ಚಿಕ್ಕೋಡಿ: ‘ಕಳೆದ ಎರಡು ವರ್ಷಗಳಲ್ಲಿ ವಾಯವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ₹30 ಕೋಟಿ ಮೊತ್ತದಲ್ಲಿ 171 ಶಾಲಾ ಕೊಠಡಿ, ತಲಾ ₹50 ಲಕ್ಷ ಅನುದಾನದಲ್ಲಿ 3 ಪಿಯು ಕಾಲೇಜು ಕಟ್ಟಡಗಳು ನಿರ್ಮಾಣವಾಗುತ್ತಿವೆ’ ಎಂದು ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಹೇಳಿದರು.
ಪಟ್ಟಣದ ಹೊರ ವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಕ್ಕೋಡಿ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೂರ, ಚಿಕ್ಕೋಡಿ ಹಾಗೂ ಖಡಕಲಾಟದಲ್ಲಿ ಪಬ್ಲಿಕ್ ಶಾಲೆ ತೆರೆಯಲು ಉದ್ದೇಶಿಸಿದ್ದು, ಈಗಾಗಲೇ ಕೆರೂರ ಗ್ರಾಮದ ಪಬ್ಲಿಕ್ ಶಾಲೆಗೆ ₹2.5 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ‘ಜನಗಣತಿ, ಮತದಾರರ ನೋಂದಣಿ ಸೇರಿದಂತೆ ಶಿಕ್ಷಕರ ಬಾಹ್ಯ ಕೆಲಸದ ಹೊರೆ ಕಡಿಮೆ ಮಾಡಿ ಕಲಿಕೆಯೆಲ್ಲಿ ತೊಡಗಿಸಿಕೊಳ್ಳುವ ನಿಯಮಗಳನ್ನು ಶೀಘ್ರದಲ್ಲಿಯೇ ಜಾರಿಗೆ ತರಲು ನಿರ್ಧರಿಸಲಾಗುವುದು’ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಾಯವ್ಯ ಶಿಕ್ಷಕರ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಪ್ರೌಢ ಶಾಲೆಗಳಿಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಲ್ಯಾಪಟಾಪ್ ಗಳನ್ನು ವಿತರಿಸಿದರು. ಬೆಳಗಾವಿ ಜಿಲ್ಲಾ ವ್ಯಾಪ್ತಿಯ 7 ಶಾಲೆಗಳಿಗೆ 17 ಕೊಠಡಿಗಳ ಮಂಜೂರಾತಿ ಆದೇಶ ಪ್ರತಿ ನೀಡಿದರು. ಚಿಕ್ಕೋಡಿ ಶೈಕ್ಷಣಿ ಜಿಲ್ಲಾ ಮಟ್ಟದಲ್ಲಿ ನಿವೃತ್ತರಾದ ಶಿಕ್ಷಕರ ಸನ್ಮಾನ ಹಾಗೂ 2024ನೇ ಸಾಲಿನಲ್ಲಿ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಡಿಡಿಪಿಐ ಬಿ.ಎ.ಮೇಕನಮರಡಿ, ಡಿಡಿಪಿಯು ಪಾಂಡುರಂಗ ಭಂಡಾರಿ, ತಹಶೀಲ್ದಾರ್ ಚಿದಂಬರ ಕುಲಕರ್ಣಿ, ಪುರಸಭೆ ಸದಸ್ಯರಾದ ರಾಮಾ ಮಾನೆ, ಗುಲಾಬಹುಸೇನ ಬಾಗವಾನ, ಸಾಬೀರ ಜಮಾದಾರ, ಬಾಹುಬಲಿ ಲಕ್ಕನ್ನವರ, ಜಿ.ಎಂ.ಕಾಂಬಳೆ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.