ಸೋಮವಾರ, ಮೇ 23, 2022
30 °C

ಬೆಳಗಾವಿ: ಲಕ್ಷ್ಮಿ ಹೆಬ್ಬಾಳಕರ ಸಹೋದರನಿಗೆ ಕಾಂಗ್ರೆಸ್ ಟಿಕೆಟ್‌- ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಚನ್ನರಾಜ ಹಟ್ಟಿಹೊಳಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಲು ವರಿಷ್ಠರು ಹಾಗೂ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದೇವೆ. ಅಧಿಕೃತವಾಗಿ ಪ್ರಕಟವಾದ ನಂತರ, ನ.22ರಂದು ಅವರು ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಜಿಲ್ಲೆಯ ಯಮಕನಮರಡಿಯ ಹುಣಸಿಕೊಳ್ಳ ಮಠದ ಸಮುದಾಯ ಭವನದಲ್ಲಿ ಬುಧವಾರ ನಡೆದ ಯಮಕನಮರಡಿ ಮತಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಒಂದು ಸ್ಥಾನಕ್ಕಾಗಿ ಮಾತ್ರ ಸ್ಪರ್ಧಿಸಲು ಪಕ್ಷ ತೀರ್ಮಾನಿಸಿದೆ. ಗೆಲ್ಲುವ ಅವಕಾಶವೂ ಇದೆ’ ಎಂದರು.

‘ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಾಲ್ಕೂವರೆ ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದರೂ ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕಾಯಿತು. ಮತಗಳ ವಿಭಜನೆ ಆಗ ಕಾರಣವಾಯಿತು. ಹೀಗಾಗಿ, ಈ ಬಾರಿ ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸುತ್ತಿದ್ದೇವೆ. 3 ಸಾವಿರಕ್ಕಿಂತ ಹೆಚ್ಚು ಮತಗಳನ್ನು (‍ಪ್ರಥಮ ಪ್ರಾಶಸ್ತ್ಯ) ಪಡೆದರೆ ನಾವು ಜಯ ಗಳಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚನ್ನರಾಜ, ಕೆಪಿಸಿಸಿ ವಕ್ತಾರೆಯೂ ಆಗಿರುವ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ.

ಮತ ವಿಭಜನೆ: ಇದಕ್ಕೂ ಮುನ್ನ ಬೆಳಗಾವಿಯಲ್ಲಿ ಮಾತನಾಡಿದ್ದ ಸತೀಶ, ‘ಈ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮತ ವಿಭಜನೆ ಆಗುವ ಸಾಧ್ಯತೆ ಇದೆ’ ಎಂದರು.

‘ಲಖನ್‌ ಸದ್ಯ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಅವರು ನಮ್ಮೊಂದಿಗೆ ಇಲ್ಲ. ಯಾರ‍್ಯಾರು ಸ್ಪರ್ಧಿಸುತ್ತಾರೆ ಎನ್ನುವುದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನ.23ರ ನಂತರ ಸ್ಪಷ್ಟವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

ಮಹಾನಗರಪಾಲಿಕೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯದಿರುವ ಕುರಿತು ಬಿಡುಗಡೆ ಮಾಡಿರುವ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಿಡಿಯೊದಲ್ಲಿ ನಾನು ಯಾರ ಹೆಸರನ್ನೂ ಪ್ರಸ್ತಾ‍ಪಿಸಿಲ್ಲ. ನೋವನ್ನು ಹೇಳಿದ್ದೇನೆ. ಪದೇ ಪದೇ ಹೀಗಾದರೆ ಪಕ್ಷ ಕಟ್ಟುವುದು ಕಷ್ಟ. ನೋಡಿದ್ದು, ಕೇಳಿದ್ದನ್ನು ಮಾತನಾಡಿದ್ದೇನೆ. ಪಾಲಿಕೆಯಲ್ಲಿ ಇನ್ನೂ 10 ಸ್ಥಾನ ಗೆಲ್ಲಬಹುದಿತ್ತು. ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಇನ್ನೂ 10ಸಾವಿರ ಮತ ಗಳಿಸಬಹುದಿತ್ತು. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲಿನ ಬೆಳವಣಿಗೆಗಳನ್ನು, ವೀಕ್ಷಕರು ಸಹ ಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು