ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಡಿ.ಸಿ ಮುಂದೆ ಸಮಸ್ಯೆಗಳ ಸುರಿಮಳೆ

ತಾಲ್ಲೂಕು ಮಟ್ಟದ ಜನಸ್ಪಂದನ: ಹಲವು ಸಮಸ್ಯೆಗಳ ಅನಾವರಣ
Published 26 ಜೂನ್ 2024, 16:14 IST
Last Updated 26 ಜೂನ್ 2024, 16:14 IST
ಅಕ್ಷರ ಗಾತ್ರ

ಚಿಕ್ಕೋಡಿ: ತ್ವಾಟಕ್ಕ ಹೋಗಾಕ ದಾರಿ ಇಲ್ಲ, ಯಾವಾಗ ಮಾಡಸ್ತೇರಿ? ಚಿಕ್ಕೋಡಿ ಪಟ್ಟಣದಲ್ಲಿ ಸಂಚಾರ ಸಿಗ್ನಲ್‌ಗಳೇ ಇಲ್ಲ, ಇ– ಸ್ವತ್ತು ಉತಾರಿಗಾಗಿ ಅಲೆದಾಡಿ ಸಾಕಾಗೇತಿ ಇಂದು ಬಾ ನಾಳೆ ಬಾ.. ಅಂತ ಪಿಡಿಒ ಸಬೂಬು ಹೇಳಾಕತ್ತಾರ, ಇಂದಿರಾ ಕ್ಯಾಂಟಿನ್ ಮಾಡತೀರೋ ಇಲ್ಲೋ..?

ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾಭವನದಲ್ಲಿ ಬುಧವಾರ ಕರೆಯಲಾಗಿದ್ದ ಚಿಕ್ಕೋಡಿ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಜನರು ಸುರಿಸಿದ ಪ್ರಶ್ನೆಗಳ ಮಳೆ ಇದು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರಿಗೆ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು, ಸಂಘ ಸಂಸ್ಥೆಗಳು, ಹೋರಾಟಗಾರರು 25ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು.

ನವಲಿಹಾಳ ಗ್ರಾಮದಲ್ಲಿ ಅಂಗವಿಕಲರಿಗೆ ಮನೆ ನಿರ್ಮಾಣ ಮಾಡಿ ಕೊಡಿ ಎಂದು ಗ್ರಾಮ ಪಂಚಾಯಿತಿ ಕಚೇರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎನ್.ಎಸ್. ಪಾಟೀಲ ಮನವಿ ಮಾಡಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಜಲಜೀವನ ಮಿಷನ್‌ನಲ್ಲಿ ಚಿಕ್ಕೋಡಿ ತಾಲ್ಲೂಕು ನೈರ್ಮಲ್ಯ ವಿಭಾಗದಿಂದ ಕೇರೂರ, ಅಂಕಲಿ, ಗಿರಗಾಂವ ಮುಂತಾದ ಗ್ರಾಮಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಮಾಡಿದ್ದಾರೆ. ಇದರ ತನಿಖೆ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಸಂಜು ಬಡಿಗೇರ ಮನವಿ ಮಾಡಿದರು.

ಪಟ್ಟಣದಲ್ಲಿ ಒಂದೂ ಇಂದಿರಾ ಕ್ಯಾಂಟೀನ್‌ ಇಲ್ಲ. ಶೀಘ್ರ ಆರಂಭಿಸಿ ಎಂದು ಅಲ್ಲಮಪ್ರಭು ಅನ್ನದಾನ ಸಮಿತಿಯ ಚಂದ್ರಕಾಂತ ಹುಕ್ಕೇರಿ ಅರ್ಜಿ ಸಲ್ಲಿಸಿದರು. ಪರಿಶಿಷ್ಟ ಸಮುದಾಯದ ವಕೀಲರಿಗೆ ಕಂಪ್ಯೂಟರ್ ಖರೀದಿ, ಕಚೇರಿ ನಿರ್ಮಾಣ ಮಾಡಲು ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ತಲಾ ₹ 50 ಸಾವಿರ ನೀಡುವ ಅವಕಾಶ ಇದ್ದರೂ 2021ರಿಂದ ಅನುದಾನ ನೀಡಿಲ್ಲ ಎಂದು ವಕೀಲ ಮೋಹನ ಮೋಟನ್ನವರ ಮನವಿ ನೀಡಿದರು.

ವಿದ್ಯುತ್, ಜಮೀನಿನ ಸರ್ವೆ, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಸಲ್ಲಿಸಿದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಶೀಲ್ದಾರ ಚಿದಂಬರ ಕುಲಕರ್ಣಿ, ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ ಚೌಗಲಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೊಳ್ಳಿ, ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಲಮಿತಿಯಲ್ಲೇ ಕೆಲಸ ಮಾಡಿ: ಡಿ.ಸಿ ಅರ್ಜಿ ಸ್ವೀಕರಿಸಿ ಮಾತನಾಡಿದ ನಿತೇಶ್ ‘ಅಹವಾಲುಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಬೇಕು. ಜನರು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಇದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಡಿ ದಾಖಲಾಗುವ ಸಾರ್ವಜನಿಕ ಅಹವಾಲುಗಳಿಗೆ ಸಂಬಂಧಿಸಿ ಕಾಲಮಿತಿ ಒಳಗಾಗಿಯೇ ಇತ್ಯರ್ಥ ಪಡಿಸಬೇಕು’ ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT