತಿಥಿಗಳಾಗಿ ಭಾಗವಹಿಸುವರು’ ಎಂದು ವಿವರಿಸಿದರು.

‘ದೇಶದಲ್ಲಿ 1,550 ಪಟ್ಟಣ ಸಹಕಾರ ಬ್ಯಾಂಕ್‌ಗಳಿದ್ದು, ಅವು ₹ 4.84 ಲಕ್ಷ ಕೋಟಿ ಠೇವಣಿ ಹೊಂದಿ ₹ 3.50 ಲಕ್ಷ ಕೋಟಿ ಸಾಲ ನೀಡಿವೆ. ₹ 6.10 ಲಕ್ಷ ಕೋಟಿ ದುಡಿಯುವ ಬಂಡವಾಳ ಹೊಂದಿವೆ. ರಾಜ್ಯದಲ್ಲಿ 264 ಪಟ್ಟಣ ಸಹಕಾರ ಬ್ಯಾಂಕ್‌ಗಳಿದ್ದು, 1,030 ಶಾಖೆಗಳನ್ನು ಹೊಂದಿವೆ. ₹ 41,827 ಕೋಟಿ ಠೇವಣಿ ಹೊಂದಿವೆ. ₹ 26,325 ಕೋಟಿ ಸಾಲ ನೀಡಿವೆ’ ಎಂದು ತಿಳಿಸಿದರು.

‘ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ದಾವಾ ನ್ಯಾಯಾಲಯಗಳ ಕಚೇರಿ ಸ್ಥಾಪಿಸಿ ಪ್ರಕರಣಗಳನ್ನು ಶೀಘ್ರವಾಗಿ ಇತ್ತರ್ಥಗೊಳಿಸುತ್ತಿವೆ. ಈ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿನ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣ ಕಡಿಮೆಯಾಗುತ್ತಿದೆ. ಬ್ಯಾಂಕ್‌ಗಳು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗಿದೆ. ಇದುವರೆಗೆ 1.32 ಲಕ್ಷ ಪ್ರಕರಣಗಳು ದಾಖಲಾಗಿದ್ದು, 1,30,605 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಮೂರು ತಿಂಗಳ ಅರ್ಬನ್‌ ಕೋಆಪರೇಟಿವ್‌ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಕೂಡ ನಡೆಸಲಾಗುತ್ತಿದೆ. ಇ–ಸ್ಟ್ಯಾಂಪಿಂಗ್‌ ವ್ಯವಸ್ಥೆಯನ್ನೂ ಜಾರಿಗೊಳಿಸಿದ್ದೇವೆ. ಈವರೆಗೆ 218 ಇ–ಸ್ಟ್ಯಾಂಪಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ’ ಎಂದರು.

ಅಧ್ಯಕ್ಷ ಡಿ.ಟಿ. ಪಾಟೀಲ, ಉಪಾಧ್ಯಕ್ಷ ಬಿ.ಎಸ್. ಪರಮಶಿವಯ್ಯ ಹಾಗೂ ಸಿಇಒ ಪುಂಡಲೀಕ ಎನ್. ಕೇರೂರೆ ಹಾಗೂ ನಿರ್ದೇಶಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು