ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಕೆಎಲ್‌ಇ ವೈದ್ಯಕೀಯ ಕಾಲೇಜು ಪ್ರವೇಶ ಆರಂಭ: ಪ್ರಭಾಕರ ಕೋರೆ

Last Updated 14 ನವೆಂಬರ್ 2021, 5:43 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯಿಂದ ಹುಬ್ಬಳ್ಳಿಯಲ್ಲಿ ನೂತನ ವೈದ್ಯಕೀಯ ಮಹಾವಿದ್ಯಾಲಯ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.

ಇಲ್ಲಿನ ನೆಹರೂ ನಗರದ ಜೆಎನ್‌ಎಂಸಿ ಆವರಣದಲ್ಲಿರುವ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆಎಲ್‌ಇ ಸಂಸ್ಥೆಯ 106ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೆಜಿಎಂಎಂಎಂಸಿ (ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರು ಸಾವಿರ ಮಠ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ) ಎಂದು ಹೆಸರಿಟ್ಟಿರುವ ಈ ಕಾಲೇಜಿನಲ್ಲಿ ಒಟ್ಟು 150 ಸೀಟುಗಳಿವೆ. ಈ ಪೈಕಿ ಶೇ 30ರಷ್ಟನ್ನು ಕನ್ನಡಿಗರಿಗೆ ಮೀಸಲಿಟ್ಟಿದ್ದೇವೆ. ಗುಣಾತ್ಮಕ ಶಿಕ್ಷಣ ನೀಡಲಾಗುವುದು’ ಎಂದು ಹೇಳಿದರು.

‘ಕೋವಿಡ್ ಪರಿಸ್ಥಿತಿಯ ನಂತರ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಲು ದೇಶದಾದ್ಯಂತ ಹಲವು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಆದರೆ, ನಮ್ಮ ಸಂಸ್ಥೆಯ ಕಾಲೇಜಿಗೆ ಮಾತ್ರ ಮಾನ್ಯತೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಹುಬ್ಬಳ್ಳಿ ಸಮೀಪದ ಕೊಟ್ಟಗುಂದಹುಣಸಿ ಬಳಿಯ ಸಂಸ್ಥೆಯ ಕಟ್ಟಡದಲ್ಲಿ ಕಾಲೇಜು ತಾತ್ಕಾಲಿಕವಾಗಿ ಆರಂಭಗೊಳ್ಳಲಿದೆ. ಗಬ್ಬೂರ ಕ್ರಾಸ್ ಸಮೀಪದಲ್ಲಿ ನಿರ್ಮಾಣದ ಹಂತದಲ್ಲಿರುವ ಕಟ್ಟಡಡ ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಮಹಾರಾಷ್ಟ್ರದ ಪುಣೆಯಲ್ಲಿ ಸಂಸ್ಥೆಯ ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದು, 2 ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಕಾನೂನು ಮತ್ತು ಮ್ಯಾನೇಜ್ಮೆಂಟ್‌ ಕಾಲೇಜು ಆರಂಭಿಸಲಾಗುವುದು. ಮಹಾರಾಷ್ಟ್ರ ಸರ್ಕಾರವು ಅತ್ಯಂತ ಪ್ರಮುಖ ಸ್ಥಳವಾದ ಪಾಮ್‌ಬೀಚ್‌ನಲ್ಲಿ ನಾಲ್ಕು ಎಕರೆ ಜಾಗ ನೀಡಿದ್ದು, ಅಲ್ಲಿ ₹ 18 ಕೋಟಿ ವೆಚ್ಚದಲ್ಲಿ ಕೆಎಲ್‌ಇ ಶಾಲೆಯ ಕಟ್ಟಡ ಪ್ರಾರಂಭಿಸಲಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT