ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಚಳಿ, ಶೀತಗಾಳಿಯದ್ದೇ ‘ಹವಾ’

ಥರಗುಟ್ಟುವ ಜೀವ; ಜನಜೀವನದ ಮೇಲೆ ಪರಿಣಾಮ
Last Updated 3 ಜನವರಿ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ನಗರ ಹಾಗೂ ಜಿಲ್ಲೆಯಾದ್ಯಂತ ಈಗ ಚಳಿಯದ್ದೇ ‘ಹವಾ’.

ಸುಯ್ಯನೆ ಬೀಸುತ್ತಿರುವ ಶೀತಗಾಳಿ ಹಾಗೂ ಚಳಿಯಿಂದಾಗಿ ಜೀವಕ್ಕೆ ಥರಗುಟ್ಟುವ ಅನುಭವ ಆಗುತ್ತಿದೆ. ಈ ವಾತಾವರಣ ಜನಜೀವನದ ಮೇಲೂ ಪರಿಣಾಮ ಬೀರಿದೆ.

ದಿನವಿಡೀ ಬಹುತೇಕ ಮಂಜು ಆವರಿಸಿದ ವಾತಾವರಣ ಇರುತ್ತಿದೆ. ಅದರಲ್ಲೂ ಮುಂಜಾನೆ ಹಾಗೂ ಸಂಜೆ ನಂತರ ತಾಪಮಾನದಲ್ಲಿ ಇಳಿಕೆ ಉಂಟಾಗುತ್ತಿರುವುದರಿಂದ ಹೆಚ್ಚಿನ ಚಳಿಯ ಮತ್ತು ತಣ್ಣೀರು ಮತ್ತಷ್ಟು ತಣ್ಣಗಾಗಿ ಕೈಕೊರೆಯುವಂಥ ಅನುಭವವಾಗುತ್ತಿದೆ. ಹಲವು ದಿನಗಳಿಂದಲೂ ಇದೇ ರೀತಿಯ ಸ್ಥಿತಿ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಇಳಿಕೆಯಾಗುವ ಹಾಗೂ ಚಳಿಯ ವಾತಾವರಣ ಹೆಚ್ಚಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಲ್ಲೂ ಹಳ್ಳಿಗಳಲ್ಲಿ ಇನ್ನೂ ಹೆಚ್ಚಿನ ಚಳಿ, ಶೀತಗಾಳಿ ಇದೆ.

ಮೈಕೊರೆಯುವ ಚಳಿಯಿಂದ ಜನಜೀವನದಲ್ಲಿ ಕೊಂಚ ವ್ಯತ್ಯಾಸಗಳಾಗಿವೆ. ಬೀರುಗಳಲ್ಲಿದ್ದ ಸ್ವೆಟರ್‌, ಮಫ್ಲರ್, ಜರ್ಕಿನ್, ಉಣ್ಣೆಯ ಟೋಪಿಗಳು ಹೊರಬಂದಿವೆ. ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆಯೂ ಕಂಡುಬಂದಿದೆ.

ಸಂಖ್ಯೆ ಇಳಿಮುಖ:ಬೆಳಿಗ್ಗೆ ಹೆಚ್ಚಿನ ಮಂಜು ಆವರಿಸುತ್ತಿದೆ; ಇಬ್ಬನಿ ಬೀಳುತ್ತಿದೆ. ಇದರಿಂದಾಗಿ, ಬೆಳಗಿನ ವೇಳೆ ಉದ್ಯಾನಗಳು ಹಾಗೂ ಮೈದಾನಗಳಿಗೆ ವಾಯುವಿಹಾರಕ್ಕೆ ಅಥವಾ ಆಡಲು ಬರುವವರ ಸಂಖ್ಯೆ ಕ್ಷೀಣಿಸಿದೆ ಅಥವಾ ಸೂರ್ಯನ ಕಿರಣಗಳು ಭೂರಮೆಯನ್ನು ಬೆಳಗಿದ ನಂತರ ಈ ಚಟುವಟಿಕೆಗಳಿಗೆ ಜನರು ಮುಂದಾಗುತ್ತಿರುವುದು ಸಾಮಾನ್ಯವಾಗಿದೆ. ಲಾರಿ, ಆಟೊರಿಕ್ಷಾ ಚಾಲಕರು, ಹಾಲು ಹಾಕುವವರು, ಪತ್ರಿಕೆ ಹಂಚುವವರು, ಪೌರಕಾರ್ಮಿಕರು ಮೈಕೊರೆಯುವ ಚಳಿಯ ನಡುವೆಯೂ ತಮ್ಮ ಕೆಲಸದಲ್ಲಿ ನಿರತರಾಗುತ್ತಿದ್ದಾರೆ. ಕೆಲವರು ಅಲ್ಲಲ್ಲಿ ಕಾಗದ, ಸೌದೆ ಅಥವಾ ಕಸಕಡ್ಡಿಗಳನ್ನು ಒಟ್ಟುಗೂಡಿಸಿ ಬೆಂಕಿ ಹಚ್ಚಿ ಬಿಸಿ ಕಾಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬೆಳಿಗ್ಗೆಯೇ ಶಾಲಾ–ಕಾಲೇಜುಗಳಿಗೆ ಹೋಗುವವರು ಸ್ವೆಟರ್‌, ಉಣ್ಣೆಯ ಟೋಪಿಗಳ ಮೊರೆ ಹೋಗುತ್ತಿದ್ದಾರೆ.

ಗುರುವಾರ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಹೋದ ವರ್ಷ ಇದೇ ಸಮಯದಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್‌ ಇತ್ತು. ಹೋದ ವರ್ಷಕ್ಕೆ ಹೋಲಿಸಿದರೆ ತಾಪಮಾನದಲ್ಲಿ ಬಹಳ ಇಳಿಕೆ ಕಂಡುಬಂದಿದೆ.

‘ಸಂಜೆ, ಬೆಳಿಗ್ಗೆ ಮಾತ್ರವಲ್ಲ ಮಧ್ಯಾಹ್ನದ ವೇಳೆಯೂ ಚಳಿಯ ಅನುಭವವಾಗುತ್ತಿದೆ. ಉದ್ಯಾನಗಳಲ್ಲಿ ವಾಯುವಿಹಾರಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮನೆಯಿಂದ ಹೊರಬೀಳಲು ಹಲವರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹನುಮಾನ್ ನಗರದ ನಿವಾಸಿ ಅಶೋಕ ಚಂದರಗಿ ಪ್ರತಿಕ್ರಿಯಿಸಿದರು.

ಇನ್ನೂ ಕಡಿಮೆಯಾಗುವ ಸಾಧ್ಯತೆ:‘ಈಚಿನ ಕೆಲವು ವರ್ಷಗಳಲ್ಲಿ ನಗರದಲ್ಲಿ ಚಳಿಯ ಪ್ರಮಾಣ ಜಾಸ್ತಿ ಇಲ್ಲ. ಸರಿಯಾಗಿ ಮಳೆಯಾಗದೇ ಇದ್ದಿದ್ದರಿಂದ ಹಿಂದಿನ ವರ್ಷಗಳಲ್ಲಿ ಚಳಿಯ ಅನುಭವ ಆಗಿರಲಿಲ್ಲ. ಆದರೆ, ಈ ವರ್ಷ ಮುಂಗಾರು ಹಂಗಾಮಿನ ಆರಂಭದಲ್ಲಿ ಉತ್ತಮ ವರ್ಷಧಾರೆಯಾಗಿದೆ. ಹೀಗಾಗಿ, ಚಳಿ ಹೆಚ್ಚು ಎನ್ನುವ ಅನುಭವವಾಗುತ್ತಿದೆ. ಇಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದ ಉದಾಹರಣೆಯೂ ಇದೆ. ಈ ಬಾರಿ ಆ ಸಾಧ್ಯತೆ ಇದೆ’ ಎನ್ನುತ್ತಾರೆ ಇಲ್ಲಿನ ಹಿರಿಯರು.

ಈ ವಾತಾವರಣ ಕೆಲವು ಬೆಳೆಗಳಿಗೆ ಒಳಿತನ್ನು ತಂದರೆ, ತೋಟಗಾರಿಕೆ ಬೆಳೆಗಳಿಗೆ ಪ್ರತಿಕೂಲವಾಗುವ ಆತಂಕವನ್ನು ನಿರ್ಮಾಣ ಮಾಡಿದೆ. ಜಿಲ್ಲೆಯಲ್ಲಿ 4,728 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿರುವ ಮಾವು ಹೂವು ಕಚ್ಚುವಿಕೆಯಲ್ಲಿ ತೊಂದರೆಯಾಗಿದೆ. ಇದು ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಜಾಗ್ರತೆ ವೈದ್ಯರ ಸಲಹೆ
‌ಚಳಿಯನ್ನು ಆರೋಗ್ಯವಂತ ವಯಸ್ಕರು ಸಹಿಸಿಕೊಳ್ಳಬಹುದು. ಆದರೆ ಮಕ್ಕಳು ಹಾಗೂ ವೃದ್ಧರು ತಡೆಯಲು ಕಷ್ಟವಾಗುತ್ತದೆ. ಹೀಗಾಗಿ, ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಗರ್ಭಿಣಿಯರು ಹಾಗೂ ಬಾಣಂತಿಯರು ಬೆಚ್ಚಗಿರಬೇಕು. ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಒಳ್ಳೆಯದು ಎಂದು ವೈದ್ಯ ಡಾ.ಶಿವಕುಮಾರ ಪಾಟೀಲ ಸಲಹೆ ನೀಡಿದರು.

‘ಈ ಸಂದರ್ಭದಲ್ಲಿ ಬಿಸಿ ಪದಾರ್ಥಗಳನ್ನು, ಪಾನೀಯಗಳನ್ನು ಸೇವಿಸುವುದು ಉತ್ತಮ. ಬಿಸಿ ನೀರು ಕುಡಿಯುವುದು ಒಳಿತು. ಚರ್ಮ ರಕ್ಷಣೆಗೂ ಗಮನ ಕೊಡಬೇಕು’ ಎನ್ನುತ್ತಾರೆ ಅವರು.

*
ಮಂಜು ಸುರಿಯುವುದು ಹಾಗೂ ಚಳಿಯ ವಾತಾವರಣವಿರುವುದರಿಂದ ಕಡಲೆ ಹಾಗೂ ಜೋಳಕ್ಕೆ ಅನುಕೂಲವಾಗಿದೆ. ತೊಗರಿ ಕೊಯ್ಲು ಮುಗಿದಿರುವುದರಿಂದ ಯಾವುದೇ ತೊಂದರೆ ಇಲ್ಲ.
ಜಿಲಾನಿ ಮೊಕಾಶಿ, ಉಪನಿರ್ದೇಶಕ, ಕೃಷಿ ಇಲಾಖೆ

*
ಚಳಿ ಮತ್ತು ಮಂಜಿನಿಂದ ತೋಟಗಾರಿಕೆ ಬೆಳೆಗಳಿಗೆ ಹಾನಿಯೇ ಜಾಸ್ತಿ. ಮಾವಿನ ಹೂವುಗಳು ಉದುರಲು ಶುರುವಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ, ಪರಾಗಸ್ಪರ್ಶ ಕ್ರಿಯೆ ಕಡಿಮೆಯಾಗಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
-ಕಿರಣಕುಮಾರ ಉಪಾಳೆ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT