ಸೋಮವಾರ, ಮೇ 16, 2022
24 °C

ತೈಲ ಬೆಲೆ ಏರಿಕೆ: ಸೌದೆ ಒಲೆಯಲ್ಲಿ ಚಹಾ ಮಾಡಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌ ಮತ್ತು ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇರುವುದನ್ನು ಖಂಡಿಸಿ ಸಂಗೊಳ್ಳಿರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್‌ ಭವನದ ಆವಣರಣದಲ್ಲಿ ಕಾರ್ಯಕರ್ಯರು ಸೌದೆ ಒಲೆಯಲ್ಲಿ ಚಹಾ ತಯಾರಿಸಿ ವಿನೂತನವಾಗಿ ಗುರುವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದಾಗಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಜನರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಗಳಿಕೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಆರ್ಥಿಕವಾಗಿ ನೆರವಾಬೇಕಿದ್ದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬರೆ ಎಳೆದಿದೆ.  ಇದು ಖಂಡನೀಯ. ಕಡು ಬಡವರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈ ದುರಾಡಳಿತ ಸರ್ಕಾರವನ್ನು ಕಿತ್ತೆಸೆಯಬೇಕು’ ಎಂದು ಕಿಡಿಕಾರಿದರು.

ಬಳಿಕ ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದಿಂದ ಆಯೋಜಿಸಿದ್ದ ಸೈಕಲ್ ಜಾಥಾಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಅಲ್ಲಿಂದ ರಾಣಿ ಚನ್ನಮ್ಮ ವೃತ್ತದವರೆಗೆ ನಡೆದ ಜಾಥಾದಲ್ಲಿ ನೂರಕ್ಕೂ ಹೆಚ್ಚು ಮಂದಿ ಸೇರಿದ್ದರು.

‘ಬೆಲೆ ಏರಿಕೆ ವಿರುದ್ಧ ಪಕ್ಷದಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ಜನಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಈ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ವೈಫಲ್ಯಗಳ ಬಗ್ಗೆ ಬಿಜೆಪಿ ಶಾಸಕರೇ ಮಾತನಾಡುತ್ತಿದ್ದಾರೆ. ಆಡಳಿತ ನಡೆಸಲು ಬಿಜೆಪಿ ಅಸಮರ್ಥವಾಗಿದೆ’ ಎಂದು ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ನೇತೃತ್ವದ ಸರ್ಕಾರವಿದ್ದಾಗ ಅಗತ್ಯ ವಸ್ತುಗಳು ಮತ್ತು ಅಡುಗೆ ಅನಿಲ ಸಿಲಿಂಡರ್ ದರ ಎಷ್ಟಿತ್ತು, ಈಗ ಎಷ್ಟಾಗಿದೆ ಎನ್ನುವುದನ್ನು ಜನರು ಅರಿಯಬೇಕು. ಕನಸುಗಳನ್ನು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಜನರಿಗೆ ಹೇಗೆ ಬರೆ ಎಳೆಯುತ್ತಿದೆ ಎಂಬ ಬಗ್ಗೆ ಭಿತ್ತಿಪತ್ರಗಳನ್ನು ಹಂಚಿ ತಿಳಿಸಲಾಗುತ್ತಿದೆ’ ಎಂದರು.

‘ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಕ್ರೆಡಿಟ್ ಪಾಲಿಟಿಕ್ಸ್‌ ಮಾಡುವುದು ಅಗತ್ಯವಿಲ್ಲ. ಅದು ನಮಗೆ ಗೊತ್ತೂ ಇಲ್ಲ. ಅದೇನಿದ್ದರೂ ಬಿಜೆಪಿಯವರ ಕೆಲಸ’ ಎಂದು ಹೇಳಿದರು.

ಶಾಸಕರಾದ ಮಹಾಂತೇಶ ಕೌಜಲಗಿ, ಡಾ.ಅಂಜಲಿ ನಿಂಬಾಳಕರ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಮಹಿಳಾ ಘಟಕದ ಅಧ್ಯಕ್ಷ ಜಯಶ್ರೀ ಮಾಳಗಿ, ಮುಖಂಡರಾದ ಸುನೀಲ ಹನುಮಣ್ಣವರ, ಬಾಬಾಸಾಹೇಬ ಪಾಟೀಲ, ಅರುಣ ಕಟಾಂಬಳೆ, ಕುಮಾರ ಹುಣಶ್ಯಾಳ, ಕಲ್ಲಪ್ಪ ವಕ್ಕಾರ, ಆಯಿಷಾ ಸನದಿ, ಬಾಳೇಶ ದಾಸನಟ್ಟಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು